ಶುಕ್ರವಾರ, ಮಾರ್ಚ್ 24, 2023
28 °C
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಗೆ ಸಿಎಫ್‌ಟಿಎಫ್‌ಕೆ ಆಗ್ರಹ

ಮಕ್ಕಳ ರಕ್ಷಣೆಗೆ ತಂಬಾಕು ತೆರಿಗೆ ಹೆಚ್ಚಿಸಿ: ಜಿಎಸ್‌ಟಿ ಮಂಡಳಿಗೆ ಸಿಎಫ್‌ಟಿಎಫ್‌ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮಕ್ಕಳು ಹಾಗೂ ಯುವಜನರು ತಂಬಾಕು ಉತ್ಪನ್ನಗಳ ಸೇವನೆಯ ಚಟಕ್ಕೆ ಒಳಪಡುವುದನ್ನು ತಪ್ಪಿಸಲು ಹಾಗೂ ಸರ್ಕಾರದ ಆದಾಯ ವೃದ್ಧಿಸಲು ಈ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಬೇಕು’ ಎಂದು ತಂಬಾಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ನಗರದ ಸಂಸ್ಥೆಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯನ್ನು ಒತ್ತಾಯಿಸಿವೆ. 

ಈ ವಿಷಯವನ್ನು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಪ್ರಸ್ತಾಪಿಸುವಂತೆ ಕನ್ಸೋರ್ಟಿಯಂ ಫಾರ್ ಟೊಬ್ಯಾಕೊ ಫ್ರೀ ಕರ್ನಾಟಕ (ಸಿಎಫ್‌ಟಿಎಫ್‌ಕೆ) ನೇತೃತ್ವದಲ್ಲಿ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್. ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ. 

‘ತಂಬಾಕು ಉತ್ಪನ್ನಗಳ ಸೇವನೆಯನ್ನು ತಗ್ಗಿಸಲು ಇರುವ ಪರಿಣಾಮಕಾರಿ ನೀತಿಗಳಲ್ಲಿ ತೆರಿಗೆ ಹೆಚ್ಚಳವೂ ಒಂದು. ಮಕ್ಕಳ ವಿಚಾರದಲ್ಲಿ ಇದು ವಿಶೇಷವಾಗಿ ಅನ್ವಯವಾಗುತ್ತದೆ. ತಂಬಾಕು ಸೇವನೆಯ ಜಾಗತಿಕ ಸಮೀಕ್ಷೆ (ಜಿವೈಟಿಎಸ್) ಪ್ರಕಾರ ಅನೇಕ ಮಕ್ಕಳು 10 ವರ್ಷದ ಹುಟ್ಟು ಹಬ್ಬ ಆಚರಿಸುವ ಮುನ್ನವೇ ತಂಬಾಕು ಸೇವಿಸುತ್ತಾರೆ. ಅವರಲ್ಲಿ  ಶೇ 38ರಷ್ಟು ಮಕ್ಕಳು ಸಿಗರೇಟು, ಶೇ 47ರಷ್ಟು ಮಕ್ಕಳು ಬೀಡಿ ಹಾಗೂ ಶೇ 52ರಷ್ಟು ಮಕ್ಕಳು ಹೊಗೆರಹಿತ ತಂಬಾಕು ಸೇವನೆಯ ಚಟಕ್ಕೆ ಒಳಪಟ್ಟಿರುವುದು ತಿಳಿದುಬಂದಿದೆ. ಜಿಎಸ್‌ಟಿ ಜಾರಿಗೆ ಬಂದಂದಿನಿಂದ ತಂಬಾಕು ತೆರಿಗೆಗಳಲ್ಲಿ ಹೇಳಿಕೊಳ್ಳುವಂತಹ ಏರಿಕೆಯಾಗಿಲ್ಲ’ ಎಂದು ಸಿಎಫ್‌ಟಿಎಫ್‌ಕೆ ತಿಳಿಸಿದೆ. 

‘ಬೀಡಿ ಅತ್ಯಂತ ವ್ಯಾಪಕವಾಗಿ ಬಳಕೆಯಲ್ಲಿರುವ ಮತ್ತು ಅಗ್ಗದ ತಂಬಾಕು ಉತ್ಪನ್ನ. ಇವುಗಳ ಸೇವನೆ ಪ್ರಮಾಣ ಇಳಿಕೆ ಮಾಡಲು ತೆರಿಗೆ ಹೆಚ್ಚಳ ಪ್ರಮುಖ ಅಸ್ತ್ರ. ಯುವಜನರ ಆರೋಗ್ಯದ ದೃಷ್ಟಿಯಿಂದ ತಂಬಾಕು ಉತ್ಪನ್ನಗಳ ಸೇವನೆಗೆ ತುರ್ತಾಗಿ ಕಡಿವಾಣ ಹಾಕಬೇಕು’ ಎಂದು ಸಾರ್ವಜನಿಕ ಆರೋಗ್ಯ ಸಂಶೋಧಕ ಡಾ. ಉಪೇಂದ್ರ ಭೋಜಾನಿ ಹೇಳಿದ್ದಾರೆ. 

ಕ್ಯಾನ್ಸರ್ ತಗಲುವ ಅಪಾಯ: ‘ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್ ಪೀಡಿತರಾದವರು ತಮ್ಮ ಸಂಪಾದನೆಯ ಎಲ್ಲ ಹಣವನ್ನು ಚಿಕಿತ್ಸೆಗೆ ವ್ಯಯಿಸುತ್ತಿರುವುದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ. ಪ್ರತಿ ಮೂವರಲ್ಲಿ ಒಬ್ಬರು ಯಾವುದಾದರೊಂದು ರೂಪದಲ್ಲಿ ತಂಬಾಕು ಉತ್ಪನ್ನ ಬಳಸುತ್ತಾರೆ. ಅವರು ಸಾಂಕ್ರಾಮಿಕವಲ್ಲದ ರೋಗಕ್ಕೆ ಒಳಪಡುತ್ತಿದ್ದಾರೆ. ಹಾಗಾಗಿ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಿಸಬೇಕು’ ಎಂದು ಕ್ಯಾನ್ಸರ್ ತಜ್ಞ ಮತ್ತು ರಾಜ್ಯ ಸರ್ಕಾರದ ತಂಬಾಕು ನಿಯಂತ್ರಣಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಸಮಿತಿಯ ಸದಸ್ಯ ಡಾ. ವಿಶಾಲ್ ರಾವ್ ಒತ್ತಾಯಿಸಿದ್ದಾರೆ.

ಸಿಎಫ್‌ಟಿಎಫ್‌ಕೆ ಸಂಚಾಲಕ ಎಸ್.ಜೆ. ಚಂದರ್, ‘ತಂಬಾಕು ಉತ್ಪನ್ನಗಳ ತೆರಿಗೆ ಹೆಚ್ಚಳ ಮಾಡಿದಲ್ಲಿ ಯುವಜನರು ತಂಬಾಕು ಉತ್ಪನ್ನಗಳ ಸೇವನೆ ಚಟಕ್ಕೆ ಒಳಪಡುವುದನ್ನು ತಪ್ಪಿಸಬಹುದು. ಸರ್ಕಾರಕ್ಕೆ ಆದಾಯವೂ ಹೆಚ್ಚಳವಾಗಲಿದೆ’ ಎಂದು ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು