ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ l ಉತ್ತರ ಪತ್ರಿಕೆಯ ಹಾಳೆಗಳೇ ಬದಲು!

ಲಿಖಿತ ದೂರು ಸಲ್ಲಿಸಿದರೆ ಕ್ರಮ: ಬಿಇಒ ರುಕ್ಸಾನಾ
Last Updated 17 ಆಗಸ್ಟ್ 2020, 18:44 IST
ಅಕ್ಷರ ಗಾತ್ರ
ADVERTISEMENT
"ಜಿ.ಎಸ್. ಅಶ್ವಿನಿ ಅವರ ಉತ್ತರ ಪತ್ರಿಕೆಗೆ ಸೇರಿಸಿರುವ ಬೇರೆಯವರ ಕೈ ಬರಹದ ಉತ್ತರ ಪತ್ರಿಕೆಯ ಪ್ರತಿ"

ಶ್ರೀರಂಗಪಟ್ಟಣ (ಮಂಡ್ಯ): ತಾಲ್ಲೂಕಿನ ತರೀಪುರ ಗ್ರಾಮದ ವಿನಾಯಕ ಪ್ರೌಢಶಾಲೆಯ ವಿದ್ಯಾರ್ಥಿನಿ ಜಿ.ಎಸ್‌.ಅಶ್ವಿನಿ ಅವರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಹಾಳೆಗಳು ಅದಲು ಬದಲಾಗಿದ್ದಾಗಿ ಶಾಲೆಯ ಮುಖ್ಯಶಿಕ್ಷಕರು ದೂರಿದ್ದಾರೆ.

ಈ ಬಾರಿ ಪರೀಕ್ಷೆಯ ಇಂಗ್ಲಿಷ್‌ ವಿಷಯದಲ್ಲಿ 89 ಅಂಕಗಳನ್ನು ಪಡೆದಿರುವ ಅಶ್ವಿನಿಗೆ, ಕನ್ನಡದಲ್ಲಿ 125ಕ್ಕೆ ಕೇವಲ 4 ಅಂಕಗಳು ಬಂದಿವೆ. ಸಮಾಜವಿಜ್ಞಾನದಲ್ಲಿ 7, ಹಿಂದಿ 33, ಗಣಿತ 48 ಹಾಗೂ ವಿಜ್ಞಾನದಲ್ಲಿ 51 ಅಂಕಗಳು ಸಿಕ್ಕಿವೆ. ತರಗತಿಯಲ್ಲಿ ಪ್ರತಿಭಾವಂತೆ ಎನಿಸಿಕೊಂಡಿದ್ದ ಈ ವಿದ್ಯಾರ್ಥಿನಿಗೆ ತೀರಾ ಕಡಿಮೆ ಅಂಕಗಳು ಬಂದಿದ್ದರಿಂದ ಅನುಮಾನಗೊಂಡು ಉತ್ತರ ಪತ್ರಿಕೆಗಳ ನಕಲು ಪ್ರತಿಗೆ ಅರ್ಜಿ ಹಾಕಿ, ತರಿಸಿ ನೋಡಿದಾಗ ಉತ್ತರ ಪತ್ರಿಕೆಯ ಬಹುತೇಕ ಹಾಳೆಗಳು ಬದಲಾಗಿರುವುದು ತಿಳಿದು ಬಂದಿದೆ.

ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ ಉತ್ತರ ಪತ್ರಿಕೆಗಳ ಮೊದಲ ಪುಟ ಹೊರತುಪಡಿಸಿ ಉಳಿದ ಪುಟಗಳನ್ನು ಬದಲಿಸಲಾಗಿದೆ. ಹಿಂದಿ ಪತ್ರಿಕೆಯ ಕೆಲವು ಪುಟಗಳು ಬದಲಾಗಿವೆ. ಅಶ್ವಿನಿ ಅವರ ಉತ್ತರ ಪತ್ರಿಕೆಗಳ ಹಾಳೆಗಳನ್ನು ತೆಗೆದು ಬೇರೆಯವರ ಉತ್ತರ ಪತ್ರಿಕೆಯ ಹಾಳೆಗಳನ್ನು ಸೇರಿಸಲಾಗಿದೆ ಎಂದು ಮುಖ್ಯಶಿಕ್ಷಕ ನಂಜೇಗೌಡ ತಿಳಿಸಿದ್ದಾರೆ.

ಜಿ.ಎಸ್. ಅಶ್ವಿನಿ ಅವರ ಉತ್ತರ ಪತ್ರಿಕೆಗೆ ಸೇರಿಸಿರುವ ಬೇರೆಯವರ ಕೈ ಬರಹದ ಉತ್ತರ ಪತ್ರಿಕೆಯ ಪ್ರತಿ

‘ಅಶ್ವಿನಿ ಶಾಲೆಗೇ ಪ್ರತಿಭಾವಂತೆ. ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿರುವುದು ಅಚ್ಚರಿ ಮೂಡಿಸಿದೆ. ಎಲ್ಲಿ ಲೋಪವಾಗಿದೆ ಎಂಬುದನ್ನು ಪರೀಕ್ಷಾ ಮಂಡಳಿ ತಿಳಿಸಬೇಕು. ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಬೇಕು’ ಎಂದು ಪೋಷಕರು ಒತ್ತಾಯಿಸಿದ್ದಾರೆ.

‘ವಿದ್ಯಾರ್ಥಿನಿಯ ಉತ್ತರ ಪತ್ರಿಕೆಗಳ ಹಾಳೆಗಳು ಬದಲಾಗಿದ್ದಾಗಿ ಆ ಶಾಲೆಯ ಮುಖ್ಯ ಶಿಕ್ಷಕರು ದೂರವಾಣಿ ಕರೆ ಮೂಲಕ ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷಾಮಂಡಳಿಯಲ್ಲಿ ವಿಚಾರಿಸಲು ಹೇಳಿದ್ದೇನೆ. ವಿದ್ಯಾರ್ಥಿನಿ ನಮ್ಮ ಕಚೇರಿಗೆ ಲಿಖಿತ ದೂರು ನೀಡಿದರೆ ಪರೀಕ್ಷಾ ಮಂಡಳಿಗೆ ನಮ್ಮ ಕಡೆಯಿಂದ ದೂರು ಸಲ್ಲಿಸಿ. ಕಾರಣ ಹುಡುಕಲಾಗುವುದು’ ಎಂದು ಬಿಇಒ ರುಕ್ಸಾನಾ ನಾಜನೀನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT