ಮಂಗಳವಾರ, ಜೂನ್ 22, 2021
28 °C
ಮನೆ, ಸ್ಮಶಾನ ನೀರು ಪಾಲು * ಕರಾವಳಿಯಲ್ಲಿ ಧಾರಾಕಾರ ಮಳೆ

‘ತೌಕ್ತೆ’ ಚಂಡಮಾರುತ ಅಬ್ಬರಕ್ಕೆ ಕಡಲ್ಕೊರೆತ: 80ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಪ್ರಭಾವ ತೀವ್ರವಾಗಿದ್ದು, ಕರಾವಳಿಯಲ್ಲಿ ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದೆ. ಹಲವೆಡೆ ರಸ್ತೆ, ಶೆಡ್‌ಗಳು, ತೆಂಗಿನ ಮರಗಳು ಸಮುದ್ರಕ್ಕೆ ಸೇರಿವೆ. ಕಡಲ ತೀರದಲ್ಲಿದ್ದ 80ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.

ಉಳ್ಳಾಲ ಸಮೀಪದ ಉಚ್ಚಿಲದಲ್ಲಿ ಒಂದು, ಸೋಮೇಶ್ವರದಲ್ಲಿ ಎರಡು ಮನೆಗಳು ಹಾಗೂ ಹಿಂದೂ ಸ್ಮಶಾನ ಸಂಪೂರ್ಣ ಸಮುದ್ರ ಪಾಲಾಗಿವೆ. ಉಳ್ಳಾಲದಲ್ಲಿ 15 ಮತ್ತು ಸೋಮೇಶ್ವರದಲ್ಲಿ 50 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಸರ್ವಿಸ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ.

ಸಸಿಹಿತ್ಲುವಿನ ಮುಂಡ ಬೀಚ್ ಶೇ 80 ಭಾಗ ಕಡಲಿಗೆ ಸೇರಿದೆ. ಅಂಗಡಿ ಹಾಗೂ ಜೀವರಕ್ಷಕದಳದ ವಿಶ್ರಾಂತಿ ಕೊಠಡಿ ಸಮುದ್ರ ಪಾಲಾಗಿವೆ. ಬೀಚ್‌ನ ರಸ್ತೆಗೆ ನೇರವಾಗಿ ಅಲೆ ಅಪ್ಪಳಿಸುತ್ತಿದೆ. ತಣ್ಣೀರುಬಾವಿ, ಬೆಂಗ್ರೆಯಲ್ಲಿ ಕಡಲಿನ ಅಬ್ಬರ ತೀವ್ರವಾಗಿದೆ. ಈ ಪ್ರದೇಶಗಳ ಜನರಿಗೆ ಶಾಲೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. 

ಕಾಸರಗೋಡು ಜಿಲ್ಲೆ ಉಪ್ಪಳದ ಮುಸೋಡಿಯಲ್ಲಿ ಎರಡಂತಸ್ತಿನ ಕಟ್ಟಡ ನೀರು ಪಾಲಾಗಿದೆ. ಮುಸೋಡಿಯ ಮೂಸಾ ಅವರ ಮನೆಯವರು ಮೊದಲೇ ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದರಿಂದ ಅನಾಹುತ ತಪ್ಪಿದೆ.

ಉಡುಪಿ ಜಿಲ್ಲೆಯ ಮರವಂತೆಯಲ್ಲಿ ಕರಾವಳಿ ಮಾರ್ಗದ ಕಾಂಕ್ರಿಟ್‌ ರಸ್ತೆ ತುಂಡಾಗಿದೆ. ಸಮುದ್ರಕ್ಕೆ ತಾಗಿಕೊಂಡಂತೆ 500 ಮೀಟರ್ ಉದ್ದದ ಭೂಭಾಗ ಕೊಚ್ಚಿಹೋಗಿದೆ. 2 ಮೀನುಗಾರಿಕಾ ಶೆಡ್‌ಗಳಿಗೆ ಹಾನಿಯಾಗಿದೆ. ಇಲ್ಲಿನ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಕಿರಿಮಂಜೇಶ್ವರದ ಹೊಸಹಿತ್ಲು, ತಾರಾಪತಿ ಪ್ರದೇಶ, ಹೊಸಾಡಿನ ಕಂಚುಕೋಡು, ಶೀರೂರಿನ ದೊಂಬೆಯ ತೀರ, ಗಂಗೊಳ್ಳಿಯಲ್ಲಿ ಕಡಲ್ಕೊರೆತ ಉಂಟಾಗಿದೆ. ಉಪ್ಪುಂದದಲ್ಲಿ ಮನೆಯಂಗಳಕ್ಕೆ ಮಳೆಯ ನೀರಿನ ಜತೆಗೆ ಮೀನುಗಳು ಬಂದಿವೆ.

ಕಾಪು ಬೀಚ್‌ನಲ್ಲಿ  ತೀರದಲ್ಲಿದ್ದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು. ಬಡಾ, ಉಚ್ಚಿಲ, ಪಡುಬಿದ್ರಿ, ನಡಿಪಟ್ನದಲ್ಲಿ ಕಡಲ್ಕೊರೆತ ಸಂಭವಿಸಿದೆ. ಉಡುಪಿಯ ಮಲ್ಪೆ ಬೀಚ್‌ ತೀರವನ್ನು ನೀರು ಆವರಿಸಿದೆ. ಅಲ್ಲಿದ್ದ ನಾಡದೋಣಿಗಳನ್ನು ಕ್ರೇನ್‌ ಬಳಸಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿಯುತ್ತಿದೆ.

ಮೀನುಗಾರರ ರಕ್ಷಣೆ: ಎಂಜಿನ್‌ ವೈಫಲ್ಯದಿಂದ ಕಣ್ಣೂರಿನಿಂದ 10 ನಾಟಿಕಲ್‌ ಮೈಲಿ ದೂರದಲ್ಲಿ ಸಮುದ್ರದಲ್ಲಿ ಸಿಲುಕಿದ್ದ ದೋಣಿಯಲ್ಲಿದ್ದ ಮೂವರು ಮೀನುಗಾರರನ್ನು ಕರಾವಳಿ ಕಾವಲು ಪಡೆ  ವಿಕ್ರಮ್‌ ಹಡಗು ಬಳಸಿ ರಕ್ಷಣೆ ಮಾಡಿದೆ.

ಧಾರಾಕಾರ ಮಳೆ: ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ ಭಾಗದಲ್ಲಿ ಮಳೆಯಾಗಿದೆ. ಭದ್ರಾ, ಸೋಮವಾಹಿನಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿದೆ.

ಕಲ್ಯಾಣ ಕರ್ನಾಟಕದ ವಿವಿಧೆಡೆ ಧಾರಾಕಾರ ಮಳೆ: ಕಲ್ಯಾಣ ಕರ್ನಾಟಕದ ಕಲಬುರ್ಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ವಿವಿಧೆಡೆ ಶನಿವಾರ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ಹಲವೆಡೆ ಭಾರಿ ಗಾಳಿಯೂ ಬೀಸಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕರಡಕಲ್ಲ ಗ್ರಾಮದಲ್ಲಿ ಸಿಡಿಲು ಬಡಿದು ಮೂರು ಮೇವಿನ ಬಣವಿ ಭಸ್ಮವಾಗಿವೆ. ಕಲಬುರ್ಗಿ ಜಿಲ್ಲೆ ಶಹಾಬಾದ್‌ನಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸುಟ್ಟು ವಿದ್ಯುತ್ ಸಂಪರ್ಕ ಕಡಿತಗೊಂಡಿತು.


 ಹೊನ್ನಾವರ ತಾಲ್ಲೂಕಿನ ಹಳದೀಪುರ ಗ್ರಾಮವನ್ನು ಸಮುದ್ರದ ನೀರು ಆವರಿಸಿರುವುದು

‘ಒಂದು ಸಾವು, ಐವರು ನಾಪತ್ತೆ’
ಮಂಗಳೂರು:
ಎಂಆರ್‌ಪಿಎಲ್‌ನ ನಿರ್ವಹಣೆಗೆ ಸಂಬಂಧಿತ ದೋಣಿ ಶನಿವಾರ ಸಮುದ್ರದ ಅಲೆಗೆ ಸಿಲುಕಿ ಮಗುಚಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಶಿರ್ವದ ಮಟ್ಟು ಬಳಿ ಇಬ್ಬರನ್ನು ರಕ್ಷಿಸಲಾಗಿದೆ. ದೋಣಿಯಲ್ಲಿ 8 ಜನರಿದ್ದು, 5 ಮಂದಿ ನಾಪತ್ತೆಯಾಗಿದ್ದಾರೆ.

ಕಾರವಾರ ವರದಿ: ಭಟ್ಕಳದ ಜಾಲಿಕೋಡಿಯಲ್ಲಿ ದೋಣಿಯನ್ನು ದಡಕ್ಕೆ ತರಲು ಹೋಗಿದ್ದ ಮೀನುಗಾರ ಲಕ್ಷ್ಮಣ ಈರಪ್ಪ ನಾಯ್ಕ (60), ಅಲೆ ಜೋರಾಗಿ ಅಪ್ಪಳಿಸಿದ್ದರಿಂದ ಎರಡು ದೋಣಿಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ.

ಕುಮಟಾ ಭಾಗದ ವಿವಿಧ ಗ್ರಾಮಗಳಲ್ಲಿ 30 ಮನೆಗಳಿಗೆ ನೀರು‌ ನುಗ್ಗಿದೆ. ಹೊನ್ನಾವರ ತಾಲ್ಲೂಕಿನ ಹಳದೀಪುರದಲ್ಲಿ ಉಪ್ಪು ನೀರು ಉಕ್ಕಿ ಸಮೀಪದ ಗದ್ದೆಗಳನ್ನು ಆವರಿಸಿದೆ. ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ. ಹೊಸಪೇಟೆ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದೆ.

ಕೊಡಗಿನಲ್ಲಿ ನಿರಂತರ ಗಾಳಿ, ಮಳೆ
ಮಡಿಕೇರಿ:
ಚಂಡಮಾರುತ ಪ್ರಭಾವದಿಂದ ಕೊಡಗು, ಮೈಸೂರು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಮಳೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ.

ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಕಕ್ಕಬ್ಬೆ, ಗೋಣಿಕೊಪ್ಪಲು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಕಾವೇರಿ ನದಿಯೂ ಸೇರಿದಂತೆ ಹಳ್ಳ–ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಕರಡಿಗೋಡು, ಗುಹ್ಯ ಭಾಗದ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. ಇನ್ನೂ ಎರಡು ದಿನ ಜಾಗ್ರತೆಯಿಂದ ಇರಲು ಜಿಲ್ಲಾಡಳಿತ ಸೂಚಿಸಿದೆ.

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತವಾಗಿದ್ದು, ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮುಂಜಾಗ್ರತೆಯಾಗಿ ಮಡಿಕೇರಿಗೆ 20 ಸದಸ್ಯರ ಎನ್‌ಡಿಆರ್‌ಎಫ್‌ ತಂಡವನ್ನು ಕರೆಸಿಕೊಳ್ಳಲಾಗಿದೆ.

ಮೈಸೂರು ಜಿಲ್ಲೆಯ ವಿವಿಧೆಡೆ ವಿವಿಧೆಡೆ ಗಾಳಿ ಸಹಿತ ಬಿರುಸಿನ ಮಳೆಯಾಗಿದೆ. ಮೈಸೂರು ನಗರದಲ್ಲಿ 1.6 ಸೆ.ಮೀ., ಎಚ್‌.ಡಿ.ಕೋಟೆ, ಹುಣಸೂರು ತಲಾ 1 ಸೆ.ಮೀ. ಪಿರಿಯಾಪಟ್ಟಣದಲ್ಲಿ 3 ಸೆ.ಮೀ. ಮಳೆ ಆಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಹಾಸನ, ಅರಕಲಗೂಡು, ಚನ್ನರಾಯಪಟ್ಟಣ, ಸಕಲೇಶಪುರ, ಆಲೂರು, ಬೇಲೂರಿನಲ್ಲಿ ಬಿಟ್ಟಬಿಟ್ಟು ಮಳೆಯಾಗುತ್ತಿದ್ದು, ಚಾಮರಾಜನಗರದಲ್ಲಿ ಅಲ್ಲಲ್ಲಿ ತುಂತುರಾಗಿ ಸುರಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು