ಬುಧವಾರ, ಜೂನ್ 16, 2021
28 °C
ತಜ್ಞರ, ಇತಿಹಾಸಕಾರರ ಆಕ್ರೋಶ: ಸದ್ಯದಲ್ಲಿಯೇ ಹೆಚ್ಚಿನ ದಾಖಲೆ ಬಿಡುಗಡೆ

ಟಿಟಿಡಿ ವಾದದ ಹಿಂದೆ ವಾಣಿಜ್ಯ ಹಿತಾಸಕ್ತಿ...?

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಕಿಷ್ಕಿಂಧಾ ಪ್ರದೇಶದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂಬುದು ಇಲ್ಲಿಯವರೆಗೆ ದೇಶದ ಆಸ್ತಿಕರು ನಂಬಿಕೊಂಡು ಬಂದಿರುವ ಐತಿಹ್ಯ.

‘ಈಗ ಜನ್ಮಸ್ಥಳದ ಕುರಿತು ಟಿಟಿಡಿ ಎಬ್ಬಿಸಿರುವ ವಿವಾದದ ಹಿಂದೆ ಲಾಭಕೋರತನ ಮತ್ತು ವಾಣಿಜ್ಯ ಹಿತಾಸಕ್ತಿ ಅಡಗಿರಬಹುದು’ ಎಂದು ಇಲ್ಲಿನ ಇತಿಹಾಸಕಾರರು, ಸಂಶೋಧಕರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹೆಚ್ಚಿನ ದಾಖಲೆಗಳನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿ
ಅವುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.

ಅಂಜನಾದ್ರಿ ಪರ್ವತಕ್ಕೆ ನಿತ್ಯ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ. ಹನುಮಮಾಲೆ ಧಾರಣೆ ಎಲ್ಲೆಡೆ ಜನಪ್ರಿಯವಾಗುತ್ತಿದೆ. ಹನುಮಮಾಲೆ ವಿಸರ್ಜನೆಗೆ ಪ್ರತಿವರ್ಷ 1 ಲಕ್ಷಕ್ಕೂ ಹೆಚ್ಚು ಜನ ಬರುತ್ತಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪವೇ ಸೇರಿದಂತೆ ಈ ಪ್ರದೇಶದ ಅಭಿವೃದ್ಧಿಗೆ ಈಗಾಗಲೇ ₹200 ಕೋಟಿ ಮೊತ್ತದ ಯೋಜನೆ ರೂಪಿಸಿವೆ.

ಸರ್ಕಾರದ ಸುಪರ್ದಿಗೆ ಬಂದ ನಂತರ ಈ ಕ್ಷೇತ್ರದಿಂದ ಮಾಸಿಕ ₹15 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿದೆ. 

ಪೌರಾಣಿಕ ಹಿನ್ನೆಲೆ: ವೇದಗಳ ಕಾಲದಿಂದಲೂ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಸ್ಕಂದ ಪುರಾಣದಲ್ಲಿ ಕಿಷ್ಕಿಂಧಾದ ಉಲ್ಲೇಖ, ಶಿವನು ಪಂಪಾಸರೋವರದಲ್ಲಿ ತಪ್ಸಸ್ಸು ಮಾಡಿದ್ದು, ನಂತರದ ತೇತ್ರಾಯುಗದಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ, ದ್ವಾಪಾರಯುಗದಲ್ಲಿ ರಚನೆಗೊಂಡ ಮಹಾಭಾರತದ ಅರ್ಜುನನಿಗೆ ಇಂದ್ರಧನಸ್ಸು ನೀಡಿದ ಇಂದ್ರಕೀಲ ಪರ್ವತ ಇಲ್ಲಿಯೇ ಇದೆ.

ಐತಿಹಾಸಿಕ ಹಿನ್ನೆಲೆ: 10ನೇ ಶತಮಾನದ ಹುಲಿಗಿ, ಪುರ ದಾನ ಶಾಸನ, ನಂತರ 9 ಯತಿಶ್ರೇಷ್ಠರು ಕ್ಷೇತ್ರದ ಮಹಿಮೆ ಅರಿತು ಇಲ್ಲಿಯೇ ಸಮಾಧಿಸ್ಥರಾಗಿರುವುದು. ಭಾರತದಾದ್ಯಂತ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ವಿಜಯನಗರ ಆಳರಸರ ಕಾಲದ ಸಾಹಿತ್ಯ, ಆಧುನಿಕ ಕಾಲದಲ್ಲಿ ಇತಿಹಾಸ ತಜ್ಞ ಅ.ಸುಂದರ ಸೇರಿದಂತೆ ಈ ಭಾಗದ ಇತಿಹಾಸಕಾರರ ಸಂಶೋಧನೆ. ಅಂತರರಾಷ್ಟ್ರೀಯ ಖ್ಯಾತಿಯ ಅಮೆರಿಕಾದ ಶಾಸನ ತಜ್ಞ ಫಿಲಿಫ್ ಲುಟೆನ್‌ಡಾರ್ಫ್ ಹನುಮಂತ ಜನಿಸಿದ್ದು ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಎಂದು ತಮ್ಮ 'ಹನುಮಾನ್ಸ್ ಟೇಲ್‌' ಎಂಬ ಕೃತಿಯಲ್ಲಿ ನಿರೂಪಿಸಿದ್ದಾರೆ.

‘ಇಷ್ಟೊಂದು ಐತಿಹಾಸಿಕ ದಾಖಲೆಗಳು ಇದ್ದರೂ, ಪುರಾಣ ಕಥೆಯ 'ಶ್ರೇಷ್ಠತೆ' ವ್ಯಸನದಿಂದ ತಪ್ಪಾಗಿ ತಿರುಪತಿಯ ಪಕ್ಕದ ಅಂಜನಾದ್ರಿಯೇ ಹನುಮಂತ ಜನ್ಮಸ್ಥಾನ ಎಂದು ಹೇಳಿ ಅನಗತ್ಯ ವಿವಾದ ಎಬ್ಬಿಸಿರುವುದು ದುರಂತ’ ಎಂದು ಹಿರಿಯ ಸಾಹಿತಿ ಎಚ್‌.ಎಸ್‌. ಪಾಟೀಲ ಹೇಳುತ್ತಾರೆ.

ಇಂಟರ್‌ ನ್ಯಾಷನಲ್ ಕಾಮರ್ಸ್ ಫೋರಂ ವತಿಯಿಂದ, ಸಂಸದ ಸಂಗಣ್ಣ ಕರಡಿ ಅವರ ಪುತ್ರ ಅಮರೇಶಕರಡಿ ಮತ್ತು ದೇವಸ್ಥಾನದ ಮುಖ್ಯ ಅರ್ಚಕ ವಿದ್ಯಾದಾಸ ಬಾಬಾ ನೇತೃತ್ವದಲ್ಲಿ ಈ ಎಲ್ಲ ದಾಖಲೆ ಬಿಡುಗಡೆ ಮಾಡಿ, ನಂತರ ರಾಜ್ಯಪಾಲರಿಗೆ ದಾಖಲೆ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

***

ಸ್ಥಳ ಪುರಾಣದ ಆಧಾರದ ಮೇಲೆ ಅಂಜನಾದ್ರಿ ವಿವಾದವನ್ನು ಟಟಿಡಿ ಹುಟ್ಟುಹಾಕಿದೆ. ಈ ಕುರಿತು ತಜ್ಞರ ಕಮಿಟಿ ರಚನೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ.
- ಡಾ.ಶರಣಬಸಪ್ಪ ಕೋಲ್ಕಾರ್, ಇತಿಹಾಸ ಪ್ರಾಧ್ಯಾಪಕ, ಗಂಗಾವತಿ

ಅಂಜನಾದ್ರಿ ಗುಡ್ಡದ ಕೆಳಗೆ ಇರುವ ಹನುನಮನಹಳ್ಳಿ, ಅಂಜನಹಳ್ಳಿ ಗ್ರಾಮಗಳೇ ಐತಿಹಾಸಿಕ ದಾಖಲೆ. ದಾನ ಶಾಸನಗಳಲ್ಲಿಯೂ ಅಂಜನಾದ್ರಿಯ ಉಲ್ಲೇಖವಿದೆ.
- ಪ್ರೊ.ಸಿದ್ಧಲಿಂಗಪ್ಪ ಕೊಟ್ನೆಕಲ್, ಪ್ರಾಧ್ಯಾಪಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು