ಮಂಗಳವಾರ, ಮಾರ್ಚ್ 28, 2023
23 °C
ಕಾಯ್ದೆ ರೂಪಿಸಿ ಸುಮ್ಮನಾಗಿರುವ ರಾಜ್ಯ ಸರ್ಕಾರ; ಕಲ್ಯಾಣ ಯೋಜನೆಗಳಿಗೆ ಕಾದಿರುವ ವ್ಯಾಪಾರಿಗಳು

ಬೀದಿ ಬದಿ ವ್ಯಾಪಾರ ಕಾಯ್ದೆಯಷ್ಟೆ; ಸರ್ವೆ, ಯೋಜನೆ ಎರಡೂ ಇಲ್ಲ..

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೀದಿ ಬದಿ ವ್ಯಾಪಾರ ಕಾನೂನುಬದ್ಧಗೊಳಿಸಿ ಕಾಯ್ದೆಯನ್ನಷ್ಟೇ ರೂಪಿಸಿ ಸರ್ಕಾರ ಸುಮ್ಮನಾಗಿದೆ. ಏಳು ವರ್ಷಗಳು ಕಳೆದರೂ ಅದರ ಅಡಿಯಲ್ಲಿ ಸರ್ವೆ ಕಾರ್ಯವೂ ನಡೆದಿಲ್ಲ, ಅವರ ಕಲ್ಯಾಣಕ್ಕೆ ಯೋಜನೆಗಳೂ ರೂಪುಗೊಂಡಿಲ್ಲ.

ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು 2014ರಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ. ಅದರ ಅಡಿಯಲ್ಲಿ ನಿಯಮಾವಳಿಗಳನ್ನು ರೂಪಿಸುವುದು, ವ್ಯಾಪಾರಿಗಳ ಸರ್ವೆ ಕಾರ್ಯ ನಡೆಸುವುದು ಮತ್ತು ಅವರ ಸ್ಥಿತಿಗತಿ ಆಧರಿಸಿ ಯೋಜನೆಗಳನ್ನು ರೂಪಿಸುವುದು, ಪಟ್ಟಣ ವ್ಯಾಪಾರ ಸಮಿತಿಗಳನ್ನು ರಚಿಸುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ.

ಕಾಯ್ದೆಯನ್ನು ಮೂಲೆಗುಂಪು ಮಾಡಿದ್ದ ರಾಜ್ಯ ಸರ್ಕಾರದ ಮೇಲೆ ಬೀದಿ ಬದಿ ವ್ಯಾಪಾರಿಗಳ ಪರ ಹೋರಾಟಗಾರರು ಒತ್ತಡ ಹೇರಿದ ಬಳಿಕ 2019ರಲ್ಲಿ ನಿಯಮಾವಳಿಗಳನ್ನು ರೂಪಿಸಿತ್ತು. ಆದರೆ, ಸರ್ವೆ ಕಾರ್ಯವನ್ನಾಗಲಿ ಮಾಡಿಲ್ಲ. ಈ ಕಾಯ್ದೆಯಡಿ ನಿಯಮಾವಳಿ ರೂಪಿಸುವ ಮುನ್ನ ದೀನ ದಯಾಳ್ ಅಂತ್ಯೋದಯ ಯೋಜನೆಗಾಗಿ ಸರ್ವೆ ಮಾಡಿತ್ತು.

‘ಬೆಂಗಳೂರಿನಲ್ಲಿ ಕಾಟಾಚಾರಕ್ಕೆ ಸರ್ವೆ ಕಾರ್ಯವನ್ನು ಬಿಬಿಎಂಪಿ ನಡೆಸಿತು. 1.5 ಲಕ್ಷಕ್ಕೂ ಹೆಚ್ಚು ಮಂದಿ ಬೀದಿ ಬದಿ ವ್ಯಾಪಾರಿಗಳಿರುವ ಅಂದಾಜಿದೆ. ಆದರೆ, 26 ಸಾವಿರ ಜನರನ್ನಷ್ಟೇ ಬಿಬಿಎಂಪಿ ಪಟ್ಟಿ ಮಾಡಿ ಗುರುತಿನ ಚೀಟಿ ನೀಡಿದೆ’ ಎಂದು ಬೀದಿ ಬದಿ ವ್ಯಾಪಾರಿಗಳ ಪರ ಹೋರಾಟಗಾರರು ದೂರುತ್ತಾರೆ.

‘ವಾರ್ಡ್‌ಗೆ ತಲಾ ಒಬ್ಬರು ಆರೋಗ್ಯ ನಿರೀಕ್ಷಕರನ್ನು ಸರ್ವೆ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಮಾತ್ರ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ಸರ್ವೆ ನಡೆಸಿದರು. ಬೆಳಿಗ್ಗೆ 3 ಗಂಟೆಗೆ ಕೆ.ಆರ್. ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭವಾಗುತ್ತದೆ. ಸಂಜೆ ಬಳಿಕ ಚಾಟ್ಸ್‌ ತಳ್ಳುಗಾಡಿಗಳು ವ್ಯಾಪಾರ ಶುರು ಮಾಡುತ್ತವೆ. ಇವುಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿಲ್ಲ’ ಎಂದು ಅವರು ಹೇಳುತ್ತಾರೆ.

‘ಕೋವಿಡ್ ಸಂದರ್ಭದ ಸಂಕಷ್ಟದಿಂದ ಹೊರಗೆ ಬರಲು ಸಾಧ್ಯವೇ ಆಗಿಲ್ಲ. ಕೆಲವರು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಅವರಿಗೆ ಪರಿಹಾರ ದೊರಕಿಲ್ಲ. ಮನೆ ಬಾಡಿಗೆ ಪಾವತಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಅವರ ನೆರವಿಗೆ ಯಾವುದೇ ಯೋಜನೆಯನ್ನು ಸರ್ಕಾರ ರೂಪಿಸಲಿಲ್ಲ. ನೆಪಮಾತ್ರಕ್ಕಷ್ಟೇ ನಿಯಮಾವಳಿಗಳನ್ನು ರೂಪಿಸಿ ಸರ್ಕಾರ ಸುಮ್ಮನಾಗಿದೆ’ ಎಂದು ಆರೋಪಿಸುತ್ತಾರೆ.

ತಳ್ಳುಗಾಡಿ ವ್ಯಾಪಾರಿಗಳು ಸರ್ವೆಯಿಂದ ಹೊರಗೆ

ತಳ್ಳುಗಾಡಿಯಲ್ಲಿ ತಿಂಡಿ ತಿನಿಸು, ತರಕಾರಿ, ಹೂವು, ಹಣ್ಣು ಮಾರಾಟ ಮಾಡುವ ವ್ಯಾಪಾರಿಗಳನ್ನು ಬಿಬಿಎಂಪಿ ನಡೆಸಿದ ಸರ್ವೆಯಲ್ಲಿ ಪರಿಗಣಿಸಿಯೇ ಇಲ್ಲ ಎಂದು ಬೀದಿ ಬದಿ ವ್ಯಾಪಾರಿಗಳ ಪರ ಹೋರಾಟಗಾರ ವಿನಯ ಶ್ರೀನಿವಾಸ್ ಆರೋಪಿಸಿದರು.

ಕೋವಿಡ್ ಸಂದರ್ಭದಲ್ಲಿ ಮನೆ–ಮನೆಗಳಿಗೆ ಹಣ್ಣು– ತರಕಾರಿಯನ್ನು ಈ ವ್ಯಾಪಾರಿಗಳು ಪೂರೈಸಿದರು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಜನರಿಗೆ ಅಗತ್ಯ ವಸ್ತುಗಳನ್ನು ತಲುಪಿಸಿದರು. ಅಂತವರಿಗೆ ಸರ್ಕಾರ ಕಿರುಕುಳ ನೀಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ವ್ಯಾಪಾರಕ್ಕೆ ಧ್ವನಿವರ್ಧಕ ಬಳಸದಂತೆ ನಿರ್ಬಂಧಿಸಲಾಗಿದೆ ಎಂದರು.

‘ತಳ್ಳುಗಾಡಿ ವ್ಯಾಪಾರಿಗಳಲ್ಲದೇ ಬೆಳಗಿನ ಜಾವ ಮತ್ತು ಸಂಜೆ ವೇಳೆ ಮಾತ್ರ ವ್ಯಾಪಾರ ನಡೆಸುವವರು ಇದ್ದಾರೆ. ಅವರೆಲ್ಲರೂ ಸರ್ವೆಯಿಂದ ಹೊರಗುಳಿದಿದ್ದಾರೆ. ಹೀಗಾಗಿ, ಕಾಯ್ದೆಯಡಿ ಹೊಸದಾಗಿ ಸರ್ವೆ ನಡೆಸಬೇಕು ಎಂಬ ಒತ್ತಾಯವನ್ನು ಮಾಡುತ್ತಲೇ ಇದ್ದೇವೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಪರಿಗಣಿಸಿಲ್ಲ’ ಎಂದೂ ದೂರಿದರು.

ಪಟ್ಟಣ ವ್ಯಾಪಾರ ಸಮಿತಿ

ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಗಳ ಪರಿಹಾರಕ್ಕೆ ಪಟ್ಟಣ ವ್ಯಾಪಾರ ಸಮಿತಿ ರಚನೆ ಮಾಡಬೇಕಿದ್ದು, ಅದನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಲಾಗಿದೆ.

ಚುನಾವಣೆ ಮೂಲಕ ಎಲ್ಲಾ ಕಡೆ ಸಮಿತಿಯ ಸದಸ್ಯರನ್ನು ಬಿಬಿಎಂಪಿ ಆಯ್ಕೆ ಮಾಡಿದೆ. ಆದರೆ, ಕೆಲವೆಡೆ ಸಭೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ವ್ಯಾಪಾರಿಗಳು ದೂರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು