ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಬರೆಯಲಾಗದ ಸ್ಥಿತಿ ಇದೆ: ಕವಿತಾ ಲಂಕೇಶ್‌

‘ಗೌರಿ ನೆನಹು’ ಕಾರ್ಯಕ್ರಮದಲ್ಲಿ ಕವಿತಾ ಲಂಕೇಶ್‌
Last Updated 5 ಸೆಪ್ಟೆಂಬರ್ 2021, 22:49 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಸ್ಥಿತಿ ಹಿಂದಿಗಿಂತಲೂ ಹೆಚ್ಚು ಹದಗೆಟ್ಟಿದೆ. ಈಗ ಪತ್ರಕರ್ತರ ಮೇಲೆ ಹಲ್ಲೆಗಳಾಗುತ್ತಿವೆ. ಸರ್ಕಾರದ ವಿರುದ್ಧ ಬರೆಯಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹೊತ್ತಿನಲ್ಲಿ ಅಪ್ಪ (ಪಿ.ಲಂಕೇಶ್) ಮತ್ತು ಗೌರಿ ಲಂಕೇಶ್‌ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬ ಯೋಚನೆ ಆಗಾಗ ಮೂಡುತ್ತಿರುತ್ತದೆ’ ಎಂದು ಗೌರಿ ಅವರ ಸಹೋದರಿ ಕವಿತಾ ಲಂಕೇಶ್‌ ತಿಳಿಸಿದರು.

ಗೌರಿ ಲಂಕೇಶ್‌ ಹತ್ಯೆಯಾಗಿ ನಾಲ್ಕು ವರ್ಷ ಆಗಿರುವ ಹಿನ್ನೆಲೆಯಲ್ಲಿಗೌರಿ ಮೆಮೋರಿಯಲ್ ಟ್ರಸ್ಟ್‌ ಹಮ್ಮಿಕೊಂಡಿದ್ದ ‘ಗೌರಿ ನೆನಹು’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

‘ಗೌರಿ ಹತ್ಯೆಯ ಕರಾಳ ನೆನಪು ಇನ್ನೂ ಮನಸ್ಸಿನಿಂದ ಮಾಸಿಲ್ಲ. ಆಕೆಯ ಹೋರಾಟವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಖುಷಿಯ ವಿಚಾರ’ ಎಂದರು.

ಲೇಖಕಿ ಬಿ.ಟಿ.ಲಲಿತಾ ನಾಯ್ಕ್, ‘ಅನ್ಯಾಯ ಖಂಡಿಸುವವರಿಗೆ ಗುಂಡೇಟು ಬೀಳುತ್ತಿರುವುದು ದೊಡ್ಡ ದುರಂತ. ಅದು ಹಿಂದೆಯೂ ಇತ್ತು. ಮುಂದೆಯೂ ಇರಲಿದೆ. ಇದಕ್ಕೆಲ್ಲ ಅಂಜಬಾರದು. ಅನ್ಯಾಯ ಹಾಗೂ ದೌರ್ಜನ್ಯದ ವಿರುದ್ಧ ಸಿಡಿದೇಳುವ ಸಂಕಲ್ಪವನ್ನು ಎಲ್ಲರೂ ಮಾಡಬೇಕು’ ಎಂದು ತಿಳಿಸಿದರು.

‘ಲಂಕೇಶ್‌ ಹಾಗೂ ಗೌರಿ ಲಂಕೇಶ್‌ ತಮ್ಮ ಬರಹಗಳ ಮೂಲಕಧಾರ್ಮಿಕ ಸಂಘಟನೆಗಳ ರಾಜಕೀಯವನ್ನು ಬಯಲು ಮಾಡುತ್ತಿದ್ದರು. ಈಗ ಜಾತೀಯತೆ, ಕೋಮುದೌರ್ಜನ್ಯ ಹೆಚ್ಚುತ್ತಿದೆ. ಇಂತಹ ಸಂದಿಗ್ಧತೆಯಲ್ಲೂ ದಿಟ್ಟತನದಿಂದ ನಾವೆಲ್ಲಾ ಹೋರಾಟ ನಡೆಸಬೇಕು. ಆ ಮೂಲಕ ಗೌರಿ ಆಶಯವನ್ನು ಸಾಕಾರಗೊಳಿಸಬೇಕು’ ಎಂದು ಹೇಳಿದರು.

ಗೌರಿ ಮೆಮೋರಿಯಲ್ ಟ್ರಸ್ಟ್ ಸದಸ್ಯ ನೂರ್ ಶ್ರೀಧರ್‌, ‘ಗೌರಿ ಎಲ್ಲರ ಹೃದಯದಲ್ಲಿ ಸ್ಥಾನ ಪಡೆದಿದ್ದರು. ದುಷ್ಕರ್ಮಿಗಳು ಹಾರಿಸಿದ ಗುಂಡು ಕೇವಲ ಗೌರಿ ಅವರ ಎದೆಗಷ್ಟೇ ಅಲ್ಲ, ಸಹೃದಯರ ಮನಸ್ಸನ್ನೂ ಘಾಸಿಗೊಳಿಸಿತ್ತು. ಅದು ಗೌರಿ ಘರ್ಜನೆಯಾಯಿತು. ಭಯದ ಬದಲು ಮತ್ತಷ್ಟು ವಿಶ್ವಾಸ, ಹೋರಾಟದ ಸಂಕಲ್ಪಕ್ಕೆ ನಾಂದಿಯಾಯಿತು’ ಎಂದು ತಿಳಿಸಿದರು.

ಗೌರಿ ಅವರ ತಾಯಿ ಇಂದಿರಾ ಲಂಕೇಶ್, ಗೌರಿ ಮೆಮೋರಿಯಲ್ ಟ್ರಸ್ಟ್‌ನ ಕಾರ್ಯದರ್ಶಿ ದೀಪು, ಕೆ.ಎಲ್.ಅಶೋಕ್, ಚಿಂತಕ ಶಿವಸುಂದರ್‌, ಹೋರಾಟಗಾರರಾದ ಸಿರಿಮನೆ ನಾಗರಾಜು, ವಾಸು, ಮಲ್ಲಿಗೆ ಸಿರಿಮನೆ, ಪ್ರೊ.ನಗರಿ ಬಾಬಯ್ಯ,ಮಲ್ಲೂ ಕುಂಬಾರ್‌, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್‌ ಬೆಂಕಿಕೆರೆ, ಹೇಮಂತ್,ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಕಾರ್ಯಕರ್ತೆ ಚೆನ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT