ಮಂಗಳವಾರ, ಆಗಸ್ಟ್ 16, 2022
28 °C
‘ಕೊಡಗಿನ ಯೋಧ ಅಲ್ತಾಫ್‌ ಅಹಮ್ಮದ್‌ ಕುಟುಂಬಕ್ಕೆ ₹25 ಲಕ್ಷ ಏಕಿಲ್ಲ?’

ಪರಿಹಾರದಲ್ಲಿ ತಾರತಮ್ಯ ನಿಲ್ಲಿಸಿ: ಸಿದ್ದರಾಮಯ್ಯ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮತೀಯ ಸಂಘರ್ಷ, ದುರ್ಘಟನೆಗಳಲ್ಲಿ ಮಡಿದವರ ಕುಟುಂಬಗಳಿಗೆ ಪರಿಹಾರ ನೀಡುವಾಗ ಸರ್ಕಾರವೇ ತಾರತಮ್ಯ ಮಾಡಿದರೆ ಹೇಗೆ? ಜಾತಿ, ಧರ್ಮ, ಸಂಘಟನೆಯ ಆಧಾರದಲ್ಲಿ ತಾರತಮ್ಯ ಮಾಡದೇ ಮೃತರ ಕುಟುಂಬಗಳಿಗೆ ಪರಿಹಾರ ನೀಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಆಗ್ರಹಿಸಿದರು.

ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಗುರುವಾರ ನಿಯಮ 69ರಡಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ‘ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಕುಟುಂಬಕ್ಕೆ ಸರ್ಕಾರ ₹ 25 ಲಕ್ಷ ಪರಿಹಾರ ನೀಡಿದೆ. ಬೆಳ್ತಂಗಡಿಯಲ್ಲಿ ಬಜರಂಗದಳದ ಮುಖಂಡನಿಂದ ಕೊಲೆಯಾದ ಪರಿಶಿಷ್ಟ ಪಂಗಡದ ದಿನೇಶ್‌ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ₹ 4 ಲಕ್ಷ ಮಾತ್ರ ನೀಡಲಾಗಿದೆ. ದಿನೇಶ್‌ ಬಜರಂಗ ದಳಕ್ಕೆ, ಬಿಜೆಪಿಗೆ ಸೇರಿಲ್ಲ ಎಂಬ ಕಾರಣಕ್ಕೆ ಕಡಿಮೆ ಪರಿಹಾರ ಕೊಟ್ಟಿದ್ದೀರಾ’ ಎಂದು ಪ್ರಶ್ನಿಸಿದರು.

‘ಗದಗದಲ್ಲಿ ಸಮೀರ್‌ ಎಂಬ ಯುವಕನನ್ನು ಸಂಘ ಪರಿವಾರದ ಕಾರ್ಯಕರ್ತರು ಕೊಲೆ ಮಾಡಿದ್ದಾರೆ. ಆ ಯುವಕನ ಕುಟುಂಬಕ್ಕೆ ಬಿಡಿಗಾಸೂ ಪರಿಹಾರ ನೀಡಿಲ್ಲ. ಕೊಡಗು ಜಿಲ್ಲೆಯ ವಿರಾಜಪೇಟೆಯ ಅಲ್ತಾಫ್‌ ಅಹಮ್ಮದ್‌ ಎಂಬ ಯೋಧ ಕಾಶ್ಮೀರದಲ್ಲಿ ಹಿಮಗಡ್ಡೆ ಕುಸಿತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಈ ಇಬ್ಬರ ಕುಟುಂಬಗಳಿಗೂ ₹ 25 ಲಕ್ಷ ಪರಿಹಾರ ನೀಡಬೇಕಲ್ಲವೆ’ ಎಂದು ಕೇಳಿದರು.

ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಸಚಿವ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲೇ ಶವ ಮೆರವಣಿಗೆ ಮಾಡಲಾಗಿದೆ. ಜಿಲ್ಲಾಧಿಕಾರಿ, ಎಸ್‌ಪಿ ಎದುರಿನಲ್ಲೇ ಗಲಭೆ ಸೃಷ್ಟಿಸಿ, ಹಲವರ ಮನೆಗಳನ್ನು ದೋಚಲಾಗಿದೆ. ಸಚಿವರ ವಿರುದ್ಧ ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಬಿಜೆಪಿ– ಕಾಂಗ್ರೆಸ್‌ ಶಾಸಕರ ವಾಕ್ಸಮರ

ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ, 2017ರಲ್ಲಿ ನಡೆದಿದ್ದ ಪರೇಶ್‌ ಮೇಸ್ತ ಸಾವಿನ ಪ್ರಕರಣದ ಕುರಿತು ಪ್ರಸ್ತಾಪಿಸಲು ಯತ್ನಿಸಿದರು. ಆದರೆ, ಸಿದ್ದರಾಮಯ್ಯ ಮಾತು ನಿಲ್ಲಿಸಲಿಲ್ಲ. ಬಿಜೆಪಿ ಶಾಸಕರು ರೂಪಾಲಿ ಬೆಂಬಲಕ್ಕೆ ನಿಂತು ಏರಿದ ಧ್ವನಿಯಲ್ಲಿ ಕೂಗಲಾರಂಭಿಸಿದರು. ಕಾಂಗ್ರೆಸ್‌ ಶಾಸಕರೂ ಪ್ರತ್ಯುತ್ತರ ನೀಡಿದರು.

ಬಿಜೆಪಿಯ ಜಿ. ಸೋಮಶೇಖರ ರೆಡ್ಡಿ, ವೇದವ್ಯಾಸ ಕಾಮತ್‌, ಹರೀಶ್‌ ಪೂಂಜ, ಸಂಜೀವ ಮಠಂದೂರು ಸೇರಿದಂತೆ ಹಲವು ಶಾಸಕರು ಗುಂಪುಗೂಡಿ ಆಡಳಿತ ಪಕ್ಷದ ಕಡೆಯ ಮುಂದಿನ ಸಾಲಿನಲ್ಲಿ ನಿಂತು ಏರಿದ ಧ್ವನಿಯಲ್ಲಿ ಆಕ್ಷೇಪಿಸಿದರು.

ಯಾರನ್ನೂ ಬಿಡುವುದಿಲ್ಲ: ಆರಗ ಜ್ಞಾನೇಂದ್ರ
ಬೆಂಗಳೂರು: ‘
ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಎಂದು ನೋಡುವುದಿಲ್ಲ. ಆರ್‌ಎಸ್‌ಎಸ್‌, ಬಜರಂಗದಳ ಸೇರಿದಂತೆ ಯಾವುದೇ ಸಂಘಟನೆ ಸದಸ್ಯರು ಅಪರಾಧ ಕೃತ್ಯದಲ್ಲಿ ಭಾಗಿಯಾದರೂ ಕ್ರಮ ನಿಶ್ಚಿತ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಕಾನೂನು ಸುವ್ಯವಸ್ಥೆ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಯಾವ ಲೋಪವೂ ಆಗಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸರಣಿ ಹತ್ಯೆಗಳು ನಡೆದಿದ್ದವು. ಆಗಿನಿಂದಲೇ ಪಿಎಫ್‌ಐ ಸಂಘಟನೆ ಬೆಳೆದು ನಿಂತಿತು. ಎಲ್ಲ ಮುಸ್ಲಿಮರೂ ಕೆಟ್ಟವರಲ್ಲ. ಕೆಲವು ಮೂಲಭೂತ ಶಕ್ತಿಗಳು ಹೆಡೆ ಎತ್ತಿ ನಿಂತಿವೆ. ಅವುಗಳನ್ನು ಬಗ್ಗುಬಡಿಯಲು ಸರ್ಕಾರ ಸಿದ್ಧ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 80 ಕೋಮು ಸಂಘರ್ಷದ ಪ್ರಕರಣ ನಡೆದಿದ್ದು, 47 ಆಸ್ತಿ ಹಾನಿ ಪ್ರಕರಣ ದಾಖಲಾಗಿದ್ದವು. 142 ಜನರನ್ನು ಬಂಧಿಸಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಕೋಮು ಸಂಘರ್ಷ ಪ್ರಕರಣ, 30 ಆಸ್ತಿ ಹಾನಿ ಪ್ರಕರಣ ನಡೆದಿದ್ದು, 145 ಜನರನ್ನು ಬಂಧಿಸಲಾಗಿದೆ ಎಂದು ವಿವರ ನೀಡಿದರು.

ಲಂಚಕ್ಕೆ ಆಸ್ಪದವಿಲ್ಲ: ‘ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಿಗೆ ಸಲಹೆಗಾರರಾಗಿ ಕೆಂಪಯ್ಯ ಇದ್ದರು. ಅವರ ಕುರಿತು ಮಾಧ್ಯಮಗಳಲ್ಲಿ ಏನು ವರದಿಗಳು ಬಂದಿದ್ದವು ಒಮ್ಮೆ ನೋಡಿ. ಪೊಲೀಸ್‌ ಇಲಾಖೆಯಲ್ಲಿ ಲಂಚದ ಹಾವಳಿಗೆ ದೀರ್ಘ ಇತಿಹಾಸವಿದೆ. ನಾನಾದರೂ ಶುದ್ಧವಾಗಿರಬೇಕು ಅಂದುಕೊಂಡಿದ್ದೇನೆ. ಯಾರೇ ಲಂಚ ಕೇಳಿದರೂ ನನಗೆ ನೇರವಾಗಿ ದೂರು ನೀಡಬಹುದು’ ಎಂದು ಜ್ಞಾನೇಂದ್ರ ಹೇಳಿದರು.

**

‘ಅಂತರ್ಜಲ ವೃದ್ಧಿಗೆ ಹೆಚ್ಚಿನ ಒತ್ತು’
ಬೆಂಗಳೂರು:
‘ಅಂತರ್ಜಲ ವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ವಿವಿಧ ಯೋಜನೆಗಳಲ್ಲಿ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಜ್ಯದಲ್ಲಿ 36 ಸಾವಿರ ಕೆರೆಗಳ ಪೈಕಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 3,670 ಕೆರೆಗಳಿವೆ. 870 ಕೆರೆಗಳು ಪೂರ್ಣವಾಗಿ ತುಂಬುತ್ತವೆ. 999 ಕೆರೆಗಳಲ್ಲಿ ಶೇ 50ಕ್ಕಿಂತ ಹೆಚ್ಚು ನೀರು ತುಂಬಲಿದ್ದು, 1,454 ಕೆರೆಗಳಲ್ಲಿ ಶೇ 50ಕ್ಕಿಂತ ಕಡಿಮೆ ನೀರು ನಿಲ್ಲುತ್ತಿದೆ’ ಎಂದು ಮಾಹಿತಿ ನೀಡಿದರು.

‘ಬಹುತೇಕ ಕೆರೆಗಳು ನೈಸರ್ಗಿಕವಾಗಿ ತುಂಬುತ್ತವೆ. ಕೆಲವು ಕೆರೆಗಳನ್ನು ನೀರು ಹರಿಸುವ ಮೂಲಕ ತುಂಬಿಸಲಾಗುತ್ತದೆ. ಹಳ್ಳದಲ್ಲಿ ನೀರು ಹರಿದರೆ ಮಾತ್ರ ಅಂತರ್ಜಲ ವೃದ್ಧಿ ಸಾಧ್ಯವಾಗಲಿದೆ. ಕೆರೆ ಸಂರಕ್ಷಣೆಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ₹ 500 ಕೋಟಿ ಕಾಯ್ದಿರಿಸಿದ್ದಾರೆ. ಹಲವು ಯೋಜನೆಗಳನ್ನು ರೂಪಿಸಲಾಗುವುದು’ ಎಂದರು.

‘ಅಟಲ್ ಭೂ ಜಲ ಯೋಜನೆಯಡಿ ಕೇಂದ್ರ ಸರ್ಕಾರ ನಾಲ್ಕು ವರ್ಷಗಳ ಅವಧಿಗೆ ₹ 1,002 ಕೋಟಿ ನೀಡಿದೆ’ ಎಂದರು.

*
ಕನ್ಯಾಡಿಯ ದಿನೇಶ್‌, ಗದಗದ ಸಮೀರ್‌ ಮತ್ತು ವಿರಾಜಪೇಟೆಯ ಅಲ್ತಾಫ್‌ ಕುಟುಂಬಗಳಿಗೂ ₹ 25 ಲಕ್ಷ ಪರಿಹಾರ ನೀಡುವ ಬೇಡಿಕೆ ಕುರಿತು ಮುಖ್ಯಮಂತ್ರಿಯವರ ಜತೆ ಚರ್ಚಿಸಿ, ಸಕಾರಾತ್ಮಕ ನಿರ್ಧಾರ ಮಾಡುತ್ತೇವೆ.
-ಆರಗ ಜ್ಞಾನೇಂದ್ರ, ಗೃಹ ಸಚಿವ

*
ದುಪ್ಪಟ್ಟಾ ಹಿಜಾಬ್‌ ಅಲ್ಲ. ಹೀಗಾಗಿ,ಪದವಿ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸಮವಸ್ತ್ರದ ಬಣ್ಣದ ದುಪ್ಪಟ್ಟಾ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು