ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಡೇ ಹಗರಣ: ತ್ವರಿತ ತನಿಖೆಗೆ ತನಿಖಾ ಸಂಸ್ಥೆಗಳಿಗೆ ಎಸ್.ಆರ್. ಹಿರೇಮಠ ಪತ್ರ

Last Updated 22 ಡಿಸೆಂಬರ್ 2020, 8:56 IST
ಅಕ್ಷರ ಗಾತ್ರ

ಬೆಂಗಳೂರು: ಕಾಫಿ‌ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಕಂಪನಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣದ ಕುರಿತು ತ್ವರಿತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ‌ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ‌ ಎಸ್.ಆರ್. ಹಿರೇಮಠ ಅವರು ವಿವಿಧ ತನಿಖಾ ಸಂಸ್ಥೆಗಳಿಗೆ ಪತ್ರ ಬರೆದಿದ್ದಾರೆ.

ಸಿಬಿಐ, ಜಾರಿ‌ ನಿರ್ದೇಶನಾಲಯ, ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್ ಎಫ್ಐಒ), ಸೆಬಿ, ಕಪ್ಪು ಹಣ ಕುರಿತ ವಿಶೇಷ ತನಿಖಾ ತಂಡ (ಎಸ್ ಐಟಿ), ಲೋಕಪಾಲ, ಕೇಂದ್ರೀಯ ವಿಚಕ್ಷಣ ದಳ (ಸಿವಿಸಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ನವೆಂಬರ್ 25ರಂದು ಪತ್ರ ಬರೆದಿದ್ದಾರೆ.

ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್. ಹಿರೇಮಠ, 'ಕಾಫಿ ಡೇ ಸಾರ್ವಜನಿಕರಿಂದ ಷೇರು ಹಣ ಸಂಗ್ರಹಿಸಿದ್ದ ಸಂಸ್ಥೆ. ಅದರ ಮೂಲಕ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆದಿದೆ. ಈ ಕುರಿತು ತ್ವರಿತವಾಗಿ ತನಿಖೆ ನಡೆಸುವಂತೆ ಪತ್ರದ ಮೂಲಕ ಒತ್ತಾಯಿಸಿದ್ದೇನೆ. ಪ್ರಧಾನಿ ಮತ್ತು ಕೇಂದ್ರ ಹಣಕಾಸು ಸಚಿವರಿಗೂ ಪತ್ರ ಬರೆದಿದ್ದೇನೆ' ಎಂದರು.

ಕಾಫಿ ಡೇ ಕಂಪನಿಯಲ್ಲಿ ₹ 3,535 ಕೋಟಿ‌ ಮೊತ್ತದ ಹಗರಣ ನಡೆದಿರುವುದ‌ನ್ನು ಕಂಪನಿ‌ ನಡೆಸಿದ ಆಂತರಿಕ ತನಿಖೆ ಖಚಿತಪಡಿಸಿದೆ. ವಿವಿಧ ಬ್ಯಾಂಕ್‌ಗಳಿಂದ‌ ₹ 3,000 ಕೋಟಿಗೂ ಹೆಚ್ಚು ಸಾಲ ಪಡೆದು ವಂಚಿಸಲಾಗಿದೆ. ಹಗರಣದ ಸಮಗ್ರ ಸಂಗತಿ ಹೊರ ಬರಬೇಕಾದರೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಕಂಪನಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಸಾರ್ವಜನಿಕರಿಗೆ‌ ಮಾಹಿತಿ‌ ನೀಡುವಂತೆ ಕಾಫಿ‌ ಡೇ ಎಂಟರ್ ಪ್ರೈಸಸ್ ಲಿಮಿಟೆಡ್‌ ಅಧ್ಯಕ್ಷರಾಗಿರುವ ಎಸ್.ವಿ. ರಂಗನಾಥ್ ಅವರಿಗೂ ಪತ್ರ ಬರೆಯಲಾಗಿದೆ. ಹಗರಣಕ್ಕೆ ಸಂಬಂಧಿಸಿದಂತೆ ವಿ.ಜಿ. ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ, ನಿತಿನ್ ಭಾಗಮನೆ, ಬಾಲರಾಜ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತು ಅವರ ಕುಟುಂಬದ ಇತರ ಸದಸ್ಯರ ವಿರುದ್ಧ ತನಿಖೆ‌ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಫಿ ಡೇ ಮುಖ್ಯಸ್ಥರಾಗಿದ್ದ ಸಿದ್ಧಾರ್ಥ ಅವರು ಸುಮಾರು ₹ 60,000 ಕೋಟಿ ಮೊತ್ತದ ಷೇರು ಮಾರುಕಟ್ಟೆ ಹಗರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ಈ ಕುರಿತು ಸಿಬಿಐ ತನಿಖೆ ಆರಂಭವಾಗಿದ್ದು, ಯಾವುದೇ ಪ್ರಗತಿಯಾಗಿಲ್ಲ. ತನಿಖೆಯನ್ನು ಚುರುಕುಗೊಳಿಸುವಂತೆಯೂ ಪತ್ರದಲ್ಲಿ ಒತ್ತಾಯಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT