ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾರಿ ಗಣರಾಜ್ಯೋತ್ಸವದ ಪೆರೇಡ್‌ಗೆ ರಾಜ್ಯದ ಸ್ತಬ್ಧಚಿತ್ರ ಇಲ್ಲ

ಗಣರಾಜ್ಯೋತ್ಸವ ಪರೇಡ್‌ಗೆ ಅವಕಾಶ ನಿರಾಕರಣೆ
Last Updated 7 ಜನವರಿ 2023, 21:49 IST
ಅಕ್ಷರ ಗಾತ್ರ

ಬೆಂಗಳೂರು: ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ (ಜ. 26) ಪರೇಡ್‌ನಲ್ಲಿ ಈ ಬಾರಿ ರಾಜ್ಯದ
ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಲಾಗಿದೆ.

ದೇಶದ ಇತರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಅವಕಾಶ ಕಲ್ಪಿಸಬೇಕೆಂಬ ಉದ್ದೇಶದಿಂದ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರವನ್ನು ಪರಿಗಣಿಸಿಲ್ಲ ಎಂದು ಹೇಳಲಾಗಿದೆ.

ರಕ್ಷಣಾ ಸಚಿವಾಲಯ ಸೆ.1ರಂದು ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ತಬ್ಧಚಿತ್ರದ ವಿಷಯಗಳ ಕುರಿತು ಟಿಪ್ಪಣಿ ಕಳುಹಿಸುವಂತೆ ಕೋರಿತ್ತು. ನ. 24ರಂದು ನಡೆದ ಮೊದಲ ಆಯ್ಕೆ ಸಮಿತಿ ಸಭೆಯಲ್ಲಿ ಕರ್ನಾಟಕವೂ ಸೇರಿದಂತೆ ಕೇಂದ್ರಾಡಳಿತ ಪ್ರದೇಶ ಸೇರಿದಂತೆ 23 ರಾಜ್ಯಗಳು ಭಾಗವಹಿಸಿದ್ದವು. ಡಿ. 1ರಂದು ನಡೆದ ಎರಡನೇ ಸಭೆಯಲ್ಲಿ ಕರ್ನಾಟಕದ ‘ನಾರಿಶಕ್ತಿ’ ವಿಷಯ ಅಂತಿಮಗೊಂಡಿತ್ತು. ಪ್ರದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮ, ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಹಾಲಕ್ಕಿ ಅವರ ಸಾಧನೆಗಳನ್ನು ಬಿಂಬಿಸುವ ಸ್ತಬ್ಥಚಿತ್ರಕ್ಕೆ ಆಯ್ಕೆ ಸಮಿತಿ ಸಮ್ಮತಿ ಸೂಚಿಸಿತ್ತು.

ಎರಡನೇ ಸಭೆಯಲ್ಲಿ ಒಟ್ಟು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗವಹಿಸಿದ್ದವು. ಮೂರನೇ ಸುತ್ತಿನ ಆಯ್ಕೆ ಸಭೆಯಲ್ಲಿ ಕರ್ನಾಟಕದ ಮಾದರಿಗೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೆ, ಕರ್ನಾಟಕವೂ ಸೇರಿ 20 ರಾಜ್ಯಗಳ ಸ್ತಬ್ಧಚಿತ್ರಗಳು ಆಯ್ಕೆಯಾಗಿದ್ದವು. ನಾಲ್ಕನೇ ಸಭೆಯಲ್ಲಿ ಕರ್ನಾಟಕದ ಕೀ-ಮಾಡಲ್‌ ಮತ್ತು ಸಂಗೀತಕ್ಕೆ ಒಪ್ಪಿಗೆ ಸೂಚಿಸಿ, ಕೆಲವು ಮಾರ್ಪಾಟು ಮಾಡುವಂತೆ ತಿಳಿಸಿತ್ತು. ಆದರೆ, ಐದನೇ ಸುತ್ತಿನ ಸಭೆಗೆ 14 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಭಾ ಸೂಚನಾ ಪತ್ರ ಕಳುಹಿಸಲಾಗಿತ್ತು.
ಈ ಪಟ್ಟಿಯಲ್ಲಿ ಕರ್ನಾಟಕ ಹೆಸರು ಇರಲಿಲ್ಲ.

ಕರ್ನಾಟಕವು 2022ರಲ್ಲಿ ಪ್ರಸ್ತುತ ಪಡಿಸಿದ್ದ ‘ಸಾಂಪ್ರದಾಯಿಕ ಕಸೂತಿಯ ತೊಟ್ಟಿಲು’ ಸ್ತಬ್ಧಚಿತ್ರಕ್ಕೆ ಎರಡನೇ ಅತ್ಯುತ್ತಮ ಪ್ರಶಸ್ತಿ ಬಂದಿತ್ತು. ಉತ್ತರ
ಪ್ರದೇಶಕ್ಕೆ ಪ್ರಥಮ ಮತ್ತು ಮೇಘಾಲಯಕ್ಕೆ ಮೂರನೇ ಪ್ರಶಸ್ತಿ ಬಂದಿತ್ತು. ಕಳೆದ ವರ್ಷ ಪ್ರಶಸ್ತಿ ಪಡೆದಿದ್ದ ಮೂರು ರಾಜ್ಯಗಳು ಈ ಬಾರಿ ಪರೇಡ್‌ಗೆ ಆಯ್ಕೆಯಾಗಿಲ್ಲ.

ಹೋದ ಬಾರಿ ನಮ್ಮ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ಬಂದಿತ್ತು. ಈ‌ ಬಾರಿಯೂ ಅವಕಾಶ‌ ಕೊಡಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತುಕತೆ‌ ನಡೆಸಿದ್ದಾರೆ. ಸಿಗುವ ನಿರೀಕ್ಷೆ ಇದೆ.

– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT