ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ದುಬಾರಿ: ವೈದ್ಯರ ಸಲಹೆ ಮೀರಿ 117 ಮಂದಿ ಬಿಡುಗಡೆ

Last Updated 17 ಜೂನ್ 2021, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಕಪ್ಪು ಶಿಲೀಂಧ್ರದಿಂದ ಬಳಲುತ್ತಿರುವ 117 ರೋಗಿಗಳು ಚಿಕಿತ್ಸಾ ವೆಚ್ಚ ದುಬಾರಿ ಎಂಬ ಕಾರಣಕ್ಕೆ ವೈದ್ಯರ ಸಲಹೆಗೆ ವಿರುದ್ಧವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಕಪ್ಪು ಶಿಲೀಂಧ್ರ ಸೋಂಕಿತರಿಗೆ ಹಾಸಿಗೆ ಕಾಯ್ದಿರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲು ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ವಿಭಾಗೀಯ ಪೀಠ ನಿರ್ದೇಶನ ನೀಡಿತು.

‘ರಾಜ್ಯದಲ್ಲಿ ಒಟ್ಟು 2,871 ಕಪ್ಪು ಶಿಲೀಂಧ್ರ ಪ್ರಕರಣಗಳಿದ್ದು, 2,304 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಸರ್ಕಾರದ ಪರ ವಕೀಲರು ವಿವರ ಸಲ್ಲಿಸಿದರು.

‘ಜೂನ್ 17ರ ತನಕ 217 ಮಂದಿ ಮೃತಪಟ್ಟಿದ್ದು, ಇದನ್ನು ಗಮನಿಸಿದರೆ ಸಾವಿನ ಪ್ರಮಾಣ ಕೂಡ ಹೆಚ್ಚಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ₹11 ಲಕ್ಷ ವೆಚ್ಚವಾಗಿರುವ ಬಗ್ಗೆ ವಕೀಲರೊಬ್ಬರು ಬರೆದಿದ್ದ ಪತ್ರವನ್ನು ಅಮಿಕಸ್ ಕ್ಯೂರಿ ಅವರು ವಿಚಾರಣೆ ವೇಳೆ ಸಲ್ಲಿಸಿದರು.

‘ಕಪ್ಪು ಶಿಲೀಂಧ್ರ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಯಾವುದೇ ಕ್ರಮಗಳಿಲ್ಲ. ಹೀಗಾಗಿಯೇ, ಚಿಕಿತ್ಸೆ ವೆಚ್ಚ ದುಬಾರಿ ಎಂಬ ಕಾರಣಕ್ಕೆ ವೈದ್ಯರ ಸಲಹೆಗೆ ವಿರುದ್ಧವಾಗಿ 117 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಇದು ಕೋವಿಡ್‌ಗೆ ಸಂಬಂಧಿಸಿದ ಸೋಂಕಾಗಿರುವ ಕಾರಣ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಪೀಠ ತಿಳಿಸಿತು. ವಿಚಾರಣೆಯನ್ನು ಜೂ.21ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT