ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಬಿಬೆಟ್ಟ: ಪರೀಕ್ಷಾರ್ಥ ಸ್ಫೋಟಕ್ಕೆ ಸಿದ್ಧತೆ

ಕಲ್ಲುಗಣಿಗಾರಿಕೆಯಿಂದ ಕೆಆರ್‌ಎಸ್‌ ಜಲಾಶಯಕ್ಕೆ ಅಪಾಯ, ಪರೀಕ್ಷೆಗೆ ರೈತರ ವಿರೋಧ
Last Updated 7 ಜುಲೈ 2021, 20:38 IST
ಅಕ್ಷರ ಗಾತ್ರ

ಮಂಡ್ಯ: ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟ ಹಾಗೂ ಸುತ್ತಮುತ್ತ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಸಮೀಪದ ಕೆಆರ್‌ಎಸ್‌ ಜಲಾಶಯಕ್ಕೆ ಉಂಟಾಗುತ್ತಿರುವ ಪರಿಣಾಮಗಳ ಅಧ್ಯಯನಕ್ಕೆ ಪರೀಕ್ಷಾರ್ಥ ಸ್ಫೋಟ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಆದರೆ. ‘ಅದಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ರೈತರು ಹೇಳಿದ್ದಾರೆ.

’ಕಲ್ಲು ಗಣಿ ಸ್ಫೋಟದಿಂದ ಜಲಾಶಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಂಡ 2018, ಸೆ.24ರಂದು ವರದಿ ನೀಡಿತ್ತು. ಗಣಿ ಚಟುವಟಿಕೆಯಿಂದ ಶಬ್ದ ಕೇಳಿ ಬರುತ್ತಿದ್ದು 10 ಕಿ.ಮೀ ದೂರದಲ್ಲಿರುವ ಜಲಾಶಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ’ ಎಂದಿತ್ತು. ’ಹೀಗಾಗಿ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಬೇಕು’ ಎಂದು ಶಿಫಾರಸು ಮಾಡಿತ್ತು.

ನಂತರ, ’ಜಲಾಶಯದ ಆಸುಪಾಸಿನಲ್ಲಿ ಶಾಶ್ವತವಾಗಿ ಗಣಿ ಚಟುವಟಿಕೆ ನಿಷೇಧಿಸಬೇಕು’ ಒಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಹೋರಾಟ ಆರಂಭಿಸಿದ್ದವು. ಆದರೆ ಖಾಸಗಿ ಭೂವಿಜ್ಞಾನಿಗಳ ನೆರವು ಪಡೆದಿದ್ದ ಗಣಿ ಮಾಲೀಕರು, 'ಗಣಿಗಾರಿಕೆಯಿಂದ ಜಲಾಶಯಕ್ಕೆ ಯಾವುದೇ ಅಪಾಯ ಇಲ್ಲ‌’ ಎಂದು ವರದಿ ಪಡೆದಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು.

ನಂತರ ಜಿಲ್ಲಾಡಳಿತ ಗಣಿ ಚಟುವಟಿಕೆಯ ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ಪರೀಕ್ಷೆ ನಡೆಸಲು ನಿರ್ಧರಿಸಿತ್ತು. ಅದರಂತೆ ಕಾವೇರಿ ನೀರಾವರಿ ನಿಗಮ ಜಾರ್ಖಂಡ್‌, ಧನಬಾದ್‌ನ ಸಿಎಸ್‌ಐಆರ್‌–ಸಿಐಎಂಎಫ್‌ಆರ್‌ (ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಮಂಡಳಿ– ಗಣಿ ಮತ್ತು ಇಂಧನ ಸಂಶೋಧನಾ ಕೇಂದ್ರೀಯ ಸಂಸ್ಥೆ) ವಿಜ್ಞಾನಿಗಳಿಗೆ ಮನವಿ ಮಾಡಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ವಿಜ್ಞಾನಿಗಳು ಜಲಾಶಯದ ಆಸುಪಾಸಿನ ಮೂರು ಕಡೆ ಪರೀಕ್ಷಾರ್ಥ ಸ್ಫೋಟಕ್ಕೆ ಜಾಗ ಗುರುತು ಮಾಡಿದ್ದರು. ಸರ್ಕಾರವೂ ಅನುಮತಿ ನೀಡಿತ್ತು.

ಕೋವಿಡ್‌ ಕಾರಣ ಪರೀಕ್ಷಾರ್ಥ ಸ್ಫೋಟ ನನೆಗುದಿಗೆ ಬಿದ್ದಿದ್ದು, ಈಗ ಶೀಘ್ರ ಪರೀಕ್ಷಾರ್ಥ ಸ್ಫೋಟ ನಡೆಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿಜ್ಞಾನಿಗಳಿಗೆ ಮನವಿ ಮಾಡಿದ್ದಾರೆ.

‘ಪರೀಕ್ಷೆಗೆ ತಗಲುವ ₹ 18 ಲಕ್ಷ ಹಣವನ್ನು ಕಾವೇರಿ ನೀರಾವರಿ ನಿಗಮವು ಈಗಾಗಲೇ ಸಂಸ್ಥೆಗೆ ಪಾವತಿಸಿದೆ. ₹ 8 ಲಕ್ಷ ಮೌಲ್ಯದ ಸ್ಫೋಟಕದ ವೆಚ್ಚವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಭರಿಸಲಿದೆ. ಸ್ಫೋಟದ ದಿನಾಂಕ ಪ್ರಕಟಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವತಿ ತಿಳಿಸಿದರು.

ವಿರೋಧ: ಪರೀಕ್ಷಾರ್ಥ ಸ್ಫೋಟವನ್ನು ರೈತರು ಮೊದಲಿನಿಂದಲೂ ವಿರೋಧಿಸುತ್ತಿದ್ದಾರೆ. 2019ರಲ್ಲೇ ಪುಣೆಯ ಕೇಂದ್ರ ಜಲ ಮತ್ತು ಶಕ್ತಿ ಸಂಶೋಧನಾ ಕೇಂದ್ರದ (ಸಿಡಬ್ಲ್ಯುಪಿಆರ್‌ಎಸ್‌) ಭೂವಿಜ್ಞಾನಿಗಳ ತಂಡವನ್ನು ರೈತ ಸಂಘಟನೆಗಳು ಗೋಬ್ಯಾಕ್‌ ಚಳವಳಿ ನಡೆಸಿ ವಾಪಸು ಕಳಿಸಿದ್ದವು.

’ಕಲ್ಲು ಗಣಿಗಾರಿಕೆಯಿಂದಾಗಿ ಕೆಆರ್‌ಎಸ್‌ಗೆ ಧಕ್ಕೆ ಉಂಟಾಗಲಿದೆ ಎಂದು ಸರ್ಕಾರದ ಅಂಗಸಂಸ್ಥೆಯೇ ಹೇಳಿರುವುದರಿಂದ ಪರೀಕ್ಷಾರ್ಥ ಸ್ಫೋಟಕ್ಕೆ ಅವಕಾಶ ನೀಡುವುದಿಲ್ಲ’ ಎಂದು ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆಂಪೂಗೌಡ ಹೇಳಿದರು.

ಸುಳ್ಳು ಸುದ್ದಿ ನಂಬಿದ ಸುಮಲತಾ: ನಿಗಮ
‘ಕೆಆರ್‌ಎಸ್‌ ಬಿರುಕು ಬಿಟ್ಟಿದೆ’ ಎಂಬ ಸಂಸದೆ ಸುಮಲತಾ ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಕಾವೇರಿ ನೀರಾವರಿ ನಿಗಮ ಸ್ಪಷ್ಟನೆ ನೀಡಿದೆ.

‌’ಸದ್ಯ ಕೆಆರ್‌ಎಸ್‌ನಲ್ಲಿ ಕ್ರೆಸ್ಟ್‌ ಗೇಟ್‌ ಬದಲಾಯಿಸಲು ಕಲ್ಲುಗಳನ್ನು ತೆರವುಗೊಳಿಸಲಾಗಿತ್ತು. ಕೆಲ ಕಿಡಿಗೇಡಿಗಳು ಅದರ ವಿಡಿಯೊ ಮಾಡಿ ಜಲಾಶಯ ಬಿರುಕುಬಿಟ್ಟಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಸುದ್ದಿ ಹರಡಿದ್ದರು. ಅದನ್ನೇ ನಂಬಿದ ಸಂಸದೆ ಸುಮಲತಾ ಜಲಾಶಯ ಬಿರುಕುಬಿಟ್ಟಿದೆ ಎಂದು ಹೇಳಿದ್ದಾರೆ’ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.

**
ಜಲಾಶಯಕ್ಕೆ ಧಕ್ಕೆ ಆಗುತ್ತಿರುವುದನ್ನು ಪ್ರಶ್ನಿಸಿದರೆ ಮಾಜಿ ಸಿ.ಎಂ ಸೇರಿ ಜಿಲ್ಲೆಯ ಶಾಸಕರು ಬೆದರಿಕೆಯೊಡ್ಡುತ್ತಿದ್ದಾರೆ. ಅವರೆಲ್ಲ ಶಾಸಕರೋ ಅಥವಾ ಭಯೋತ್ಪಾದಕರೋ.
-ಸುಮಲತಾ, ಸಂಸದೆ, ಮಂಡ್ಯ

*
ಮಂಡ್ಯದ ಸಂಸದರು ಕಲ್ಲು ಗಣಿ ಮಾಲೀಕರಿಂದ ಹಣ ವಸೂಲಿಗಾಗಿಯೇ ಸ್ಥಳ ಪರಿಶೀಲನೆ ನೆಪದಲ್ಲಿ ಬೇಬಿ ಬೆಟ್ಟಕ್ಕೆ ಹೋಗಿರಬಹುದು
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT