ಗುರುವಾರ , ಜನವರಿ 28, 2021
26 °C

ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಾಯ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಅರ್ಥ ವ್ಯವಸ್ಥೆಗೆ ಅಪಾಯ ಎದುರಾಗಿದೆ. ಬಿಜೆಪಿಯು ಆರ್‌ಎಸ್‌ಎಸ್‌ ಕೈಗೊಂಬೆಯಾಗಿದೆ. ಅವರು ಹೇಳಿದ ಹಾಗೆ ಕುಣಿಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಸೋಮವಾರ ನಗರದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಕರೆಯಲು ಯಾವುದೇ ಹಿಂಜರಿಕೆ ಬೇಡ. ಹಿಂದೂತ್ವದ ಬಗೆಗೆ ನಮಗೆ ಸ್ಪಷ್ಟತೆ ಇದೆ. ನಮ್ಮದು ಮಹಾತ್ಮ ಗಾಂಧೀಜಿ, ಜವಹಾರಲಾಲ್ ನೆಹರೂ, ಸುಭಾಷ್‌ಚಂದ್ರ ಬೋಸ್‌ ಅವರ ಹಿಂದೂತ್ವ. ನೆಹರೂ ಅವರು ಆಗಲೇ ಜಾನುವಾರುಗಳ ರಕ್ಷಣೆಗೆ ಕಾನೂನು ಜಾರಿ ಮಾಡಿದ್ದರು. ಅದಕ್ಕೆ ಈಗ ತಿದ್ದುಪಡಿ ತಂದಿದ್ದಾರೆ ಎಂದರು.

ಗೋ ಮಾಂಸದ ರಫ್ತು–ಆಮದು ನಿಷೇಧ ಯಾಕೆ ಮಾಡುವುದಿಲ್ಲ? ಅಮೆರಿಕ, ಆಸ್ಪ್ರೇಲಿಯಾ ಗೋಮಾಂಸ ತಿಂದರೆ ಪರವಾಗಿಲ್ಲವೇ? ಅಲ್ಲಿನ ಹಸುಗಳು ಗೋಮಾತೆಯಲ್ಲವೇ ಎಂದು ಪ್ರಶ್ನಿಸಿದರು.

ಮಹದಾಯಿ ತಿರುವು ಯೋಜನೆಯಿಂದ ಒಂದು ತಿಂಗಳಲ್ಲಿ ನೀರು ಹರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದರು. ಇವತ್ತಿನವರೆಗೂ ಈಡೇರಿಲ್ಲ. ಬಿಜೆಪಿಯವರಿಗೆ ವಿವಾದಗಳ ಇತ್ಯರ್ಥ ಮಾಡುವುದು ಬೇಕಿಲ್ಲ. ಉತ್ತರ ಕರ್ನಾಟಕದವರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ಅವುಗಳನ್ನೇ ಭಾವನಾತ್ಮಕ ವಿಷಯವಾಗಿಸಿಕೊಂಡು ಜನರ ದಾರಿ ತಪ್ಪಿಸುತ್ತಾರೆ ಎಂದು ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಹೊಂದಾಣಿಕೆ ರಾಜಕಾರಣ ಬೇಡ. ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ ಮಾಡಬೇಕು. ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಮುಖಂಡರಾದ ಕೆ.ಎಚ್‌. ಮುನಿಯಪ್ಪ, ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ, ಆರ್‌.ಬಿ. ತಿಮ್ಮಾಪುರ, ಐ.ಜಿ. ಸನದಿ, ಶ್ರೀನಿವಾಸ ಮಾನೆ, ಪ್ರಸಾದ ಅಬ್ಬಯ್ಯ, ಕೆ.ಬಿ. ಕೋಳಿವಾಡ, ಉಮಾಶ್ರೀ, ಲಕ್ಷ್ಮಿ ಹೆಬ್ಬಾಳಕರ್‌ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು