ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಎಫ್.ಎಚ್. ಜಕ್ಕಪ್ಪನವರ

ಸಾರಿಗೆ ಸಂಸ್ಥೆಯ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಅಧ್ಯಕ್ಷರ ಮನವಿ
Last Updated 16 ಏಪ್ರಿಲ್ 2021, 19:48 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ನೌಕರರೇ ಇದರ ಮೊದಲ ಬಲಿಪಶುವಾಗಲಿದ್ದಾರೆ. ಹಾಗಾಗಿ, ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಸಂಸ್ಥೆಗಳನ್ನು ಉಳಿಸಬೇಕು’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪನವರ ಮನವಿ ಮಾಡಿದರು.

‘ಸರ್ಕಾರಮುಷ್ಕರ ನಿರತರನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಬಿಎಂಟಿಸಿಯನ್ನು ಖಾಸಗೀಕರಣಗೊಳಿಸಬೇಕೆಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಇದಕ್ಕೆ ಪುಷ್ಟಿ ನೀಡುತ್ತವೆ. ನಿಗಮಗಳಲ್ಲಿರುವ ಮೀಸಲಾತಿ ಇಲ್ಲವಾಗಿಸುವ ಉದ್ದೇಶ ಇದರ ಹಿಂದೆ ಅಡಗಿದೆ. ಅದಕ್ಕಾಗಿ ಸರ್ಕಾರ ಮುಷ್ಕರವನ್ನು ಬಳಸಿಕೊಳ್ಳುತ್ತಿದೆ. ಈ ಬೆಳವಣಿಗೆಗಳ ಹಿಂದೆ ಆರ್‌ಎಸ್‌ಎಸ್ ಇದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ರಾಜ್ಯದಲ್ಲಿ 1.11 ಲಕ್ಷ ಸಾರಿಗೆ ನೌಕರರಿದ್ದಾರೆ. ಈ ಪೈಕಿ ಚಾಲಕ, ನಿರ್ವಾಹಕರು ಹಾಗೂ ಕಾರ್ಯಾಗಾರಗಳಲ್ಲಿರುವವರ ಸಂಖ್ಯೆ 98,159. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ ನೌಕರರು ಅಂದಾಜು 40 ಸಾವಿರ ಇದ್ದಾರೆ. ಸರ್ಕಾರದ ಶಿಸ್ತುಕ್ರಮಕ್ಕೆ ಗುರಿಯಾಗಿರುವ ಮುಷ್ಕರ ನಿರತರಲ್ಲಿ ಶೇ 40ರಷ್ಟು ಮಂದಿ ಈ ಸಮುದಾಯದವರೇ ಇದ್ದಾರೆ. ಮುಷ್ಕರ ಬೆಂಬಲಿಸಿದರೆ, ಈ ಸಮುದಾಯಗಳ ಉದ್ಯೋಗಕ್ಕೆ ಕುತ್ತು ಬರುತ್ತದೆ. ಹಾಗಾಗಿ, ಮುಷ್ಕರದಿಂದ ಎಲ್ಲರೂ ಹಿಂದೆ ಸರಿಯಬೇಕು’ ಎಂದರು.

‘ಸರ್ಕಾರ– ಕೋಡಿಹಳ್ಳಿ ಮಧ್ಯೆ ಅಪವಿತ್ರ ಮೈತ್ರಿ’: ಹುಬ್ಬಳ್ಳಿ ವರದಿ: ‘ಸಾರಿಗೆ ನೌಕರರ ಮುಷ್ಕರಕ್ಕೆ ಕರೆ ಕೊಟ್ಟಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ರಾಜ್ಯ ಸರ್ಕಾರದ ಮಧ್ಯೆ ಅಪವಿತ್ರ ಮೈತ್ರಿ ನಡೆದಿದೆ. ಹೋರಾಟದ ದಿಕ್ಕು ದಾರಿ ತಪ್ಪಿದ್ದು, ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಹಾಗಾಗಿ, ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು’ ಎಂದು ಕಾರ್ಮಿಕ ಮುಖಂಡ ದೇವಾನಂದ ಜಗಾಪುರ ಹೇಳಿದರು.

‘ರೈತರ ಸಮಸ್ಯೆಗಳ ಬಗ್ಗೆಯೇ ಸರಿಯಾಗಿ ಗಮನ ಹರಿಸದ ಚಂದ್ರಶೇಖರ್ ಅವರು, ತಮಗೆ ಸಂಬಂಧವಿಲ್ಲದ ಸಾರಿಗೆ ನೌಕರರ ಪರ ಹೋರಾಟಕ್ಕೆ ಇಳಿದಿದ್ದಾರೆ.ಮುಷ್ಕರಕ್ಕೆ ಕರೆ ಕೊಡುವುದಕ್ಕೆ ಮುಂಚೆ ಅವರು, ಕಾರ್ಮಿಕ ಹಾಗೂ ರೈತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆಗಬಹುದಾದ ಸಾಧಕ–ಬಾಧಕಗಳ ಬಗ್ಗೆಯೂ ಚರ್ಚಿಸಿಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಚಾಲಕನ ಕುಟುಂಬಕ್ಕೆ ₹30 ಲಕ್ಷ ಪರಿಹಾರ

ಹುಬ್ಬಳ್ಳಿ: ಜಮಖಂಡಿ ತಾಲ್ಲೂಕಿನ ಕವಟಗಿ ಪುನರ್ವಸತಿ ಕೇಂದ್ರದ ಬಳಿ ಶುಕ್ರವಾರ ಬಸ್‌ ಚಾಲನೆ ಮಾಡುವಾಗ ಕಲ್ಲು ತೂರಾಟದಲ್ಲಿ ಗಾಯಗೊಂಡು ಮೃತಪಟ್ಟಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನ ಚಾಲಕ ನಬಿ ರಸೂಲ್ ಆವಟಿ (59) ಅವರ ಕುಟುಂಬ ಸದಸ್ಯರಿಗೆ ₹30 ಲಕ್ಷ ಪರಿಹಾರ ನೀಡಲಾಗಿದೆ. ಮೃತ ಚಾಲಕನ ಮನೆಗೆ ಭೇಟಿ ನೀಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರು, ಸಾಂತ್ವನ ಹೇಳಿ, ಪರಿಹಾರದ ಚೆಕ್‌ ನೀಡಿದರು.

ವಿವಿಧೆಡೆ 12 ಸಿಬ್ಬಂದಿ ಬಂಧನ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಈಶಾನ್ಯ ಸಾರಿಗೆ ಸಂಸ್ಥೆಗೆ ಸೇರಿದ 7 ಜನ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ಘಟಕ–1ರ ಐದು ಜನ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ

ಹಾಸನ: ಎರಡು ಬಸ್ಸುಗಳಿಗೆ ಕಲ್ಲು

ಹಾಸನ: ತಾಲ್ಲೂಕಿನ ಹಗರೆ ಸಮೀಪದ ಕಡದರವಳ್ಳಿ ಬಳಿ ಶುಕ್ರವಾರ ಸಂಜೆ ಅಪರಿಚಿತರು ಸಾರಿಗೆ ಸಂಸ್ಥೆಯ ಎರಡು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಸನ ಡಿಪೊಗೆ ಸೇರಿದ ಹಾಸನ– ಚಿಕ್ಕಮಗಳೂರು ಹಾಗೂ ಬೇಲೂರು–ಹಾಸನ ಮಾರ್ಗದಲ್ಲಿ ಸಂಚರಿಸುತ್ತಿದ್ದ

ಬಸ್‌ಗಳಿಗೆ ಕಲ್ಲು ಎಸೆದಿದ್ದರಿಂದ, ಗಾಜುಗಳು ಪುಡಿಯಾಗಿವೆ. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ನಡುವೆಯೂ ಗುರುವಾರ ಜಿಲ್ಲೆಯಲ್ಲಿ 182 ಸಾರಿಗೆ ಸಂಸ್ಥೆ ಬಸ್‌ಗಳು ಹಾಸನದಿಂದ ಸಂಚಾರ ನಡೆಸಿದವು. 364 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT