ಶುಕ್ರವಾರ, ಜೂನ್ 25, 2021
21 °C

ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಅದಲು-ಬದಲು, ನೋಂದಣಿ ಸಂಖ್ಯೆ ತಿದ್ದುಪಡಿ!

. Updated:

ಅಕ್ಷರ ಗಾತ್ರ : | |

Prajavani

ತ್ಯಾವಣಿಗೆ (ದಾವಣಗೆರೆ ಜಿಲ್ಲೆ): ಮೌಲ್ಯಮಾಪನದ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ಅದಲು ಬದಲು ಮಾಡಿ, ನೋಂದಣಿ ಸಂಖ್ಯೆಯನ್ನೂ ತಿದ್ದುಪಡಿ ಮಾಡಿರುವ ಪ್ರಕರಣ ನಡೆದಿದೆ.

ಸಮೀಪದ ಬೆಳಲಗೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ಕೆ.ಎಚ್‌, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉಳಿದ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದರೂ ಸಮಾಜ ವಿಜ್ಞಾನದಲ್ಲಿ 14 ಅಂಕ ಬಂದಿದ್ದರಿಂದ ಅನುತ್ತೀರ್ಣಳಾಗಿದ್ದಾಳೆ.

‘ಪುತ್ರಿಗೆ ಕನ್ನಡದಲ್ಲಿ 120, ಇಂಗ್ಲಿಷ್‌ನಲ್ಲಿ 55, ಹಿಂದಿ–91, ಗಣಿತ–62, ವಿಜ್ಞಾನದಲ್ಲಿ 50 ಅಂಕ ಬಂದಿವೆ. ಸಮಾಜ ವಿಜ್ಞಾನದಲ್ಲಿ 14 ಅಂಕ ಬಂದಿತ್ತು. ಶಂಕೆಯಿಂದ ಉತ್ತರ ಪತ್ರಿಕೆ ನಕಲು ಪ್ರತಿಗೆ ಅರ್ಜಿ ಹಾಕಿದ್ದೆವು. ನಕಲು ಪ್ರತಿ ನೋಡಿದ್ದರಿಂದ ಲೋಪ ಗೊತ್ತಾಗಿದೆ. ಫಲಿತಾಂಶ ನೋಡಿ ಮಗಳು ಖಿನ್ನತೆಗೆ ಒಳಗಾಗಿದ್ದಾಳೆ. ಶಿಕ್ಷಣ ಸಚಿವರು ನ್ಯಾಯ ದೊರಕಿಸಿಕೊಡಬೇಕು' ಎಂದು ಅಕ್ಷತಾಳ ತಂದೆ ಹನುಮಂತಪ್ಪ ಬೇಸರ ವ್ಯಕ್ತಪಡಿಸಿದರು.

‘ನೋಂದಣಿ ಸಂಖ್ಯೆ ತಿದ್ದಿರುವುದು ನಕಲು ಪ್ರತಿಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಉತ್ತರ ಪತ್ರಿಕೆಯೇ ನನ್ನದಲ್ಲ. ಸಮಾಜ ವಿಜ್ಞಾನದಲ್ಲಿ 80 ಅಂಕ ಬರಬೇಕಿತ್ತು’ ಎಂದು ಅಕ್ಷತಾ ಅಳಲು ತೋಡಿಕೊಂಡಳು.

ಅಕ್ಷತಾ ಅವರ ಉತ್ತರ ಪತ್ರಿಕೆ ನೋಂದಣಿ ಸಂಖ್ಯೆ ತಿದ್ದುಪಡಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮುಖ್ಯ ಶಿಕ್ಷಕ ಕಮಲಾಕ್ಷ ಸದಾಶಿವ ಶೇಟ್ ಪ್ರತಿಕ್ರಿಯಿಸಿದರು.

*

ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಬದಲಾಗಿರುವ ಬಗ್ಗೆ ಪರಿಶೀಲಿಸಲು ಈಗಾಗಲೇ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ಕಳುಹಿಸಲಾಗಿದೆ.
-ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ, ಚನ್ನಗಿರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು