ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಬಡವರ ಮನೆಗಳಿಗೆ ನಿರಕ್ಷೇಪಣ(ಎನ್‌ಒಸಿ) ಪತ್ರ ಇಲ್ಲದೆ, ಪಡಿತರ ಚೀಟಿಯ ಆಧಾರದ ಮೇಲೆ ವಿದ್ಯುತ್ ಸಂಪರ್ಕವನ್ನು ನೀಡಲು ಉದ್ದೇಶಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ತಿಳಿಸಿದ್ದಾರೆ.
ಈ ರೀತಿಯ ಸುಮಾರು ಮೂರು ಲಕ್ಷ ಮನೆಗಳಿದ್ದು, ಅವುಗಳಿಗೆ ಮುಂದಿನ 100 ದಿನಗಳೊಳಗೆ ವಿದ್ಯುತ್ ಸಂಪರ್ಕ ನೀಡಲಾಗುವುದು. ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಇದ್ದರೂ ಸಾಕು ಎಂದು ಅವರು ಮಂಗಳವಾರ ರಾಜ್ಯ ಬಿಜೆಪಿ ಕಚೇರಿ ಸುದ್ದಿಗಾರರ ಜತೆ ಮಾತನಾಡಿ ತಮ್ಮ 100 ದಿನಗಳ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗದ ಕುಟುಂಬಗಳು ಪರಿತಪಿಸುತ್ತಿವೆ. ‘ಬೆಳಕು’ ಯೋಜನೆಯಡಿ ಈ ಎಲ್ಲ ಮನೆಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗುವುದು.
ಕೆಟ್ಟು ಹೋಗಿರುವ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್ ಬದಲಾವಣೆಗಾಗಿ ಟ್ರಾನ್ಸ್‌ಫಾರ್ಮರ್ ಬ್ಯಾಂಕ್ ಸ್ಥಾಪಿಸಲಾಗುವುದು. ಮುಂದಿನ ದಿನಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟು ಹೋದ 24 ಗಂಟೆಗಳಲ್ಲಿ ಬದಲಿಸಲಾಗುವುದು. ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆದಿದ್ದು, ತುಂಬಾ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ತಡವಾಗುತ್ತಿದೆ ಎಂಬ ದೂರುಗಳು ಬಂದಿವೆ. ಬೋರ್‌ವೆಲ್ ಸಿದ್ಧವಾದ 30 ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಅನಗತ್ಯವಾಗಿ ರೈತರ ಓಡಾಟವನ್ನು ತಪ್ಪಿಸಲಾಗುವುದು ಎಂದು ಸುನಿಲ್ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ವಿದ್ಯುತ್ ನೀಡಬೇಕು ಎಂಬ ಬೇಡಿಕೆ ಇತ್ತು. ಇದಕ್ಕಾಗಿ ವಿವಿಧೆಡೆ 60 ಕ್ಕೂ ಹೆಚ್ಚು ಸಬ್ ಸ್ಟೇಷನ್‌ಗಳನ್ನು ಇನ್ನು 100 ದಿನಗಳ ಒಳಗೆ ಕೆಪಿಟಿಸಿಎಲ್ ಮೂಲಕ ನಿರ್ಮಿಸಲಾಗುವುದು. ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್ ನೀಡಲು ಇದರಿಂದ ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಕಿರಿಯ ಎಂಜಿನಿಯರ್‌ಗಳು, ಲೈನ್‌ಮ್ಯಾನ್‌ಗಳ ನೇಮಕಾತಿ, ಜೆಇ ಬಡ್ತಿ ಸಮಸ್ಯೆಯನ್ನೂ ಬಗೆಹರಿಸಲಾಗುವುದು. ವರ್ಗಾವಣೆ ದಂಧೆಯನ್ನು ಯಾವುದೇ ಅಧಿಕಾರಿಗಳು ಮಾಡುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದು, ವರ್ಷ ಪೂರ್ತಿ ವರ್ಗಾವಣೆ ಇರುವುದಿಲ್ಲ ಎಂದರು.
ರಾಜ್ಯದಾದ್ಯಂತ ಎಲೆಕ್ಟ್ರಿಕ್ ರಿಚಾರ್ಜ್ ಕೇಂದ್ರಗಳು: ಮಾರುಕಟ್ಟೆಗೆ ಹೆಚ್ಚು ವಿದ್ಯುತ್ ಚಾಲಿತ ವಾಹನಗಳು ಬರುತ್ತಿರುವುದರಿಂದ ರಾಜ್ಯದಾದ್ಯಂತ ಎಲೆಕ್ಟ್ರಿಕ್ ರಿಚಾರ್ಜ್ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಎಲ್ಲ ಜಿಲ್ಲಾ ಕೇಂದ್ರಗಳು, ಪ್ರವಾಸೋದ್ಯಮ ಕೇಂದ್ರಗಳಲ್ಲಿ ರೀಚಾರ್ಜ್ ಕೇಂದ್ರಗಳನ್ನು ತೆರೆಯಲು ಬೇರೆ ಬೇರೆ ಎಸ್ಕಾಂಗಳಿಗೆ ಗುರಿ ನೀಡಲಾಗುವುದು. ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಪ್ರೀಪೇಯ್ಡ್ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದೂ ಅವರೂ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.