ಭಾನುವಾರ, ಜನವರಿ 17, 2021
18 °C

ಸಂಪುಟ ವಿಸ್ತರಣೆ: ಪ್ರಭಾವ, ಒತ್ತಡಕ್ಕೆ ಮಣೆ, ಯುವಕರಿಗೆ ಸಿಗದ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು

ಬೆಂಗಳೂರು: ಪ್ರಭಾವ, ಒತ್ತಡಗಳಿಗೆ ಮಣಿದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಹುತೇಕ ಹಳೇ ಮುಖಗಳಿಗೇ ಮಣೆ ಹಾಕಿದ್ದಾರೆ. ಜಾತಿವಾರು, ಪ್ರಾದೇಶಿಕ ಸಮತೋಲನ ಕಾಪಾಡುವ ಮತ್ತು ಉತ್ಸಾಹಿ ಯುವ ಶಾಸಕರಿಗೆ ವಿಸ್ತರಣೆ ವೇಳೆ ಮನ್ನಣೆ ನೀಡಿಲ್ಲ ಎಂಬ ಅಸಮಾಧಾನದ ಹೊಗೆ ಬಿಜೆಪಿಯಲ್ಲಿ ಎದ್ದಿದೆ.

ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ: ಏಳು ನೂತನ ಸಚಿವರ ಪ್ರಮಾಣ ಸ್ವೀಕಾರ

ಇದರಿಂದ ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ಅಸಮಾಧಾನದ ಬಿರುಗಾಳಿ ಎದ್ದರೂ ಅಚ್ಚರಿ ಇಲ್ಲ. ಎರಡರಿಂದ ಮೂರು ಬಾರಿ ಗೆದ್ದ ಯುವ ಶಾಸಕರು ಈ ವಿಸ್ತರಣೆಯಿಂದ ಆಕ್ರೋಶಗೊಂಡಿದ್ದಾರೆ. ಪಕ್ಷ ಮತ್ತು ಸಂಘ ನಿಷ್ಠ ಶಾಸಕರು ತಮ್ಮ ಸಿಟ್ಟನ್ನು ಅದುಮಿಟ್ಟುಕೊಂಡಿದ್ದಾರೆ ಎಂದು ಪಕ್ಷದ ಹಿರಿಯರೇ ಹೇಳಲಾರಂಭಿಸಿದ್ದಾರೆ.

ವಿಧಾನಪರಿಷತ್‌ ಸದಸ್ಯರಾದ ಎಂ.ಟಿ.ಬಿ.ನಾಗರಾಜ್‌ ಮತ್ತು ಆರ್‌.ಶಂಕರ್‌ ಅವರಿಗೆ ಮಾತುಕೊಟ್ಟಂತೆ ಅನಿವಾರ್ಯವಾಗಿ ಸಂಪುಟದಲ್ಲಿ ಅವಕಾಶ ನೀಡಿದ್ದರೆ, ಆರ್‌ಎಸ್‌ಎಸ್‌ ಸಲಹೆ ಮೇರೆಗೆ ಬಿಜೆಪಿಯ ಹಿರಿಯ ಶಾಸಕ ಎಸ್‌.ಅಂಗಾರ ಅವರಿಗೆ ಮೊದಲ ಬಾರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.

‘ಕತ್ತಿ, ನಿರಾಣಿ, ಲಿಂಬಾವಳಿ ಮತ್ತು ಯೋಗೇಶ್ವರ್‌ ಅವರು ಪ್ರಭಾವ ಮತ್ತು ಒತ್ತಡ ಹೇರಿಯೇ ಸಂಪುಟಕ್ಕೆ ಸೇರ್ಪಡೆ ಆಗಿದ್ದಾರೆ. ಇದರಿಂದಾಗಿ ಉತ್ಸಾಹಿ ಯುವ ಶಾಸಕರಿಗೆ ಸ್ಥಾನ ಕಲ್ಪಿಸುವ ಅವಕಾಶ ತಪ್ಪಿ ಹೋಗಿದೆ. ಸಚಿವರಾದವರಲ್ಲಿ ಕೆಲವರು ವಿವಿಧ ಕಾರಣಗಳಿಗೆ ವಿವಾದಗಳಿಗೆ ಒಳಗಾದವರು ಇದ್ದಾರೆ. ಮುಂದಿನ ದಿನಗಳಲ್ಲಿ ಕೆಲವರಿಂದಾದರೂ ಪಕ್ಷಕ್ಕೆ ಇಕ್ಕಟ್ಟು ಸೃಷ್ಟಿಯಾದರೂ ಅಚ್ಚರಿ ಇಲ್ಲ’ ಎಂಬುದು ಬಿಜೆಪಿಯ ಆಂತರಿಕ ವಲಯದ ಮಾತುಗಳು.

ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದ ಉಮೇಶ ಕತ್ತಿ ಅವರಿಗೆ ಮಂತ್ರಿ ಮಾಡುವುದಾಗಿ ಯಡಿಯೂರಪ್ಪ ನಿರಂತರ ಭರವಸೆ ನೀಡುತ್ತಲೇ ಬಂದಿದ್ದರು. ‘ಸಚಿವ ಸ್ಥಾನ ನೀಡದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ’ ಎಂಬ ಎಚ್ಚರಿಕೆಯನ್ನು ಕತ್ತಿ ನೀಡಿದ್ದರು.

ಮುರುಗೇಶ್‌ ನಿರಾಣಿ ಪರ ಪಂಚಮಸಾಲಿ ಮಠಾಧೀಶರೂ ಸೇರಿದಂತೆ ಹಲವರಿಂದ ಒತ್ತಡ ಹಾಕಿಸಿದ್ದರು. ಈ ಮೂಲಕ ಯಡಿಯೂರಪ್ಪ ಅವರ ಕೆಂಗಣ್ಣಿಗೂ ಗುರಿಯಾಗಿದ್ದರು. ಯೋಗೇಶ್ವರ್ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ, ವಿಧಾನಪರಿಷತ್‌ ಸದಸ್ಯರಾಗಿ ಸಚಿವ ಸ್ಥಾನವನ್ನೂ ಗಿಟ್ಟಿಸಿದರು. ಆಪರೇಷನ್‌ ಕಮಲದಲ್ಲಿ ಮುಂಚೂಣಿಯಲ್ಲಿದ್ದು, ಬಳಿಕ ಸಚಿವ ಸ್ಥಾನಕ್ಕಾಗಿ ಒತ್ತಡ ತಂತ್ರವನ್ನು ಅನುಸರಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಇದನ್ನೂ ಓದಿ: Live: ಸಚಿವ ಸಂಪುಟ ವಿಸ್ತರಣೆ- ಯೋಗೇಶ್ವರ್‌ಗೆ ಮಂತ್ರಿ ಸ್ಥಾನ ಏಕೆ? ವಿಶ್ವನಾಥ್ ಕಿಡಿ

ಅರವಿಂದ ಲಿಂಬಾವಳಿ ಮತ್ತು ಯೋಗೇಶ್ವರ್ ಅವರು ದೆಹಲಿ ಮಟ್ಟದಲ್ಲಿ ಪ್ರಭಾವ ಬೀರಿ ಸಂಪುಟವನ್ನು ಸೇರಿದ್ದಾರೆ. ಲಿಂಬಾವಳಿ ಸೇರ್ಪಡೆಗೆ ಯಡಿಯೂರಪ್ಪ ಅವರಿಗೆ ಒಲವು ಇರಲಿಲ್ಲ. ಆದರೆ ವರಿಷ್ಠರ ಮಾತಿಗೆ ಒಪ್ಪಲೇ ಬೇಕಾಯಿತು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ.

ಲಿಂಗಾಯತ, ಒಕ್ಕಲಿಗರದ್ದೇ ಪ್ರಾಬಲ್ಯ

ಸಚಿವ ಸಂಪುಟ ವಿಸ್ತರಣೆಯಿಂದಾಗಿ ಯಡಿಯೂರಪ್ಪ ಸಂಪುಟದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಂಖ್ಯಾ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗಿದೆ. ಲಿಂಗಾಯತ ಸಚಿವರ ಸಂಖ್ಯೆ 9 ರಿಂದ 11, ಒಕ್ಕಲಿಗ ಸಚಿವರ ಸಂಖ್ಯೆ 5 ರಿಂದ 7 ಕ್ಕೆ ಏರಿದೆ.

ಎರಡು ದಶಕಗಳ ಈಚೆಗೆ ರಚನೆಯಾದ ಸರ್ಕಾರದಲ್ಲಿ ಸಿಗದಷ್ಟು ಪ್ರಾತಿನಿಧ್ಯ ಕುರುಬ ಸಮುದಾಯಕ್ಕೆ ಸಿಕ್ಕಂತಾಗಿದೆ. ಈ ಸಮುದಾಯದ ಸಚಿವರ ಪ್ರಾತಿನಿಧ್ಯ 2 ರಿಂದ 4 ಕ್ಕೇರಿದೆ. ಪರಿಶಿಷ್ಟ ಸಮುದಾಯದವರ ಸಂಖ್ಯೆ 2 ರಿಂದ 4 ಕ್ಕೇರಿದೆ.

ಇದನ್ನೂ ಓದಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ; ನೂತನ ಸಚಿವರ ಕಿರು ಪರಿಚಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು