ಶುಕ್ರವಾರ, ನವೆಂಬರ್ 27, 2020
19 °C
ಕೋರಿಕೆ, ಪರಸ್ಪರ ವರ್ಗಾವಣೆ ಮಾತ್ರ

ದೀಪಾವಳಿಗೆ ‘ಶಿಕ್ಷಕ ಸ್ನೇಹಿ’ ವರ್ಗಾವಣೆಯ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರೇಶ್‌ ಕುಮಾರ್

ಬೆಂಗಳೂರು: ‘ಶಿಕ್ಷಕ ಸ್ನೇಹಿ’ ವರ್ಗಾವಣೆಯ ಮೂಲಕ ಶಿಕ್ಷಕ ಸಮುದಾಯಕ್ಕೆ ದೀಪಾವಳಿಯ ಕೊಡುಗೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಈ ಬಾರಿ ಕಡ್ಡಾಯ ಮತ್ತು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೈ ಬಿಟ್ಟು ಕೋರಿಕೆಯ ಮತ್ತು ಪರಸ್ಪರ ವರ್ಗಾವಣೆ ಮಾತ್ರ ನಡೆಸಲು ನಿರ್ಧರಿಸಿದೆ.

ಅಷ್ಟೇ ಅಲ್ಲ, ಕಳೆದ ಬಾರಿ (2019-20) ಕಡ್ಡಾಯ ವರ್ಗಾವಣೆ ಮತ್ತು ಹೆಚ್ಚುವರಿ ವರ್ಗಾವಣೆಯಿಂದ ಅನಾನುಕೂಲ ಆಗಿರುವ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ. ಕೋವಿಡ್‌ ಕಾರಣದಿಂದ ಇನ್ನೂ ಶಾಲೆಗಳು ಆರಂಭಗೊಂಡಿಲ್ಲ. ಹೀಗಾಗಿ, ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ 1.88 ಲಕ್ಷ ಪ್ರಾಥಮಿಕ ಮತ್ತು 41 ಸಾವಿರ ಪ್ರೌಢ ಶಾಲಾ ಶಿಕ್ಷಕರಿದ್ದಾರೆ. ಜಿಲ್ಲೆಯ ಒಳಗೆ ಶೇ 7, ವಿಭಾಗಮಟ್ಟದಲ್ಲಿ ಶೇ 2 ಮತ್ತು ಅಂತರ್‌ ವಿಭಾಗ ಮಟ್ಟದಲ್ಲಿ ಶೇ 2 ಸೇರಿ ಒಟ್ಟು ಶೇ 11ರಷ್ಟು ವರ್ಗಾವಣೆಗೆ ಅವಕಾಶವಿದೆ. ಇದರ ಹೊರತಾಗಿ ವೈದ್ಯಕೀಯ ಕಾರಣಕ್ಕೆ, 12 ವರ್ಷ ಒಳಗಿನ ಮಕ್ಕಳಿರುವ ವಿಧವೆಯವರು, ಮಾಜಿ ಸೈನಿಕರಾಗಿದ್ದವರಿಗೆ ವರ್ಗಾವಣೆಗೆ ಅವಕಾಶವಿದೆ.

ವರ್ಗಾವಣೆ ಕೋರಿ ಸಲ್ಲಿಸಿದ ಅರ್ಜಿಗಳನ್ನು ಖಾಲಿ ಹುದ್ದೆಗಳನ್ನು ಆಧರಿಸಿ ಪರಿಗಣಿಸಲಾಗುವುದು. ಅಂದಾಜು 14 ಸಾವಿರದಿಂದ 15 ಸಾವಿರ ಶಿಕ್ಷಕರು ವರ್ಗಾವಣೆಯ ಪ್ರಯೋಜನ ಪಡೆಯುವ ನಿರೀಕ್ಷೆ ಇದೆ.

ವರ್ಗಾವಣೆ ಕೋಶ: ವರ್ಗಾವಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ತಾಲ್ಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ‘ವರ್ಗಾವಣೆ ಕೋಶ’ಗಳನ್ನು ಆರಂಭಿಸಲಾಗುವುದು. ವರ್ಗಾವಣೆ ಕೋರಿ ಸಲ್ಲಿಸಿದ ಅರ್ಜಿಗಳಿಗೆ ಸೇವಾ ಅಂಕಗಳನ್ನು (ಕರ್ತವ್ಯ ನಿರ್ವಹಿಸಿದ ಅವಧಿ ಪರಿಗಣಿಸಿ) ನೀಡಲಾಗುತ್ತದೆ. ಅದರ ಆಧಾರದಲ್ಲಿ ವರ್ಗಾವಣೆಗೆ ಅರ್ಹವಾದ ಮತ್ತು ಅನರ್ಹ ಅರ್ಜಿಗಳನ್ನು ಪಟ್ಟಿ ಮಾಡಲಾಗುತ್ತದೆ. ಅರ್ಜಿ ಅನರ್ಹಗೊಂಡು, ತಿರಸ್ಕೃತವಾದ ಎಲ್ಲ ಶಿಕ್ಷಕರಿಗೂ ತಮ್ಮ ಹೇಳಿಕೆಗಳನ್ನು ಈ ಕೋಶಕ್ಕೆ ನೀಡಬಹುದು. ಅಲ್ಲದೆ, ಮೇಲ್ಮನವಿ ಸಲ್ಲಿಸಲು ಕೂಡಾ ಅವಕಾಶವಿದೆ. ಆಯಾ ವಿಭಾಗದಲ್ಲಿ ನಿರ್ದೇಶಕರು, ಉಪ ನಿರ್ದೇಶಕರು ಮೇಲ್ಮನವಿ ಪ್ರಾಧಿಕಾರ ಆಗಿರುತ್ತಾರೆ.

ಇದೇ 17ರಿಂದ ಶಿಕ್ಷಕರ ವರ್ಗಾವಣೆ

ಬೆಂಗಳೂರು: ಶಿಕ್ಷಕರ ವರ್ಗಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ 17ರಿಂದ ಪ್ರಕ್ರಿಯೆ ಆರಂಭವಾಗಲಿದೆ. ಕಳೆದ ಸಾಲಿನಲ್ಲಿ ಕಡ್ಡಾಯ ಹಾಗೂ ಹೆಚ್ಚುವರಿ ಹುದ್ದೆಯಡಿ ವರ್ಗಾವಣೆಯಾದವರಿಗೆ ಈ ಬಾರಿ ಮೊದಲ ಆದ್ಯತೆ ಸಿಗಲಿದೆ.

ವರ್ಗಾವಣೆಗೆ ‘ಶಿಕ್ಷಕ ಮಿತ್ರ’ ಆ್ಯಪ್‌ನಲ್ಲಿ ನ. 30ರವರೆಗೆ ಅರ್ಜಿ ಸಲ್ಲಿಸಬಹುದು. ಡಿ. 1ರಿಂದ 11ರವರೆಗೆ ಪರಿಶೀಲನೆ, 15ರಂದು ಅರ್ಹ, ಅನರ್ಹರ ಪಟ್ಟಿ ಪ್ರಕಟಣೆ, 16ರಿಂದ 23ರವರೆಗೆ ಆಕ್ಷೇಪಣೆಗೆ ಅವಕಾಶ, 24ರಿಂದ 29ರವರೆಗೆ ಅನರ್ಹರಿಗೆ ಹೇಳಿಕೆ ನೀಡಲು ಅವಕಾಶ, ಡಿ. 31ರಂದು ಅರ್ಹರ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಮೊದಲು ಜಿಲ್ಲೆಯ ಒಳಗೆ, ಬಳಿಕ ಜಿಲ್ಲೆಯ ಹೊರಗೆ ವಿಭಾಗದ ಒಳಗೆ, ನಂತರ ವಿಭಾಗದ ಹೊರಗಿನ ಅರ್ಜಿಗಳ ಕೌನ್ಸೆಲಿಂಗ್‌ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು