ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಬೇಡಿಕೆ: ರಾಜ್ಯ ಸರ್ಕಾರದಿಂದ ಮಾಹಿತಿ ಕೇಳಿದ ಹೈಕೋರ್ಟ್

ಮುಂದಿನ ಒಂದು ವಾರಕ್ಕೆ ಬೇಕಾಗುವ ಪ್ರಮಾಣದ ಕುರಿತು ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ
Last Updated 11 ಮೇ 2021, 20:28 IST
ಅಕ್ಷರ ಗಾತ್ರ

ಬೆಂಗಳೂರು: ಮೇ 5ರಿಂದ 11ರವರೆಗೆ ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಆಮ್ಲಜನಕದ ಬೇಡಿಕೆ ಇತ್ತು, ಮುಂದಿನ ಒಂದು ವಾರಕ್ಕೆ ಬೇಕಾಗುವ ಪ್ರಮಾಣ ಎಷ್ಟು ಎಂಬುದರ ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ರಾಜ್ಯಕ್ಕೆ ನೀಡುತ್ತಿರುವ ಆಮ್ಲಜನಕದ ಪ್ರಮಾಣ‌ ಮೇ 11ರಿಂದ 1,015 ಟನ್‌ಗೆ ಹೆಚ್ಚಳವಾಗಿದೆ ಎಂದು ರಾಜ್ಯ ಸರ್ಕಾರ ಸಲ್ಲಿಸಿದ ವಿವರವನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಪರಿಶೀಲಿಸಿತು. ರಾಜ್ಯದ ಪಾಲನ್ನು 1,200 ಟನ್‌ಗೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಪೀಠ ನಿರ್ದೇಶನ ನೀಡಿತ್ತು. ಈ ಸಂಬಂಧ ಅನುಸರಣಾ ವರದಿ ಸಲ್ಲಿಸಿಲ್ಲ ಎಂಬುದನ್ನೂ ಪೀಠ ಗಮನಿಸಿತು.

ಈ ವಿಷಯದ ಕುರಿತು ಬುಧವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುವುದು. ಸಭೆಯ ಫಲಿತಾಂಶವನ್ನು ಪೀಠಕ್ಕೆ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಮಾಹಿತಿ ನೀಡಿದರು. ವಿಚಾರಣೆಯನ್ನು ಪೀಠ ಗುರುವಾರಕ್ಕೆ ಮುಂದೂಡಿತು.

ರಾಜ್ಯದ ಆಮ್ಲಜನಕ ಕೋಟಾವನ್ನು 865 ಟನ್‌ನಿಂದ 965 ಟನ್‌ಗೆ ಹೆಚ್ಚಿಸಲಾಗಿದೆ ಎಂದು ಈ ಹಿಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಪೀಠಕ್ಕೆ ತಿಳಿಸಿತ್ತು. ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಆಗಿರುವ ಕಾರಣ ಮೇ 5ರೊಳಗೆ 1,792 ಟನ್‌ ಅಮ್ಲಜನಕ ಅಗತ್ಯವಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ದಿನಕ್ಕೆ 1,200 ಟನ್ ಆಮ್ಲಜನಕ ಪೂರೈಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT