ಮಂಗಳವಾರ, ಜುಲೈ 5, 2022
26 °C

ಕಾಶ್ಮೀರ್‌ ಫೈಲ್ಸ್‌ ಟ್ರೇಲರ್‌ ಮಾತ್ರ, ಶೇ 95ರಷ್ಟು ಬಾಕಿ ಇದೆ: ಅಶ್ವತ್ಥ ನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್‌.ಪೇಟೆ (ಮಂಡ್ಯ ಜಿಲ್ಲೆ): ‘ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರ ಎಂದೋ ಬರಬೇಕಾಗಿತ್ತು, ಈ ಬಂದಿರುವುದು ಟ್ರೇಲರ್‌ ಮಾತ್ರ. ಇದರಲ್ಲಿ ಕೇವಲ ಶೇ 5ರಷ್ಟನ್ನು ತೋರಿಸಲಾಗಿದೆ, ಇನ್ನೂ ಶೇ 95ರಷ್ಟು ಬಾಕಿ ಇದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಶನಿವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್‌ ಮುಖಂಡರು ಟ್ರೇಲರ್‌ ನೋಡಿಯೇ ಜರ್ಜರಿತರಾಗಿದ್ದಾರೆ, ಮುಂದೆ  ಸರಣಿ ಚಿತ್ರಗಳು ಬರಲಿವೆ. ಕಾಶ್ಮೀರದಲ್ಲಿ ಹಿಂದೂಗಳು ಯಾವ ರೀತಿ ಅನ್ಯಾಯಕ್ಕೆ ಒಳಗಾಗಿದ್ದರು ಎಂಬುದನ್ನು ಈಗ ಸ್ಯಾಂಪಲ್‌ ಮಾತ್ರ ತೋರಿಸಲಾಗಿದೆ. ಇನ್ನೂ ಬಹಳ ಮುಖ್ಯ ಭಾಗಗಳನ್ನು ನೋಡುವುದು ಬಾಕಿ ಇದೆ. ಹಿಂದೂಗಳ ಹತ್ಯೆ ನಡೆಯುತ್ತಿದ್ದರೂ ಕಾಂಗ್ರೆಸ್‌ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದರು.

‘ಬಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸುವುದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ನಮ್ಮ ಮಕ್ಕಳು ವಿದ್ಯಾಭ್ಯಾಸದ ಮೂಲಕ ಕಲಿಯಬೇಕು. ಪಠ್ಯದಲ್ಲಿ ಅಳವಡಿಸುವ ಕುರಿತಂತೆ ಸಂಬಂದಪಟ್ಟ ಶಾಲಾ ಮಂಡಳಿ, ವಿಶ್ವವಿದ್ಯಾಲಯಗಳು ನಿರ್ಣಯ ಕೈಗೊಳ್ಳಲಿವೆ’ ಎಂದರು.

‘ಕಾಂಗ್ರೆಸ್‌ನವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ಕೋವಿಡ್‌ ಲಸಿಕೆ ಪಡೆಯುವುದಕ್ಕೂ ವಿರೋಧ ಮಾಡಿದ್ದರು. ಲಸಿಕೆ ಹಾಕಿಸಿಕೊಳ್ಳದಂತೆ ಪ್ರಚಾರ ಮಾಡಿದ್ದರು. ಇದರಿಂದ ಅವರ ಮನಸ್ಥಿತಿ ಹೇಗಿದೆ ಎಂಬುದು ತಿಳಿಯುತ್ತದೆ. ನಮ್ಮ ದೇಶದ ಜನರ ಭಾವನೆ, ಸಂಸ್ಕೃತಿ ವಿರೋಧ ಮಾಡಿ ಕಾಂಗ್ರೆಸ್‌ ಸ್ಥಿತಿ ಏನಾಗಿದೆ ನೋಡಿ, ದೇಶದಾದ್ಯಂತ ಕಡೆಗಣನೆಗೆ ಒಳಗಾಗಿದ್ದಾರೆ’ ಎಂದರು.

 ‘ಅಧಿವೇಶನ ಮುಗಿದ ಬಳಿಸಿ ಸಚಿವ ಸಂಪುಟ ವಿಸ್ತರಣೆಯಾಬಹುದು. ಮುಖ್ಯಮಂತ್ರಿಗಳು ಹೈಕಮಾಂಡ್‌ ಜೊತೆ ಮಾತನಾಡಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಸಚಿವ ಸ್ಥಾನ ಸಿಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ, ಅದರಂತೆ ಬಿ.ವೈ.ವಿಜಯೇಂದ್ರ ಅವರಿಗೂ ಇದೆ. ಈ ಕುರಿತು ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ’ ಎಂದರು.

‘ಬಸ್‌ ಅಪಘಾತದಲ್ಲಿ ತುಮಕೂರು ಜಿಲ್ಲೆಯ 8 ಮಂದಿ ಸಾವನ್ನಪ್ಪಿರುವುದು ಬಹಳ ದುಃಖಕರ ವಿಚಾರ. ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ. ಸದ್ಯ ಸಾರಿಗೆ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಬಸ್‌ಗಳ ಕಾರ್ಯಕ್ಷಮತೆ ಪ್ರಮಾಣ ಪತ್ರ ನೀಡುವ ಸಂಬಂಧ ಸುಧಾರಣ ಕ್ರಮ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು