ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ತಂಬಾಕು ಉತ್ಪನ್ನಗಳ ಸೇವನೆ ತಡೆಗೆ ಆ್ಯಪ್

ಆರೋಗ್ಯ ಇಲಾಖೆಯಿಂದ ಅಭಿವೃದ್ಧಿ * ಶೀಘ್ರದಲ್ಲಿಯೇ ಲೋಕಾರ್ಪಣೆ
Last Updated 6 ಡಿಸೆಂಬರ್ 2022, 16:07 IST
ಅಕ್ಷರ ಗಾತ್ರ

ಬೆಂಗಳೂರು:ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ತಡೆಗೆ ಆರೋಗ್ಯ ಇಲಾಖೆಯು ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.

‘ಸ್ಟಾಪ್ ಟೊಬ್ಯಾಕೊ’ ಹೆಸರಿನ ಮೊಬೈಲ್ ಆ್ಯಪ್ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು, ಶೀಘ್ರದಲ್ಲಿಯೇ ಈ ಆ್ಯಪ್ ಲೋಕಾರ್ಪಣೆ ಆಗಲಿದೆ. ಕೋಟ್ಪಾ ಕಾಯ್ದೆ ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವವರ ಹಾಗೂ ಸೇವಿಸುತ್ತಿರುವವರಿಗೆ ಕಡಿವಾಣ ಹಾಕಲು ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕಛಾಯಾಚಿತ್ರಗಳನ್ನು ತೆಗೆದು, ಅಪ್ಲೋಡ್ ಮಾಡುವ ಅವಕಾಶ ಇರಲಿದೆ. ಈ ಛಾಯಾಚಿತ್ರದ ಆಧಾರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತಂಡ ಸ್ಥಳಕ್ಕೆ ಭೇಟಿ ನೀಡಿ, ಕ್ರಮವಹಿಸಲಿದೆ.

‘ಕೆಲವೆಡೆ ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ, ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ನೂತನ ಆ್ಯಪ್‌ ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದ್ದು, ಅಧಿಕೃತವಾಗಿ ಶೀಘ್ರದಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಆ್ಯಪ್‌ ಜಿಪಿಎಸ್‌ ತಂತ್ರಜ್ಞಾನವನ್ನು ಆಧರಿಸಿದೆ. ಹೀಗಾಗಿ, ಛಾಯಾಚಿತ್ರ ತೆಗೆದ ಸ್ಥಳ ನಿಖರವಾಗಿ ತಿಳಿಯಲಿದೆ. ಸ್ಥಳಕ್ಕೆ ಭೇಟಿ ನೀಡಿದಾಗ ಕೋಟ್ಪಾ ಕಾಯ್ದೆ ಉಲ್ಲಂಘಿಸಿ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ದೃಢಪಟ್ಟಲ್ಲಿ ಪ್ರತಿ ವ್ಯಕ್ತಿಗೆ ₹ 200ರಂತೆ ದಂಡ ವಿಧಿಸಲಾಗುವುದು. ಈ ಕಾರ್ಯಕ್ಕೆ ತಾಲ್ಲೂಕು ವೈದ್ಯಾಧಿಕಾರಿ ಒಳಗೊಂಡ7 ಸದಸ್ಯರ ತಂಡ ರಚಿಸಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT