ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸೆಲೆಬ್ರಿಟಿ ಲೈವ್: ‘ಹಾಸ್ಯ ಒಪ್ಪುವ ಔದಾರ್ಯವೇ ಇಲ್ಲ!’

Last Updated 11 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಮೈಸೂರು: ‘ಸ್ಟ್ಯಾಂಡ್ ಅಪ್ ಕಾಮೆಡಿಯನ್‌ಗಳು, ದೇಶದ ಕಲಾವಿದರು ವ್ಯವಸ್ಥೆಯ ಹುಳುಕು ತೋರಿಸುತ್ತಿದ್ದಾರೆ. ಜನರ ಪರವಾಗಿ ಮಾತನಾಡುತ್ತಿದ್ದಾರೆ. ಎಲ್ಲಿ ವ್ಯವಸ್ಥೆ ಹದಗೆಟ್ಟಿರುತ್ತದೆಯೋ ಅಲ್ಲಿ ಕಲೆಯು ಪ್ರತಿಭಟಿಸಬೇಕಾಗುತ್ತದೆ. ಆದರೆ, ಭಾರತದಲ್ಲಿನ ಯಾವುದೇ ವ್ಯವಸ್ಥೆಗೆ ಕಲಾವಿದರ ವಿಮರ್ಶೆಯನ್ನು ತಾಳಿಕೊಳ್ಳುವ ಶಕ್ತಿ ಇಲ್ಲ. ಸರ್ಕಾರದ ಅಕಾಡೆಮಿ, ಸಂಸ್ಥೆ ಗಳಲ್ಲೂ ಪಕ್ಷದ ಸಿದ್ಧಾಂತವನ್ನು ಒಪ್ಪಿ ಬರುವವರೇ ತುಂಬಿಕೊಳ್ಳುತ್ತಿದ್ದಾರೆ....’

–ಶನಿವಾರ ನಡೆದ ‘ಪ್ರಜಾವಾಣಿ’ ಸೆಲೆಬ್ರಿಟಿ ಲೈವ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾಸ್ಯ ಭಾಷಣಕಾರ ಪ್ರೊ.ಎಂ.ಕೃಷ್ಣೇಗೌಡ, ಎಂದಿನ ಹಾಸ್ಯ ದಾಟಿಯಲ್ಲಿಯೇ ದೇಶದ ಸದ್ಯದ ಆಗು–ಹೋಗುಗಳ ಕುರಿತೂ ಗಂಭೀರವಾದ ಚಿಕಿತ್ಸಕ ಮಾತುಗಳನ್ನಾಡಿದರು.

‘ನಾವು ಮಾತು ಸೋತ ಭಾರತ ದಲ್ಲಿದ್ದೇವೆ. ಜನರಲ್ಲಿ ಔದಾರ್ಯ, ಪ್ರಾಮಾಣಿಕತೆ ಮಾಯವಾಗಿದೆ. ಮಾತಿಗೆ ತಕ್ಕ ಹಾಗೆ ಬದುಕುತ್ತಿಲ್ಲ. ಜನರು ಮನಸ್ಸನ್ನು ಉದಾರವಾಗಿಟ್ಟುಕೊಂಡಾಗ ಸಮಾಜ ಸೌಖ್ಯವಾಗಿರುತ್ತದೆ’ ಎಂದು ಪ್ರತಿಪಾದಿಸಿದರು.

‘ವಿಮರ್ಶಕರಲ್ಲಿ ಜನಪರರು ಕಡಿಮೆ. ಅವರಿಗೆ ಸಂಘಟನೆಯಾಗಿ ಚಾಚಿಕೊಳ್ಳುವ ಶಕ್ತಿ ಇಲ್ಲ. ಇರುವ ಮೂರ್ನಾಲ್ಕು ಜನರಿಗೆ ಪ್ರತಿಕ್ರಿಯೆ ನೀಡಲು ಆಗುತ್ತಿಲ್ಲ– ಬಿಡುತ್ತಿಲ್ಲ. ನಾನು ಸುಪ್ರಭಾತದ ಟ್ಯೂನ್‌ನಲ್ಲಿ ಅಣಕು ಹಾಸ್ಯ ಹೇಳಿದಾಗ ವಿರೋಧ ವ್ಯಕ್ತವಾಯಿತು. ಹಾಡು– ಸಂಗೀತವೊಂದು ಇಡೀ ಸಂಸ್ಕೃತಿ, ಪರಂಪರೆಯನ್ನು ನಾಶ ಮಾಡುತ್ತದೆ ಎನ್ನುವುದೇ ಬಾಲಿಶ. ಅಂಥವರಿಗೆ ಪ್ರತಿಕ್ರಿಯೆ ನೀಡಬೇಕು ಎಂದು ನನಗೆ ಅನಿಸುವುದೂ ಇಲ್ಲ. ಸ್ವವಿಮರ್ಶೆ ಇಲ್ಲದಿದ್ದರೆ ಯಾವುದೇ ಪಕ್ಷ, ಗುಂಪು, ಸಂಘಟನೆ ಉದ್ಧಾರವಾಗುವುದಿಲ್ಲ’ ಎಂದು ಹೇಳಿದರು.

’ರಾಜಕೀಯದಿಂದ ದೂರ ಇರಬೇಕಿದ್ದ ಸಾಹಿತಿ ಕಲಾವಿದರೂ ಒಂದು ಪಕ್ಷದ ಬಾವುಟ ಹಿಡಿದಿದ್ದಾರೆ. ಅವರಿಗೆ ಪಕ್ಷದ ಹುಳುಕುಗಳು ಕಾಣುವುದೇ ಇಲ್ಲ. ನಮ್ಮ ಚೌಕಟ್ಟನ್ನು ದಾಟುವ ಪ್ರಯತ್ನ ಮಾಡುತ್ತಿಲ್ಲ. ಪೂರ್ವಗ್ರಹಗಳಲ್ಲಿ ಹೂತು ಹೋಗಿ ದ್ದೇವೆ. ಮನುಷ್ಯ ವಾಸ್ತವವಾದಿಯಾಗುತ್ತಿದ್ದಾನೆ. ಏನು ಮಾಡಿದರೂ ಅಧಿಕಾರಕ್ಕಾಗಿಯೇ. ಎಲ್ಲವೂ ವಾಣಿಜ್ಯಮಯವಾಗಿದೆ. ವಾಣಿಜ್ಯ ಯಶಸ್ಸನ್ನು ಪಡೆದರೆ ಸಾಕು ಎಂಬ ಮನೋಭಾವ ಹಾಸ್ಯಗಾರರು ಸೇರಿದಂತೆ ಎಲ್ಲರಿಗೂ ಬಂದಿದೆ’ ಎಂದರು.

’ಜನಪದರ ವಿವೇಕವು ಸಾಕ್ಷರತೆಯ ಆಚೆಗೂ ಇದೆ. ಶ್ರಮ ಸಮಾಜದ ಜ್ಞಾನದ ಹರಿವು ಅವರ ಭಾಷಾ ಸೊಗಡಿನಲ್ಲಿದೆ. ಶುದ್ಧ ಕನ್ನಡವೆನ್ನುವವರ ಮಾತನ್ನು ಕೇಳಲು ಆಗುವುದಿಲ್ಲ. ಕಿವಿ ಉರಿಯುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಾಸ್ಯ ಮಾಡದ ಸ್ಥಿತಿ...

‘ಯಾರು ಯಾರನ್ನೂ ಹಾಸ್ಯ ಮಾಡದ ಸ್ಥಿತಿಗೆ ಬಂದಿದ್ದೇವೆ. ಯಾರು ಬೇಜಾರಾಗುತ್ತಾರೋ.. ಯಾರಿಗೆ ನೋವಾಗುತ್ತದೋ.. ಎನ್ನುವಂತೆ ಮಾತನಾಡುತ್ತಿದ್ದೇವೆ. ಬಿಡುಬೀಸಾಗಿ ಹಾಸ್ಯ ಮಾಡುವವರು, ತಾಳಿಕೊಂಡು ಆನಂದಿಸುವವರು ಇಲ್ಲವಾಗಿದ್ದಾರೆ. ಈಗಿರುವುದೆಲ್ಲ ಲೆಕ್ಕಾಚಾರದ ಹಾಸ್ಯ. ಧರ್ಮ, ಜಾತಿ, ಪಂಥದ ಕುರಿತು ಪ್ರಶ್ನಿಸಿದರೆ, ಹಾಸ್ಯ ಮಾಡಿದರೆ ತಡೆದು
ಕೊಳ್ಳುವವರು ಈಗಿಲ್ಲ. ವಿದೇಶದಲ್ಲಿರುವ ಕನ್ನಡಿಗರಲ್ಲೂ ಭಿನ್ನಭೇದ ನುಸುಳಿದೆ’ ಎಂದು ಕೃಷ್ಣೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT