ಬುಧವಾರ, ಆಗಸ್ಟ್ 17, 2022
25 °C

ಮಕ್ಕಳಿಗೆ ಬಿಸಿಯೂಟದ ಬದಲು ಅಡುಗೆ ಎಣ್ಣೆ, ಬೇಳೆ ಒದಗಿಸಲು ಹೈಕೋರ್ಟ್ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಆಹಾರ ಧಾನ್ಯ ಒದಗಿಸಲು ಡಿಸೆಂಬರ್ 5ರಂದೇ ಆದೇಶ ಹೊರಡಿಸಲಾಗಿದೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ಒಂದು ಕೆಜಿ ಅಯೊಡೈಸ್ಡ್‌ ಉಪ್ಪು, ತೊಗರಿ ಬೇಳೆ ಮತ್ತು ಅಡುಗೆ ಎಣ್ಣೆಯನ್ನು  ಐದು ತಿಂಗಳ ಲೆಕ್ಕಾಚಾರದಲ್ಲಿ (ಆಗಸ್ಟ್– 2020ರಿಂದ ಏಪ್ರಿಲ್–2021 ತನಕ ಅನ್ವಯವಾಗಲಿದೆ) ವಿತರಿಸಲಾಗುವುದು ಎಂದು ತಿಳಿಸಿದೆ.

ಕೋವಿಡ್ ಕಾರಣದಿಂದ ಆರು ತಿಂಗಳ ಕಾಲ ಮಕ್ಕಳು ಈ ಯೋಜನೆಯಿಂದ ವಂಚಿತರಾಗಿದ್ದು, ಅದನ್ನು ಸರಿದೂಗಿಸಲು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿತ್ತು.

‘ಉಪ್ಪು, ಎಣ್ಣೆ ಮತ್ತು ಬೇಳೆ ಸಂಗ್ರಹಿಸಿ ವಿತರಿಸಲು ಕರ್ನಾಟಕ ಆಹಾರ ನಿಗಮಕ್ಕೆ(ಕೆಎಸ್‌ಸಿಎಸ್‌ಸಿ) ನಿರ್ದೇಶನ ನೀಡಲಾಗಿದೆ. ಶಾಲೆಗಳ ಆರಂಭವಾಗಿ ಅಲ್ಲಿಯೇ ಅಡುಗೆ ಮಾಡುವ ವ್ಯವಸ್ಥೆ ಮತ್ತೆ ಜಾರಿಗೆ ಬರುವ ತನಕ ಈ ವ್ಯವಸ್ಥೆ ಮುಂದುವರಿಸಲು ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಪೀಠಕ್ಕೆ ಮಾಹಿತಿ ನೀಡಿದರು.

‘ಉಪ್ಪು ಮತ್ತು ಅಡುಗೆ ಎಣ್ಣೆ ಬದಲಿಗೆ ತೊಗರಿ ಬೇಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಸಾಧ್ಯವೇ ಎಂಬುದನ್ನು ಪರಿಗಣಿಸಬೇಕು. ಆದೇಶದಲ್ಲಿ ಇರುವಂತೆ ವಸ್ತುಗಳು ವಿತರಣೆಯಾದರೆ ಅದು ಮಧ್ಯಾ‌ಹ್ನದ ಬಿಸಿಯೂಟಕ್ಕೆ ಸಮನಾಗುವುದಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು