ಮಂಗಳವಾರ, ಜನವರಿ 18, 2022
23 °C
’ಪ್ರಜಾವಾಣಿ’ ವರದಿ ಫಲಶ್ರುತಿ

ಹಾಸ್ಟೆಲ್‌ಗಳಿಗೆ ಆಹಾರ ಸಾಮಗ್ರಿ ಪೂರೈಕೆ ಲೋಪ: ‘ಇಬ್ಬರ ಅಮಾನತು: ಎಸಿಬಿ ತನಿಖೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ಉಡುಪಿ: ‘ತುಮಕೂರು ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ವಿದ್ಯಾರ್ಥಿನಿಲಯಗಳಿಗೆ ಆಹಾರ ಪೂರೈಕೆಯಲ್ಲಿ ಆಗಿರುವ ಲೋಪಗಳಿಗೆ ಸಂಬಂಧಿಸಿದಂತೆ, ಇಲಾಖೆಯ ತುಮಕೂರು ಜಿಲ್ಲಾ ಅಧಿಕಾರಿ ಟಿ. ಸುಬ್ರಾ ನಾಯ್ಕ ಮತ್ತು ಕಚೇರಿ ವ್ಯವಸ್ಥಾಪಕ ವಿನೋದ್‌ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ‘ಹಿಂದುಳಿದವರ ಹಾಸ್ಟೆಲ್‌ ಟೆಂಡರ್‌ ಜಾಲ: ಏಲಕ್ಕಿಗೆ ಕೆ.ಜಿಗೆ ಕೇವಲ ₹ 20 !’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಈ ಕುರಿತು ಉಡುಪಿಯಲ್ಲಿ ಮಾತನಾಡಿದ ಸಚಿವರು, ‘ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಹಾಗೂ ಎಲ್ಲ ಪ್ರಕರಣಗಳನ್ನು ಎಸಿಬಿ ತನಿಖೆಗೆ ಒಳಪಡಿಸಲು ಸೂಚಿಸಿದ್ದೇನೆ. ಈ ಸಂಬಂಧ ಮುಖ್ಯಮಂತ್ರಿ ಜತೆಗೂ ಮಾತನಾಡಿದ್ದೇನೆ. ಶೀಘ್ರದಲ್ಲೇ ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಅಕ್ರಮ ನಡೆಯದಂತೆ ಕ್ರಮಕೈಗೊಳ್ಳಲಾಗುವುದು‘ ಎಂದು ತಿಳಿಸಿದ್ದಾರೆ.

‘ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಸುವಂತೆ ಈ ಹಿಂದೆಯೇ ಸೂಚಿಸಲಾಗಿದೆ. ಲೋಪವಾದರೆ ಇಲಾಖೆಯ ಜಿಲ್ಲಾ ಅಧಿಕಾರಿಗಳನ್ನು ನೇರ ಹೊಣೆ ಮಾಡಲಾಗುವುದು ಎಂದೂ ಎಚ್ಚರಿಕೆ ನೀಡಲಾಗಿದೆ. ಆಹಾರ ಸಾಮಗ್ರಿಯ ಪೂರೈಕೆಯಲ್ಲಿನ ಲೋಪವನ್ನು ಒಪ್ಪಲು ಸಾಧ್ಯ ಇಲ್ಲ. ಪ್ರಧಾನ ಕಾರ್ಯದರ್ಶಿ ನೀಡಿದ ಪ್ರಾಥಮಿಕ ವರದಿಯ ಶಿಫಾರಸಿನಂತೆ, ವಿಚಾರಣೆ ಕಾಯ್ದಿರಿಸಿ ಇಬ್ಬರನ್ನೂ ಅಮಾನತು ಮಾಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.

‘ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಅಂಶಗಳನ್ನೂ ಒಳಗೊಂಡಂತೆ ಸಮಗ್ರ ವಿಚಾರಣಾ ವರದಿಯನ್ನು 15 ದಿನಗಳ ಒಳಗೆ ಸಲ್ಲಿಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ವರದಿ ಕೊಡಿ: ರಶ್ಮಿ ಮಹೇಶ್ ಸೂಚನೆ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿನಿಲಯಗಳಲ್ಲಿ ಗುಣಮಟ್ಟದ ಆಹಾರವನ್ನು ಪಾರದರ್ಶಕವಾಗಿ ನೀಡುವ ವ್ಯವಸ್ಥೆ ಮತ್ತು ಅನುದಾನ ಸೋರಿಕೆ ತಪ್ಪಿಸಲು ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿರುವ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ‘ತಕ್ಷಣ ಈ ಸೂಚನೆಗಳು ಪಾಲನೆ ಆಗಬೇಕು. ಅಲ್ಲದೆ, ಆ ಬಗ್ಗೆ 10 ದಿನಗಳ ಒಳಗೆ ಸರ್ಕಾರಕ್ಕೆ ವರದಿ ನೀಡಬೇಕು’ ಎಂದು ಇಲಾಖೆಯ ಆಯುಕ್ತ ಪಿ. ವಸಂತಕುಮಾರ್‌ ಅವರಿಗೆ ಸೂಚಿಸಿದ್ದಾರೆ.

‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ‘ಹಿಂದುಳಿದವರ ಹಾಸ್ಟೆಲ್‌ ಟೆಂಡರ್‌ ಜಾಲ: ಏಲಕ್ಕಿಗೆ ಕೇವಲ ₹ 20!’ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೆ ಅವರು ಈ ಆದೇಶ ಹೊರಡಿಸಿದ್ದಾರೆ.

‘ವಿದ್ಯಾರ್ಥಿನಿಲಯದ ಬಾಗಿಲಿಗೆ ಗುತ್ತಿಗೆದಾರ ಆಹಾರ ಸಾಮಗ್ರಿ ಪೂರೈಸುವ ಭಾವಚಿತ್ರಗಳನ್ನು ಡಿಜಿಟಲ್‌ ಮಾದರಿಯಲ್ಲಿ ಸಂಗ್ರಹಿಸಿಡಬೇಕು. ಯಾವುದೇ ಕಾರಣಕ್ಕೂ ಮೇಲ್ವಿಚಾರಕರಿಗೆ ಆಹಾರ ಸಾಮಗ್ರಿ ಖರೀದಿಯ ಹೊಣೆ ವಹಿಸಬಾರದು. ವಸತಿನಿಲಯಗಳ ಬಾಗಿಲಿಗೆ ಆಹಾರ ಸಾಮಗ್ರಿ ಪೂರೈಸುವುದು  ಗುತ್ತಿಗೆದಾರರ ಜವಾಬ್ದಾರಿ. ಕನಿಷ್ಠ ಎರಡು ತಿಂಗಳಿಗೊಮ್ಮೆ ಮೇಲ್ವಿಚಾರಕರು, ತಾಲ್ಲೂಕು ಕಲ್ಯಾಣ ಅಧಿಕಾರಿಗಳು, ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆದಾರರ ಸಭೆಯನ್ನು ಆಯೋಜಿಸಬೇಕು. ಈ ವಿಷಯದಲ್ಲಿ ಲೋಪವಾದರೆ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿಯನ್ನು ಹೊಣೆ ಮಾಡಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಮುಂದೆ ಮೇಲ್ವಿಚಾರಕರು ಆಹಾರ ಪೂರೈಕೆಗಾಗಿ ಗುತ್ತಿಗೆದಾರರಿಗೆ ನೀಡುವ ಬೇಡಿಕೆ ಪಟ್ಟಿ, ಗುತ್ತಿಗೆದಾರ ಆಹಾರ ಸಾಮಗ್ರಿಯನ್ನು ವಿದ್ಯಾರ್ಥಿನಿಲಯದ ಬಾಗಿಲಿಗೆ ತಲುಪಿಸಿದ ದಿನಾಂಕ, ಸಮಯ, ವಾಹನ ಸಂಖ್ಯೆ, ತಲುಪಿಸಿದ ಕುರಿತು ದಾಖಲಿಸಿದ ಮಾಹಿತಿ, ಪ್ರತಿ ದಿನ ಹಾಲು ಸರಬರಾಜು, ವಾರಕ್ಕೆ ತರಕಾರಿ, ಹಣ್ಣು, ಮೊಟ್ಟೆ, ಕೋಳಿ ಮಾಂಸ ಸರಬರಾಜಿನ ಬೇಡಿಕೆ ಪಟ್ಟಿ, ಇತರ ಶೌಚಾಲಯ ಸ್ವಚ್ಚತೆಗೆ ವಸ್ತುಗಳ ಖರೀದಿ ಸೇರಿದಂತೆ ಇತರ ವೆಚ್ಚಗಳ ಮಾಹಿತಿಯನ್ನು ಕಡ್ಡಾಯವಾಗಿ ವಿದ್ಯಾರ್ಥಿನಿಲಯದ ಸೂಚನಾ ಫಲಕ ಅಥವಾ ಪ್ರವೇಶದ್ವಾರದ ಕೊಠಡಿಯ ಒಳಗಿನ ಗೋಡೆಯಲ್ಲಿ ಪ್ರದರ್ಶಿಸಬೇಕು ಎಂದೂ ಅವರು ಸೂಚಿಸಿದ್ದಾರೆ.

ಅಲ್ಲದೆ, ವಿದ್ಯಾರ್ಥಿನಿಲಯಗಳ ನಿರ್ವಹಣೆಗೆ ಮಂಜೂರಾದ ಮತ್ತು ಭರ್ತಿಯಾದ ಹುದ್ದೆಗಳು, ನಿಲಯಗಳ ಮೇಲ್ವಿಚಾರಕರ ವಿವರಗಳು, ವಿದ್ಯಾರ್ಥಿ ನಿಲಯಕ್ಕೆ ಮಂಜೂರಾದ, ದಾಖಲಾದ ಮತ್ತು ಹಾಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿನಿಲಯ ಇದ್ದರೆ, ಬಾಡಿಗೆಯ ಮಾಹಿತಿಗಳನ್ನೂ ಪ್ರದರ್ಶಿಸಬೇಕು  ಎಂದೂ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು