ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರ್ ಸಮಸ್ಯೆ: ರಾಜ್ಯದೆಲ್ಲೆಡೆ ನೋಂದಣಿ ಸ್ಥಗಿತ

ಗೊಂದಲದ ಗೂಡಾಗಿದ್ದ ನೊಂದಣಾಧಿಕಾರಿ ಕಚೇರಿಗಳು
Last Updated 1 ಫೆಬ್ರುವರಿ 2021, 18:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಸೋಮವಾರ ಸರ್ವರ್ ಸ್ಥಗಿತಗೊಂಡಿದ್ದು, ಆಸ್ತಿ ನೋಂದಣಿ ಕೆಲಸಕ್ಕೆ ಸಮಸ್ಯೆಯಾಗಿ ಕಾಡಿತು.‌

ರಾಜ್ಯದ 282 ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಈ ಕಚೇರಿಗಳಲ್ಲಿ ದಿನವೂ ನೋಂದಣಿ ಪ್ರಕ್ರಿಯೆಗೆ ಜನ ಮುಗಿ ಬೀಳುವುದು ಸಾಮಾನ್ಯ. ಕಚೇರಿಗಳಿಗೆ ಬಂದು ಕಾದು ಕುಳಿತುಕೊಳ್ಳುವುದನ್ನು ತಪ್ಪಿಸಲು ಅರ್ಜಿ ಸಲ್ಲಿಸಿದವರಿಗೆ ಮೊದಲೇ ದಿನಾಂಕ ನಿಗದಿಪಡಿಸಿ ಅದೇ ದಿನದಂದು ಬಂದು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ.

ಅದೇ ರೀತಿ ನೋಂದಣಿಗೆ ಸೋಮವಾರ ಸಮಯ ಪಡೆದಿದ್ದವರು ಉಪನೋಂದಣಾಧಿಕಾರಿಗಳ ಕಚೇರಿ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಬೆಳಿಗ್ಗೆ ಕಚೇರಿ ಆರಂಭವಾದ ಹೊತ್ತಿನಲ್ಲಿ ಕೆಲ ಕಚೇರಿಗಳಲ್ಲಿ ನಾಲ್ಕೈದು ಆಸ್ತಿಗಳ ನೋಂದಣಿಯಾಗಿದ್ದರೆ, ಬಹುತೇಕ ಕಚೇರಿಗಳಲ್ಲಿ ಒಂದೇ ಒಂದು ಆಸ್ತಿಯೂ ನೋಂದಣಿಯಾಗಲಿಲ್ಲ.

ಆಸ್ತಿ ಮಾರಾಟ ಮಾಡುವವರು ಮತ್ತು ಖರೀದಿ ಮಾಡುವವರು ಕುಟುಂಬ ಸಮೇತ ಬಂದು ಕುಳಿತಿದ್ದರು. ನೋಂದಣಿ ಕೆಲಸ ಮುಗಿಯದಿದ್ದರಿಂದ ಅಧಿಕಾರಿಗಳಿಗೆ ಬೈಯುತ್ತಲೇ ತೆರಳಿದರು. ‘ಸರ್ಕಾರಕ್ಕೆ ರಾಜಸ್ವ ತಂದುಕೊಡುವ ಈ ಇಲಾಖೆಯನ್ನು ತಾಂತ್ರಿಕವಾಗಿ ಸಬಲಗೊಳಿಸಲು ಸರ್ಕಾರಕ್ಕೆ ಬೇಜವಾಬ್ದಾರಿ ಏಕೆ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘ಬೇರೆಲ್ಲಾ ಕೆಲಸ ಬಿಟ್ಟು ಕುಟುಂಬ ಸಮೇತ ಬಂದು ಕುಳಿತಿದ್ದೇವೆ. ಸರ್ವರ್ ಸಮಸ್ಯೆ ಎಂದು ಕಾರಣ ತಿಳಿಸಿ ಅಧಿಕಾರಿಗಳು ಕೈಕಟ್ಟಿ ಕುಳಿತರು. ಇದೇ ಕೆಲಸಕ್ಕೆ ಮತ್ತೊಂದು ದಿನ ಕಚೇರಿಗೆ ಬರಬೇಕಾಗಿದೆ. ನಮ್ಮ ಸಮಯ ವ್ಯರ್ಥ ಆಗಿರುವುದಕ್ಕೆ ಪರಿಹಾರ ಕೊಡುವವರು ಯಾರು’ ಎಂದು ಪ್ರಶ್ನಿಸಿದರು.

‘ಸರ್ಕಾರ ನಿಗದಿಪಡಿಸಿದ ದಿನಾಂಕದೊಳಗೆ ಶುಲ್ಕ ಪಾವತಿಸದಿದ್ದರೆ ಸಾರ್ವಜನಿಕರಿಂದ ಸರ್ಕಾರ ದಂಡ ಪಡೆಯುತ್ತದೆ. ಜನರಿಗೆ ಆಗಿರುವ ತೊಂದರೆಗೆ ಹೊಣೆ ಯಾರು’ ಎಂದು ರಾಜರಾಜೇಶ್ವರಿ ನಗರದ ಉಪನೋಂದಣಾಧಿಕಾರಿ ಕಚೇರಿ ಬಳಿ ಸೋಮವಾರ ದಿನವಿಡೀ ಕಾದು ವಾಪಸ್ ತೆರಳಿದ ಶಿವಾನಂದ ಗೊಟ್ಟಿಗೆರೆ ಅಸಮಾಧಾನ ವ್ಯಕ್ತಪಡಿಸಿದರು.

‘ಈ ರೀತಿ ಸಮಸ್ಯೆ ಉಂಟಾಗುವುದು ಇದೇ ಮೊದಲಲ್ಲ. ಆಗಾಗ ಸರ್ವರ್ ಸ್ಥಗಿತಗೊಳ್ಳುವುದು ಸಾಮಾನ್ಯ. ಈ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT