ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಿನ ನಗರಿಯಲ್ಲಿ ಕಂಚಿನ ಪ್ರತಿಮೆ

ಹಳೇ ಖಾಸಗಿ ಬಸ್‌ ನಿಲ್ದಾಣದ ವೃತ್ತದಲ್ಲಿ ಸ್ಕ್ವಾಡ್ರನ್‌ ಲೀಡರ್‌ ಅಜ್ಜಮಾಡ ಬಿ. ದೇವಯ್ಯ ಪ್ರತಿಮೆ ಲೋಕಾರ್ಪಣೆ
Last Updated 7 ಸೆಪ್ಟೆಂಬರ್ 2020, 12:46 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿಯು ಪ್ರತಿಮೆಗಳ ನಗರಿಯಾಗಿಯೂ ಬದಲಾಗುತ್ತಿದೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಹೆಸರನ್ನು ಸದಾ ನೆನಪಿಸುವ ಕೆಲಸಗಳು ನಡೆಯುತ್ತಿವೆ. ದೇಶಕ್ಕಾಗಿ ಹೋರಾಟ ನಡೆಸಿ, ಹುತಾತ್ಮರಾಗಿದ್ದ ಕೊಡಗಿನ ಸ್ಕ್ವಾಡ್ರನ್ ಲೀಡರ್‌ ಅಜ್ಜಮಾಡ ಬಿ. ದೇವಯ್ಯ ಅವರ ಕಂಚಿನ ಪ್ರತಿಮೆಯನ್ನು ಮಡಿಕೇರಿಯ ಹೃದಯ ಭಾಗವಾದ ಹಳೇ ಖಾಸಗಿ ಬಸ್ ‌ನಿಲ್ದಾಣದ ವೃತ್ತದಲ್ಲಿ ಸೋಮವಾರ ಲೋಕಾರ್ಪಣೆ ಮಾಡಲಾಯಿತು.

ಕೊಡವ ಮಕ್ಕಳ ಕೂಟ, ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಮೆಮೊರಿಯಲ್ ಟ್ರಸ್ಟ್ ಮತ್ತು ಅಜ್ಜಮಾಡ ಕುಟುಂಬ ಸಮಿತಿಯ ಆಶ್ರಯದಲ್ಲಿ ಪ್ರತಿಮೆ ಸ್ಥಾಪನೆಗೆ ಕೆಲವು ವರ್ಷಗಳ ಹಿಂದೆ ನಿರ್ಧರಿಸಲಾಗಿತ್ತು. ಸತತ ಎಂಟು ವರ್ಷಗಳ ಹೋರಾಟದ ಬಳಿಕ ಸೋಮವಾರ ಪ್ರತಿಮೆ ಲೋಕಾರ್ಪಣೆ ಮಾಡಲಾಯಿತು.

ಲೋಕಾರ್ಪಣೆ ಸಮಾರಂಭಕ್ಕೆ ನಿವೃತ್ತ ಸೇನಾಧಿಕಾರಿಗಳು, ಅಧಿಕಾರಿಗಳು, ಅಜ್ಜಮಾಡ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಸಾಕ್ಷಿಯಾದರು.

ಸೆ.7ರಂದು ದೇವಯ್ಯ ಅವರು ಹುತಾತ್ಮರಾಗಿ 55 ವರ್ಷಗಳು ತುಂಬಿದ್ದು, ಅಂದೇ ಪ್ರತಿಮೆ ಲೋಕಾರ್ಪಣೆಯೂ ನಡೆಯಿತು. ದೇವಯ್ಯ ಅವರ ಪತ್ನಿ ಸುಂದರಿ ಹಾಗೂ ಪುತ್ರಿಯರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಗಳೂರಿನ ಬಿಡದಿಯಲ್ಲಿರುವ ಶಿಲ್ಪಿ ಅಶೋಕ್ ಗುಡಿಗಾರ, ವಿಜಯ ಗುಡಿಗಾರರ ತಂಡವು ಕಂಚಿನ ಪ್ರತಿಮೆ ಕೆತ್ತನೆ ಮಾಡಿದ್ದರು ಆಕರ್ಷಕವಾಗಿದೆ.

ಪ್ರತಿಮೆ ಲೋಕಾರ್ಪಣೆಗೊಳಿಸಿ, ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ.ಕಾರ್ಯಪ್ಪ ಮಾತನಾಡಿ, ‘ಈ ವೃತ್ತಕ್ಕೆ ಅವರ ಹೆಸರನಿಟ್ಟು ಹಲವು ವರ್ಷಗಳ ಬಳಿಕ ಪ್ರತಿಮೆ ಸ್ಥಾಪನೆ ಮಾಡಿರುವುದು ಸಂತಸದ ವಿಚಾರ. ಅಜ್ಜಮಾಡ ಕುಟುಂಬವು ದೇವಯ್ಯ ಅವರ ಹೆಸರನ್ನು ಚಿರಸ್ಥಾಯಿ ಆಗಿಸುವ ಕೆಲಸ ಮಾಡಿದೆ. ಕೊಡಗು ಜಿಲ್ಲೆ ಇಬ್ಬರಿಗೆ ಮಹಾವೀರ ಚಕ್ರ ಪುರಸ್ಕಾರಗಳು ಲಭಿಸಿದ್ದು ಹೆಮ್ಮೆಯ ಸಂಗತಿ. ಮರಣೋತ್ತರವಾಗಿ ದೇವಯ್ಯ ಅವರಿಗೆ ನೀಡಲಾಗಿದೆ. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ ಅವರೂ ಈ ಪುರಸ್ಕಾರಕ್ಕೆ ಭಾಜರಾಗಿದ್ದಾರೆ ಎಂದು ಹೇಳಿದರು.

‘ನಾವೆಲ್ಲ ಇಂದು ಕೋವಿಡ್‌ ಕಾರಣದಿಂದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್‌ ವಿರುದ್ಧ ಹೋರಾಟ ನಡೆಸೋಣ’ ಎಂದು ಕಾರ್ಯಪ್ಪ ಕರೆ ನೀಡಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ಕೊಡವ ಮಕ್ಕಡ ಕೂಟ, ಅಜ್ಜಮಾಡ ಕುಟುಂಬಸ್ಥರು ಪ್ರತಿಮೆ ಸ್ಥಾಪನೆಗೆ ಸಾಕಷ್ಟು ಕಷ್ಟಪಟ್ಟಿದ್ದಾರೆ. ನಗರಸಭೆ ಮಾಜಿ ಸದಸ್ಯರ ಸಹಕಾರವನ್ನೂ ಸ್ಮರಿಸಬೇಕಿದೆ. ಕೊಡಗು ವೀರಸೇನಾನಿಗಳ ಬೀಡು. ಪ್ರತಿಮೆ ಅಥವಾ ಪುತ್ಥಳಿ ಸ್ಥಾಪನೆ ಕೆಲಸ ಉತ್ತಮವಾದದ್ದು ಎಂದು ಹೇಳಿದರು.

ಜನರಲ್‌ ತಿಮ್ಮಯ್ಯ ಹಾಗೂ ಫೀಲ್ಡ್‌ ಮಾರ್ಷಲ್‌ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ನಿವೃತ್ತ ಕರ್ನಲ್‌ ಕೆ.ಸುಬ್ಬಯ್ಯ ಮಾತನಾಡಿ, ‘ದೇವಯ್ಯ ಅವರು ಹುತಾತ್ಮರಾದ ಮೇಲೆ ಮಹಾವೀರ ಚಕ್ರ ಪುರಸ್ಕಾರ ನೀಡಿ ಗೌರವಿಸಿದೆ. ಬಿಬಿಸಿ ವರದಿಗಾರರೊಬ್ಬರು, ದೇವಯ್ಯ ಅವರ ಕೆಚ್ಚೆದೆಯ ಹೋರಾಟವನ್ನು ಬೆಳಕಿಗೆ ತಂದಿದ್ದರು. ಇಲ್ಲದಿದ್ದರು ಅವರ ಹೆಸರು ಕಣ್ಮರೆ ಆಗುತ್ತಿತ್ತು’ ಎಂದು ಹೇಳಿದರು.

ನಿವೃತ್ತ ಮೇಜರ್‌ ಬಿದ್ದಂಡ ನಂಜಪ್ಪ ಮಾತನಾಡಿ, ‘ತಮ್ಮ ಚಾಣಾಕ್ಷತನದಿಂದ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದು ಉರುಳಿಸಿದ್ದರು. ಈ ವೀರಗಾಥೆಯು 20 ವರ್ಷಗಳ ಬಳಿಕ ಬೆಳಕಿಗೆ ಬಂದಿತ್ತು. ದೇವಯ್ಯ ಅವರು ಕೊಡಗಿನ ಅಭಿಮನ್ಯು’ ಎಂದು ಹೊಗಳಿದರು

ಪ್ರೆಸ್‌ಕ್ಲಬ್‌ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕಳೆದ 8 ವರ್ಷದ ಹಿಂದೆಯೇ ದೇವಯ್ಯ ಅವರ ಪ್ರತಿಮೆ ಅನಾವರಣಗೊಳ್ಳಬೇಕಿತ್ತು. ಆದರೆ, ಕೆಲವು ಅಡ್ಡಿಆತಂಕಗಳು ಎದುರಾಗಿದ್ದವು. ಯಾವುದಕ್ಕೂ ಜಗ್ಗದೆ ಕೆಲಸ ಮಾಡಿದ್ದರ ಪರಿಣಾಮ ಈ ಸ್ಥಳದಲ್ಲಿ ಪ್ರತಿಮೆ ಲೋಕಾರ್ಪಣೆ ಆಗುತ್ತಿದೆ. ಈಗಲಾದರೂ ಪ್ರತಿಮೆ ಅನಾವರಣಗೊಂಡಿರುವುದು ನಿಜಕ್ಕೂ ಸಂತಸದ ವಿಷಯ. ದೇಶಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ ವೀರ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ. ಇಂತಹ ನಾಯಕರ ನೆನಪಿನಾರ್ಥ ಪ್ರತಿಮೆ ಅನಾವರಣಗೊಂಡಿದೆ ಎಂದು ಹೇಳಿದರು.

ಪ್ರತಿಮೆ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರಿಗೆ ಇದೇ ವೇಳೆ ವೈಯಕ್ತಿಕವಾಗಿ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಅವರು ₹ 25 ಸಾವಿರ ಚೆಕ್‌ ಹಸ್ತಾಂತರ ಮಾಡಿದರು.

ನಗರಸಭೆ ಆಯುಕ್ತ ಎಸ್.ವಿ.ರಾಮದಾಸ್ ಮಾತನಾಡಿ, ದೇಶಕ್ಕಾಗಿ ಪ್ರಾಣ ಸಮರ್ಪಣೆ ಮಾಡಿದ ಮಹಾನ್ ವ್ಯಕ್ತಿಯ ಪ್ರತಿಮೆ ಉದ್ಘಾಟಿಸಿದ್ದಾರೆ. ಇದು ಹೆಮ್ಮೆಯ ವಿಚಾರ. ಅಜ್ಜಮಾಡ ಬಿ.ದೇವಯ್ಯ ಅವರು ಜಿಲ್ಲೆಯ ಮತ್ತು ದೇಶದ ರತ್ನವಿದ್ದಂತೆ ಎಂದು ಹೇಳಿದರು.

ಇದೇ ಸಂದರ್ಭ ಅಜ್ಜಮಾಡ ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಬಿ.ಅಯ್ಯಪ, ಪ್ರತಿಮೆಯ ಶಿಲ್ಪಿ ಅಶೋಕ್ ಗುಡಿಗಾರ್, ಅಜ್ಜಮಾಡ ಸುಮನ್ ಅವರನ್ನು ಸನ್ಮಾನಿಸಲಾಯಿತು. ಕುಟುಂಬ ಸಮಿತಿಯ ಅಜ್ಜಮಡ ಲವ ಕುಶಾಲಪ್ಪ ಹಾಜರಿದ್ದರು.

ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರೂ ಪುಷ್ಪ ನಮನ ಸಲ್ಲಿಸಿದರು.

ಶತ್ರು ರಾಷ್ಟ್ರದ ಯುದ್ಧ ವಿಮಾನ ಹೊಡೆದುರುಳಿಸಿದ್ದ ದೇವಯ್ಯ: ಅಜ್ಜಮಾಡ ದೇವಯ್ಯ ಅವರು ವಿರಾಜಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಅಜ್ಜಮಾಡ ಕುಟುಂಬದ ಬೋಪಯ್ಯ ಹಾಗೂ ನೀಲಮ್ಮ ದಂಪತಿ ಪುತ್ರ.

1932ರ ಡಿ.24ರಂದು ಜನಿಸಿದ್ದರು. ದೇವಯ್ಯ ಅವರು, 1954 ಡಿ.6ರಂದು ಭಾರತೀಯ ವಾಯುಪಡೆಯ ಪೈಲಟ್ ಆಗಿ ನೇಮಕಗೊಂಡಿದ್ದರು. 1965ರ ಪಾಕಿಸ್ತಾನ – ಭಾರತದ ಯುದ್ಧದಲ್ಲಿ ಅಜ್ಜಮಾಡ ದೇವಯ್ಯ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ನಡೆಸಿ, ವಾಪಸ್‌ ಬರುವ ವೇಳೆ ಪಾಕಿಸ್ತಾನದ ಯುದ್ಧ ವಿಮಾನ ಹಿಂಬಾಲಿಸಿ ಬರುತ್ತಿತ್ತು. ದೇವಯ್ಯ ಅವರು ಆಗ ಪಾಕ್ ಸೈನಿಕರಿಂದ ತಪ್ಪಿಸಿಕೊಳ್ಳುವ ಎಲ್ಲ ಅವಕಾಶವಿತ್ತು.

ಆದರೂ, ಅವರು ಭಾರತದ ಉಳಿದ ವಿಮಾನಗಳ ರಕ್ಷಣೆಗಾಗಿ ತನ್ನ ವಿಮಾನದೊಂದಿಗೆ ಕಾದಾಟಕ್ಕೆ ನಿಂತು, ತಮ್ಮ ದುರ್ಬಲ ವಿಮಾನದಲ್ಲಿ ಕೆಚ್ಚೆದೆಯಿಂದ ಹೋರಾಡಿ ಶತ್ರು ರಾಷ್ಟ್ರದ ವಿಮಾನ ಹೊಡೆದುರುಳಿಸಿ ಅವರು ಹುತಾತ್ಮರಾಗಿದ್ದರು.

ದೇವಯ್ಯ ಅವರ ‘ಫೈಟರ್‌’ ವಿಮಾನ ಕಣ್ಮರೆಯಾದ ನಂತರ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸೇನೆ ಅವರನ್ನು ನಾಪತ್ತೆಯಾದವರ ಪಟ್ಟಿಗೆ ಸೇರಿಸಿತ್ತು. ಆದರೆ, 1979ರಲ್ಲಿ ಬ್ರಿಟನ್ ಲೇಖಕರೊಬ್ಬರು ಬರೆದ ಪುಸ್ತಕದಲ್ಲಿ ದೇವಯ್ಯ ತನ್ನ ಪ್ರಾಣ ಹಂಗು ತೊರೆದು, ದೇಶದ ರಕ್ಷಣೆಗೆ ಮುಂದಾದ ಸಂದರ್ಭವನ್ನು ಸ್ಮರಿಸಿದ್ದರು. ನಂತರ, ಸರ್ಕಾರ ದೇವಯ್ಯ ಅವರನ್ನು ಹುತಾತ್ಮರೆಂದು ಪರಿಗಣಿಸಿ ಮಹಾವೀರ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ಅವರ ಹೋರಾಟ ನೆನಪನ್ನು ಚಿರಸ್ಥಾಯಿಯಾಗಿ ಇರಿಸುವ ಕೆಲಸ ಮಡಿಕೇರಿಯಲ್ಲಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT