ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಬಿಜೆಪಿ ಗೊಂದಲ ಸೃಷ್ಟಿಸುವುದು ಬೇಡ: ಡಿ.ಕೆ.ಶಿ

Last Updated 25 ಮೇ 2022, 9:52 IST
ಅಕ್ಷರ ಗಾತ್ರ

ಬೆಂಗಳೂರು: 'ಬಿಜೆಪಿ ಹಾಗೂ ಕೆಲವು ಸಂಘಟನೆಗಳ ವೈಯಕ್ತಿಕ ನಂಬಿಕೆಗಳನ್ನು ನಾವು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದರೆ ಅವು ಅದನ್ನು ಬೇರೆಯವರ ಮೇಲೆ ಹೇರಬಾರದು. ಸಾರ್ವಜನಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡಬಾರದು. ಅದು ತಪ್ಪು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಸದಾಶಿವನಗರ ನುವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.

ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ತಾಂಬೂಲ ಪ್ರಶ್ನೆ ಕೇಳಲು ವಿಶ್ವ ಹಿಂದೂ ಪರಿಷತ್ ನಾಯಕರು ಹಾಗೂ ಬಿಜೆಪಿ ಶಾಸಕರು ಮುಂದಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಬಿಜೆಪಿ ಸರ್ಕಾರ ಈ ರಾಜ್ಯವನ್ನು ಕೊಲ್ಲುತ್ತಿದೆ. ಬಿಜೆಪಿಯವರು ತಮ್ಮ ನಂಬಿಕೆ, ಸ್ವಂತ ವಿಚಾರದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರ ವೈಯಕ್ತಿಕ ನಂಬಿಕೆ, ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಇದರಿಂದ ರಾಜ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು.

ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಸರ್ಕಾರದಲ್ಲಿ ಅಲ್ಪಸಂಖ್ಯಾತರ ಸಚಿವಾಲಯ, ಹಿಂದೂಗಳಿಗಾಗಿ ಮುಜರಾಯಿ ಇಲಾಖೆ ಇದೆ. ಸರ್ಕಾರಿ ಅಧಿಕಾರಿಗಳು ಇದ್ದಾರೆ. ಹೀಗಾಗಿ ಸರಕಾರದ ವಿಚಾರದಲ್ಲಿ ಸಂಘಟನೆಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು.

ಇಂತಹ ವಿಚಾರದಲ್ಲಿ ಕಾನೂನು-ಸುವ್ಯವಸ್ಥೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ನಾವು ಹೋರಾಡುತ್ತೇವೆ ಎಂದು ನನಗೆ ಅನೇಕ ಕರೆಗಳು ಬರುತ್ತಿವೆ. ಇದರಿಂದ ಶಾಂತಿ ಸುವ್ಯವಸ್ಥೆಗೆ ಭಂಗವಾಗುತ್ತದೆ, ಹೀಗಾಗಿ ಈ ವಿಚಾರಕ್ಕೆ ಹೋಗಬೇಡಿ ಎಂದು ನಾನೇ ಸಮಾಧಾನ ಮಾಡುತ್ತಿದ್ದೇನೆ.

ಭವಿಷ್ಯ ಕೇಳುವವರು, ಶಕುನ ಕೇಳುವವರು, ಜ್ಯೋತಿಷ್ಯ ಕೇಳುವವರಿಗೆ ನಾವು ಅಡ್ಡಿ ಮಾಡುವುದಿಲ್ಲ. ಇದೆಲ್ಲವೂ ವೈಯಕ್ತಿಕ ವಿಚಾರವಾಗಿದ್ದು, ಸಾರ್ವಜನಿಕ ವಿಚಾರವಲ್ಲ. ಅನಗತ್ಯ ಗೊಂದಲ ಸೃಷ್ಟಿಸುವುದನ್ನು ನಾನು ಖಂಡಿಸುತ್ತೇನೆ.

ಈ ವಿಚಾರದಲ್ಲಿ ಸರ್ಕಾರ, ಪೊಲೀಸ್ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಬೇಕು. ಸರಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಹೈಕೋರ್ಟ್ ನೀಡಿರುವ ಸೂಚಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ನಾವು ಚುನಾವಣೆಯನ್ನು ಎಂದೂ ಬೇಡ ಎನ್ನುವುದಿಲ್ಲ. ಆದರೆ ಮೊದಲು ಸಾಮಾಜಿಕ ನ್ಯಾಯ ಸಿಗಬೇಕು. ಸಂವಿಧಾನದ ಆಶಯದಂತೆ ಜನರಿಗೆ ಅಧಿಕಾರ ಕೊಡಬೇಕು. ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ತೊಂದರೆ ಆಗಬಾರದು. ಇದು ಸರ್ಕಾರದ ಜವಾಬ್ದಾರಿ. ನ್ಯಾಯಾಲಯ ಚುನಾವಣೆ ನಡೆಸಿ ಎಂದು ಹೇಳಿದೆ. ಆದರೆ ಸಾಮಾಜಿಕ ನ್ಯಾಯ ಕಡೆಗಣಿಸಿ ಎಂದು ಹೇಳಿಲ್ಲ ಎಂದರು.

ಮೇಕೆದಾಟು ಹೋರಾಟದಲ್ಲಿ ನಿಯಮ ಉಲ್ಲಂಘನೆ ಕುರಿತು ನೋಟಿಸ್ ಜಾರಿ ಬಗ್ಗೆ ಕೇಳಿದ ಪ್ರಶ್ನೆಗೆ, 'ನಾವು ನ್ಯಾಯಾಲಯಕ್ಕೆ ಗೌರವ ನೀಡಬೇಕು, ಖಂಡಿತ ನೀಡುತ್ತೇವೆ. ಆದರೆ ಕೇವಲ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಬಿಜೆಪಿಯವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಸಚಿವರ ಕಾರ್ಯಕ್ರಮಗಳು ಸರ್ಕಾರದ ಕಾರ್ಯಕ್ರಮ ಹಾಗೂ ಬಿಜೆಪಿ ನಾಯಕರ ಹುಟ್ಟುಹಬ್ಬ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.

ಪಠ್ಯಕ್ರಮ ಪರಿಷ್ಕರಣೆ ಗೊಂದಲ ಕುರಿತ ಪ್ರಶ್ನೆಗೆ ,'ಸರ್ಕಾರ ರಾಜಕೀಯ ಅಜೆಂಡಾವನ್ನು ಪಠ್ಯಕ್ರಮದಲ್ಲಿ ತರಲು ಪ್ರಯತ್ನಿಸುತ್ತಿದೆ. ಇತಿಹಾಸ ತಿರುಚಿ, ಮುಂದಿನ ಪೀಳಿಗೆಗೆ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಇತಿಹಾಸವನ್ನು ಯಾರು ಬದಲಿಸಲು ಸಾಧ್ಯವಿಲ್ಲ. ಎಲ್ಲ ಪ್ರಯತ್ನಗಳು ಕೆಲಕಾಲ ಮಾತ್ರ. ದೇಶದ ಯಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲು ಸಾಧ್ಯವಾಗಿಲ್ಲ. ಆದರೆ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ತನ್ನ ಪಕ್ಷ ಹಾಗೂ ಸಂಘಟನೆಯ ನಾಯಕರ ವಿಚಾರಗಳನ್ನು ಮಕ್ಕಳ ತಲೆಗೆ ತುಂಬಲು ಪ್ರಯತ್ನ ಮಾಡುತ್ತಿದೆ. ಕೆಲವರನ್ನು ದೇಶಕ್ಕಾಗಿ ಸ್ವಾತಂತ್ರ ತಂದುಕೊಟ್ಟವರು ಎಂದು ತಪ್ಪಾಗಿ ಬಿಂಬಿಸುತ್ತಿರುವುದು ಅಪರಾಧವಾಗಿದೆ. ಸರ್ಕಾರದ ಈ ತಪ್ಪಿಗೆ ಜನರೇ ಮುಂದಿನ ದಿನಗಳಲ್ಲಿ ಶಿಕ್ಷೆ ನೀಡುತ್ತಾರೆ' ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT