ಮಂಗಳವಾರ, ಸೆಪ್ಟೆಂಬರ್ 21, 2021
22 °C

ಭಯೋತ್ಪಾದಕರ ಮಟ್ಟ ಹಾಕುವ ಮಸೂದೆಗೆ ವಿರೋಧ ಏಕೆ?: ಕಾಂಗ್ರೆಸ್ ವಿರುದ್ಧ ಕಟೀಲ್ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಯೋತ್ಪಾದಕರನ್ನು ಮಟ್ಟ ಹಾಕಲು ಸಂಸತ್ತಿನಲ್ಲಿ ಮಸೂದೆಯನ್ನು ತಂದಾಗ, ಕಾಂಗ್ರೆಸ್‌ ಸಂಸದರು ಸದನದಿಂದ ಹೊರ ನಡೆದಿರುವುದು ದೇಶದ ಸುರಕ್ಷತೆ ವಿಚಾರದಲ್ಲಿ ಆ ಪಕ್ಷಕ್ಕಿರುವ ಕಾಳಜಿಗೆ ಸಾಕ್ಷಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹರಿಹಾಯ್ದಿದ್ದಾರೆ.

‘ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಆಡಳಿತದಲ್ಲಿದ್ದಾಗ ಹಿಂದೂಗಳ ವಿರುದ್ಧ ಮಸೂದೆಯನ್ನು ತರುತ್ತಿತ್ತು. ಆದರೆ, ಈಗ ದೇಶ ವಿರೋಧಿ ಶಕ್ತಿಗಳನ್ನು ಪತ್ತೆ ಹಚ್ಚಲು ಪೂರಕ ಮಸೂದೆ ತಂದಾಗ, ಅದನ್ನು ಬೆಂಬಲಿಸದೇ ಕಲಾಪ ಬಹಿಷ್ಕರಿಸಿರುವುದು ಕಾಂಗ್ರೆಸ್‌ ಪಕ್ಷ ಭಯೋತ್ಪಾದಕರ ಪರ ನೀತಿಯನ್ನು ತೋರಿಸುವಂತಿದೆ’ ಎಂದು ಅವರು ಹೇಳಿದ್ದಾರೆ.

‘ಮತದಾನದ ಸಮಯ ಬಂದಾಗ, ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್‌ನ ಎಲ್ಲ ಸಂಸದರೂ ಮಸೂದೆ ಸರಿ ಇಲ್ಲ ಎಂದು ಹೇಳಿ ಸದನ ಬಹಿಷ್ಕರಿಸಿದರು. ಭಯೋತ್ಪಾದಕರಿಗೆ ಆರ್ಥಿಕವಾಗಿ ಸಹಾಯ ಮಾಡಿದ ಮತ್ತು ಜಿಹಾದಿ ಸಾಹಿತ್ಯದಿಂದ ಅವರನ್ನು ಭಯೋತ್ಪಾದಕರನ್ನಾಗಿ ಮಾಡಿದ ಜನರ ಬಗ್ಗೆ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್‌ಗೆ ಸಹಾನುಭೂತಿ ಏಕೆ’ ಎಂದು ನಳಿನ್‌ ಪ್ರಶ್ನಿಸಿದ್ದಾರೆ.

‘ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವವರನ್ನು ಮತ್ತು ಭಯೋತ್ಪಾದನೆ ಪ್ರಚೋದನೆ ನೀಡುವ ಜಿಹಾದಿ ಸಾಹಿತ್ಯವನ್ನು ಒದಗಿಸಿಕೊಡುವವರನ್ನು ಭಯೋತ್ಪಾದಕರು ಎಂದು ಪರಿಗಣಿಸುವ ಮಸೂದೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಂಗೀಕರಿಸಿದೆ. ಭಯೋತ್ಪಾದನೆಯನ್ನು ಮಟ್ಟ ಹಾಕಲು ಅವರ ದುಷ್ಕೃತ್ಯವನ್ನು ಗುರುತಿಸಿ, ಶಿಕ್ಷಿಸಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ಕಠಿಣ ಕಾನೂನುಗಳನ್ನು ತರಲಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು