ಬುಧವಾರ, ಜುಲೈ 6, 2022
23 °C

ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇಲ್ಲಿಯ ಕೆ.ಆರ್.ರಸ್ತೆಯಲ್ಲಿರುವ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಕಾಲೇಜು ಕಟ್ಟಡದ ಏಳನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿ ಜಯಂತ್‌ ರೆಡ್ಡಿ (21) ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಆಂಧ್ರಪ್ರದೇಶದ ಜಯಂತ್, ದೊಡ್ಡಬೊಮ್ಮಸಂದ್ರದಲ್ಲಿ ನೆಲೆಸಿದ್ದರು. ಎಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) 3ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

’ಮಾ.6ರಿಂದ ಸೆಮಿಸ್ಟರ್ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆಗೂ ಮುನ್ನ ಲ್ಯಾಬ್‌ನ ನಿಯೋಜಿತ ಕಾರ್ಯದ ವರದಿ ಸಲ್ಲಿಸಲೆಂದು ಜಯಂತ್, ಸೋಮವಾರ ಬೆಳಿಗ್ಗೆ 9 ಗಂಟೆಗೆ ಕಾಲೇಜಿಗೆ ಬಂದಿದ್ದರು. ಅದೇ ಸಂದರ್ಭದಲ್ಲಿ ಕಟ್ಟಡದಿಂದ ಜಿಗಿದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ವಿ.ವಿ.‍‍ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಜೇಬಿನಲ್ಲಿ ಮರಣಪತ್ರ: ‘ಜಯಂತ್ ಜೇಬಿನಲ್ಲಿ ಮರಣಪತ್ರ ಸಿಕ್ಕಿದೆ. ‘ದಿನವೂ ಸಾಯುವ ಬದಲು, ಒಮ್ಮೆಯೇ ಸಾಯುವುದು ಒಳ್ಳೆಯದು’ ಎಂದು ಪತ್ರದಲ್ಲಿ ಬರೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದ್ದು, ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರನ್ನು ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

 

ವಿದ್ಯಾರ್ಥಿಗಳ ಪ್ರತಿಭಟನೆ

ಜಯಂತ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜಿನಲ್ಲಿ ಸೇರಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

‘ತರಾತುರಿಯಲ್ಲಿ ಪರೀಕ್ಷೆಗಳನ್ನು ನಿಗದಿ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಈ ಹಿಂದೆ ಒಂದೊಂದು ಪರೀಕ್ಷೆಗೆ ನಾಲ್ಕು ದಿನಗಳ ಅಂತರವಿರುತ್ತಿತ್ತು. ಆದರೆ, ಈ ಬಾರಿ ಒಂದು ದಿನ ಮಾತ್ರ ಅಂತರವಿದೆ. ‍ಪರೀಕ್ಷಾ ಭಯದಿಂದಲೇ ಮಾನಸಿಕವಾಗಿ ನೊಂದು ಜಯಂತ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಹೊಣೆ’ ಎಂದು ದೂರಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜು ಆಡಳಿತ ಮಂಡಳಿ, ‘ವಿದ್ಯಾರ್ಥಿಗಳು, ಪೋಷಕರು ಹಾಗೂ ತಜ್ಞರ ಜೊತೆ ಚರ್ಚಿಸಿಯೇ ವಿಶ್ವವಿದ್ಯಾಲಯ ಪರೀಕ್ಷೆ ನಿಗದಿ ಮಾಡಿದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಕುಲಪತಿ ಹಾಗೂ ಕುಲಸಚಿವರಿಗೆ ತಿಳಿಸಲಾಗುವುದು’ ಎಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು