ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಜ್ಯ ಗ್ಯಾಂಗ್‌ನಿಂದ ಒಂದೂವರೆ ಕೆ.ಜಿ ಚಿನ್ನಾಭರಣ ಜಪ್ತಿ

Last Updated 22 ಜನವರಿ 2021, 19:14 IST
ಅಕ್ಷರ ಗಾತ್ರ

ಬೆಂಗಳೂರು: ಸರಣಿ ಕಳ್ಳತನ ಎಸಗುತ್ತಿದ್ದ ಅಂತರರಾಜ್ಯ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಬಂಧಿಸಿ 4 ಕೆ.ಜಿ ಚಿನ್ನಾಭರಣ ಜಪ್ತಿ ಮಾಡಿದ್ದ ನಗರದ ಸಿಸಿಬಿ ಪೊಲೀಸರು, ಇದೀಗ ಅದೇ ಗ್ಯಾಂಗ್‌ನಿಂದ ಮತ್ತೆ 1 ಕೆ.ಜಿ 500 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

‘ಮನೆಯಲ್ಲಿ ಕಳವು ಮಾಡುತ್ತಿದ್ದ ಆರೋಪದಡಿ ಉತ್ತರ ಪ್ರದೇಶದ ಫಯೂಮ್ ಅಲಿಯಾಸ್ ಎಟಿಎಂ ಫಯೂಮ್ (35) ಹಾಗೂ ಮುರಸಲೀಂ ಮೊಹಮ್ಮದ್ ಅಲಿಯಾಸ್ ಸಲೀಂ (42) ಎಂಬುವರನ್ನು ಇತ್ತೀಚೆಗಷ್ಟೇ ಬಂಧಿಸ ಲಾಗಿತ್ತು. ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ಆರೋಪಿಗಳು ಬಾಯ್ಬಿಟ್ಟ ಮಾಹಿತಿ ಆಧರಿಸಿ ಉತ್ತರ ಪ್ರದೇಶಕ್ಕೆ ಹೋಗಿದ್ದ ಪೊಲೀಸರು, ಅಲ್ಲಿಯ ಚಂದೋಸಿ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ’ ಎಂದೂ ಹೇಳಿದರು.

‘ಕಾರು ಹಾಗೂ ರೈಲಿನಲ್ಲಿ ನಗರದಿಂದ ನಗರಕ್ಕೆ ಸುತ್ತಾಡುತ್ತಿದ್ದ ಆರೋಪಿಗಳು, ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು. ಗ್ಯಾಂಗ್‌ನ ಸದಸ್ಯರಿಬ್ಬರನ್ನು ಹೈದರಾಬಾದ್ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಗ್ಯಾಂಗ್‌ನ ಇತರೆ ಸದಸ್ಯರ ಜೊತೆ ಸೇರಿ ಬೆಂಗಳೂರಿನಲ್ಲೂ ಕೃತ್ಯ ಎಸಗಿರುವುದಾಗಿ ಅವರಿಬ್ಬರು ಬಾಯ್ಬಿಟ್ಟಿದ್ದರು’ ಎಂದೂ ತಿಳಿಸಿದರು.

‘ಹೈದರಾಬಾದ್ ಪೊಲೀಸರು ನೀಡಿದ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಿ ಫಯೂಮ್ ಹಾಗೂ ಮುರುಸಲೀಂನನ್ನು ಬಂಧಿಸಲಾಗಿತ್ತು. ಸಂಜಯನಗರ, ಕೊಡಿಗೇಹಳ್ಳಿ, ಅನ್ನಪೂರ್ಣೇಶ್ವರಿನಗರ, ಬ್ಯಾಡರಹಳ್ಳಿ, ನಂದಿನಿ ಲೇಔಟ್, ರಾಜಗೋಪಾಲನಗರ, ಕೆ.ಜಿ.ಹಳ್ಳಿ, ಹೆಣ್ಣೂರು, ಅಮೃತಹಳ್ಳಿ, ಬಾಣಸವಾಡಿ, ಹೈಗ್ರೌಂಡ್ಸ್, ಜ್ಞಾನಭಾರತಿ ಹಾಗೂ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿರುವ 35 ಮನೆಗಳಲ್ಲಿ ಆರೋಪಿಗಳು ಕಳ್ಳತನ ಎಸಗಿದ್ದು ಗೊತ್ತಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT