ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಪಿ 3ನೇ ಹಂತ: ಕಣ್ಣೀರಿಟ್ಟ ಪಾಟೀಲ

ಮೂರು ವರ್ಷ ತಲಾ ₹ 25 ಸಾವಿರ ಕೋಟಿ ಅನುದಾನ ನೀಡುವಂತೆ ಪರಿಷತ್‌ನಲ್ಲಿ ಆಗ್ರಹ
Last Updated 25 ಸೆಪ್ಟೆಂಬರ್ 2020, 21:50 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತರ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ನೀರುಣಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಮೂರನೇ ಹಂತದ ಕಾಮಗಾರಿಗೆ ಹಣ ಮೀಸಲಿಟ್ಟು, ಯೋಜನೆ ಪೂರ್ಣಗೊಳಿಸಲು ಸರ್ಕಾರಗಳು ವಿಫಲವಾಗಿದ್ದರಿಂದ ಆ ಭಾಗದ ರೈತರು ಕಣ್ಣೀರು ಸುರಿಸುತ್ತಿದ್ದಾರೆ’ ಎಂದು ಹೇಳುತ್ತಾ ಭಾವುಕರಾದ ವಿರೋಧ ಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಅವರು ಕಣ್ಣೀರಿಟ್ಟ ಪ್ರಸಂಗ ವಿಧಾನಪರಿಷತ್‌ನಲ್ಲಿ ಶುಕ್ರವಾರ ನಡೆಯಿತು.

ವಿಷಯ ಪ್ರಸ್ತಾಪಿಸಿದ ಪಾಟೀಲ, ಜಲಸಂಪನ್ಮೂಲ ಸಚಿವರು ಮತ್ತು ಇಲಾಖೆ ಅಧಿಕಾರಿಗಳು ಸದನದಲ್ಲಿ ಉಪಸ್ಥಿತರಿಲ್ಲದಿರುವುದಕ್ಕೆ ಆರಂಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ವಿರೋಧ ಪಕ್ಷದ ಸದಸ್ಯರು ಪಾಟೀಲರ ಬೆಂಬಲಕ್ಕೆ ನಿಂತರು. ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸಮಾಧಾನಪಡಿಸಿದ ಬಳಿಕ ಮಾತು ಮುಂದುವರಿಸಿದರು.

‘ಈ ಯೋಜನೆಗೆ ನಿರ್ಣಯ ಕೈಗೊಂಡು 10 ವರ್ಷ ಕಳೆದಿದೆ. ಈವರೆಗೂ ಯಾವುದೇ ಬೆಳವಣಿಗೆ ಆಗಿಲ್ಲ. ನಾನು ಹೃದಯದಿಂದ ಮಾತನಾಡುತ್ತಿದ್ದೇನೆ. ನಾಲಿಗೆಯ ತುದಿಯಿಂದ ಅಲ್ಲ. ನಮ್ಮ ಸಹನೆ, ತಾಳ್ಮೆಗೂ ಮಿತಿಯಿದೆ. ಎಲ್ಲವೂ ಒಡೆದು ಹೋಗುವ ದಿನ ಬರುತ್ತಿದೆ. ಅನುದಾನ ಸಿಗುತ್ತಿಲ್ಲ’ ಎಂದರು.

‘ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ವಹಿಸಿದ ಸಂದರ್ಭದಲ್ಲಿ ಯೋಜನೆಗೆ ಹೇಗಾದರೂ ಅನುದಾನ ಕೊಡಿ ಎಂದು ಮನವಿ ಮಾಡಿದ್ದೆ. ಆದರೆ, ಅದಿನ್ನೂ ಆಗಿಲ್ಲ. ₹ 17 ಸಾವಿರ ಕೋಟಿಯ ಯೋಜನಾ ಮೊತ್ತ 2017ರಲ್ಲಿ ₹ 51 ಸಾವಿರ ಕೋಟಿಗೆ ಏರಿಕೆಯಾಗಿತ್ತು. ಈಗ ₹ 70 ಸಾವಿರ ಕೋಟಿಯಿಂದ ₹ 75 ಸಾವಿರ ಕೋಟಿಗೆ ಏರಿಕೆ ಆಗಬಹುದು’ ಎಂದರು.

‘ಯೋಜನೆಗೆ ಬಜೆಟ್‌ನಲ್ಲಿ ಒಂದು ರೂಪಾಯಿ ಕೂಡ ಅನುದಾನ ನೀಡಿಲ್ಲ. ಯೋಜನೆ ಅನುಷ್ಠಾನಕ್ಕೆ ಅಗತ್ಯವಾದ ಹುದ್ದೆಗಳನ್ನೂ ಭರ್ತಿ ಮಾಡುತ್ತಿಲ್ಲ. ಯೋಜನೆ ಅನುಷ್ಠಾನ ಮಾಡುವುದಿಲ್ಲ ಎಂದಾದರೆ ಆ ಭಾಗದ ನಮ್ಮನ್ನೆಲ್ಲಾ ಕರೆದುಕೊಂಡು ಕೃಷ್ಣಾ ಜಲಾಶಯದಲ್ಲಿ ಮುಳುಗಿಸಿಬಿಡಿ’ ಎಂದೂ ಭಾವುಕರಾದರು.

ಬಿಜೆಪಿಯ ರವಿಕುಮಾರ್, ಕಾಂಗ್ರೆಸ್‌ನ ಬಸವರಾಜ ಇಟಗಿ, ಪ್ರಕಾಶ್ ರಾಥೋಡ್, ಆರ್.ಬಿ. ತಿಮ್ಮಾಪೂರ ಕೂಡಾ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT