ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಎಲ್‌ ನಿಯಮ ಬದಲಿಲ್ಲ: ಸಚಿವ ಉಮೇಶ ಕತ್ತಿ ಸ್ಪಷ್ಟನೆ

Last Updated 15 ಫೆಬ್ರುವರಿ 2021, 20:24 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್, ಟಿ.ವಿ, ರೆಫ್ರಿಜರೇಟರ್‌ ಹೊಂದಿರುವವರ ಬಿಪಿಎಲ್‌ ಕಾರ್ಡ್‌ ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದ್ದ ಆಹಾರ ಸಚಿವ ಉಮೇಶ ಕತ್ತಿ, ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಈಗ ಜಾರಿಯಲ್ಲಿರುವ ನಿಯಮಗಳೇ ಮುಂದುವರಿಯುತ್ತವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಈ ಕುರಿತು ಪ್ರಕಟಣೆ ಹೊರಡಿಸಿರುವ ಸಚಿವ ಕತ್ತಿ, 2016 ಮತ್ತು 2017 ರಲ್ಲಿ ತಿದ್ದುಪಡಿ ಮಾಡಿರುವ ಆದೇಶವನ್ನೇ ಪಾಲಿಸಲಾಗುತ್ತದೆ. ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಕತ್ತಿ ಹೇಳಿದ್ದೇನು: ಟಿ.ವಿ, ರೆಫ್ರಿಜರೇಟರ್‌, ಬೈಕ್‌ ಮತ್ತು ಹೆಚ್ಚು ಜಮೀನು ಹೊಂದಿರುವವರು. ಸರ್ಕಾರಿ, ಅರೆ ಸರ್ಕಾರಿ ನೌಕರರು ಹಾಗೂ ₹1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ಬಿಪಿಎಲ್‌ ಕಾರ್ಡ್‌ ಹೊಂದುವಂತಿಲ್ಲ. ಅಂತಹವರು ಬಿಪಿಎಲ್ ಕಾರ್ಡ್‌ ಹೊಂದಿದ್ದರೆ ಕೂಡಲೇ ಅದನ್ನು ಮರಳಿಸಬೇಕು. ಇದಕ್ಕೆ ಮಾರ್ಚ್‌ 31 ಗಡುವು ನಿಗದಿ ಮಾಡಲಾಗಿದೆ ಎಂದು ಕತ್ತಿ ಬೆಳಗಾವಿಯಲ್ಲಿ ಹೇಳಿದ್ದರು.

ಮುಂಬರುವ ದಿನಗಳಲ್ಲಿ ಸಮೀಕ್ಷೆ ನಡೆಸಿ ಅಕ್ರಮವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿರುವವರನ್ನು ಪತ್ತೆ ಮಾಡಿ ರದ್ದು ಮಾಡುವುದಾಗಿಯೂ ಹೇಳಿದ್ದರು. ಈ ಹೇಳಿಕೆಯ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

‘ನೀವು ₹2000 ಕ್ಕೆ ಟಿವಿ ಸೆಟ್‌ ಖರೀದಿಸಬಹುದು. ಇದರ ಆಧಾರದಲ್ಲಿ ಬಿಪಿಎಲ್‌ ಕಾರ್ಡ್‌ ರದ್ದು ಮಾಡಿದರೆ, ಬಡವರು ಎಲ್ಲಿಗೆ ಹೋಗಬೇಕು. ಬಿಜೆಪಿಯ ಬಡವರ ವಿರೋಧಿ ನೀತಿಗೆ ಇದು ನಿದರ್ಶನ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಪಿಎಲ್‌ ಕಾರ್ಡ್‌ಗೆ ಯಾರು ಅರ್ಹರಲ್ಲ: 2017 ರ ಮಾರ್ಚ್‌ನಲ್ಲಿ ಹೊರಡಿಸಿದ ಆದೇಶದ ಪ್ರಕಾರ, ಬಿಪಿಎಲ್ ಕಾರ್ಡ್‌ ಪಡೆಯಲು ಅರ್ಹರಲ್ಲದ ಕುಟುಂಬಗಳ ಮಾನದಂಡ–

* ಸರ್ಕಾರ, ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ–ಮಂಡಳಿಗಳ ಕಾಯಂ ನೌಕರರು

* ಆದಾಯ ತೆರಿಗೆ, ವೃತ್ತಿ ತೆರಿಗೆ, ಸೇವಾ ತೆರಿಗೆ ಪಾವತಿಸುವ ಕುಟುಂಬಗಳು

* ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್‌ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು. ನಗರ ಪ್ರದೇಶಗಳಲ್ಲಿ 1,000 ಚದರಡಿಗಿಂತಲೂ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವ ಕುಟುಂಬಗಳು

* ಜೀವನೋಪಾಯಕ್ಕಾಗಿ ಸ್ವಂತವಾಗಿ ಓಡಿಸುವ ವಾಣಿಜ್ಯ ವಾಹನಗಳಾದ ಟ್ರ್ಯಾಕ್ಟರ್‌, ಮ್ಯಾಕ್ಸಿಕ್ಯಾಬ್‌, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿರುವ ಕುಟುಂಬಗಳನ್ನು ಬಿಟ್ಟು, ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಗಳು

* ತಿಂಗಳಿಗೆ 150 ಯುನಿಟ್‌ಗಳಿಗಿಂತಲೂ ಹೆಚ್ಚಿನ ವಿದ್ಯುತ್‌ ಬಳಕೆ ಮಾಡುವ ಕುಟುಂಬಗಳು

* ವಾರ್ಷಿಕ ಆದಾಯ ₹1.20 ಲಕ್ಷಕ್ಕೂ ಅಧಿಕ ಆದಾಯ ಹೊಂದಿರುವ ಕುಟುಂಬಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT