ಬುಧವಾರ, ಆಗಸ್ಟ್ 17, 2022
25 °C
ಕೊನೆಗೂ ಮುಹೂರ್ತ ನಿಗದಿ l ‘ಶಿಕ್ಷಕ ಆ್ಯಪ್‌’ನಲ್ಲಿ ವರ್ಗಾವಣೆ ಆದೇಶ ನೀಡಲು ನಿರ್ಧಾರ

ಇದೇ 25ರಿಂದ ಶಿಕ್ಷಕರ ವರ್ಗಾವಣೆ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿಕ್ಷಕ ಸಮುದಾಯ ನಿರೀಕ್ಷೆಯಿಂದ ಕಾಯುತ್ತಿರುವ ವರ್ಗಾವಣೆ ಪ್ರಕ್ರಿಯೆಗೆ ಮುಹೂರ್ತ ನಿಗದಿಯಾಗಿದ್ದು, ಇದೇ 25ರಂದು ಚಾಲನೆ ಸಿಗಲಿದೆ.

ವರ್ಗಾವಣೆಗೊಂಡ ಶಿಕ್ಷಕರಿಗೆ ಇದೇ ಮೊದಲ ಬಾರಿಗೆ ಆದೇಶ ಪತ್ರವನ್ನು ‘ಶಿಕ್ಷಕ ಮಿತ್ರ’ ಆ್ಯಪ್ ಮೂಲಕ ನೀಡಲಾಗುತ್ತದೆ. ಸ್ಥಳ ಆಯ್ಕೆಯ ಕೌನ್ಸೆಲಿಂಗ್‌ಗೆ ಮಾತ್ರ ಶಿಕ್ಷಕರು ನೇರವಾಗಿ ಪಾಲ್ಗೊಳ್ಳಬೇಕಿದೆ. ಉಳಿದೆಲ್ಲವೂ ಆನ್‌ ಲೈನ್‌ ಮೂಲಕ ನಡೆಯ ಲಿವೆ. ಶಿಕ್ಷಕರು ಕಚೇರಿಗಳಿಗೆ ಅಲೆದಾಡುವ ಅಗತ್ಯ ತಪ್ಪಲಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಜಿ. ಜಗದೀಶ್‌, ‘ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಶಿಕ್ಷಕ ಹುದ್ದೆಗಳಿಗೆ ಬಡ್ತಿ ಪ್ರಕ್ರಿಯೆಯನ್ನು ಇದೇ 16ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅದು ಮುಗಿದ ಬಳಿಕ, ಇಲಾಖೆಯಲ್ಲಿ ಮಂಜೂರಾದ, ಕಾರ್ಯನಿರ್ವಹಿಸುವ ಮತ್ತು ಖಾಲಿ ಹುದ್ದೆಗಳ ಮಾಹಿತಿಯನ್ನು ‘ಶಿಕ್ಷಕ ಮಿತ್ರ’ ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗುವುದು. ಬಳಿಕ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ’ ಎಂದರು.

‘ಮೈಸೂರು ವಲಯದಲ್ಲಿ ಖಾಲಿ ಇರುವ 490 ಮುಖ್ಯ ಶಿಕ್ಷಕ ಹುದ್ದೆಗಳ ಪೈಕಿ 470 ಹುದ್ದೆಗಳಿಗೆ ಪ್ರೌಢಶಾಲಾ ಶಿಕ್ಷಕ ವೃಂದದಿಂದ ಬಡ್ತಿ ನೀಡಲು ಇಲಾಖಾ ಪದೋನ್ನತಿ ಸಭೆ (ಡಿಪಿಸಿ) ಮುಗಿದಿದೆ. ಬಡ್ತಿ ಹೊಂದಿದ ಶಿಕ್ಷಕರಿಗೆ ಒಂದೆರಡು ದಿನಗಳಲ್ಲಿ ಆದೇಶ ನೀಡಲಾಗುವುದು. 5 ವರ್ಷಗಳಿಂದ ಈ ವಲಯದಲ್ಲಿ ಮುಖ್ಯಶಿಕ್ಷಕ ಹುದ್ದೆಗೆ ಬಡ್ತಿ ನೀಡಿರಲಿಲ್ಲ. ಅಲ್ಲದೆ, ಇಡೀ ರಾಜ್ಯದಲ್ಲಿ 100 ಮುಖ್ಯ ಶಿಕ್ಷಕರಿಗೆ ನಿಯಮ 32 ಅಡಿ ಗ್ರೂಪ್‌ ‘ಎ‘ (ಕಿರಿಯ ಶ್ರೇಣಿ) ಹುದ್ದೆಗೆ ಪದೋನ್ನತಿ ನೀಡಲಾಗಿದೆ’ ಎಂದು ಇಲಾಖೆಯ ಮೂಲಗಳು ಹೇಳಿವೆ.

ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ ತಕ್ಷಣದಿಂದಲೇ ‘ಶಿಕ್ಷಕ ಮಿತ್ರ’ಆ್ಯಪ್‌ನಲ್ಲಿ ಖಾಲಿ ಹುದ್ದೆಗಳ ಮಾಹಿತಿ ಲಭ್ಯವಾಗಲಿದೆ. ವರ್ಗಾವಣೆ ಬಯಸು ವವರು ತಮ್ಮ ಮೊಬೈಲ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ಅರ್ಜಿಸ್ವೀಕೃತ ಅಥವಾ ತಿರಸ್ಕೃತಗೊಂಡರೆ ಕಾರಣ ಸಹಿತಎಸ್‌ಎಂಎಸ್‌ ಸಂದೇಶ ರವಾನೆಯಾಗಲಿದೆ. ಅಲ್ಲದೆ, ವರ್ಗಾವಣೆ ಬಯಸಿ ಆಯ್ಕೆ ಮಾಡಿಕೊಂಡ ಶಾಲೆ ಲಭ್ಯ ಇಲ್ಲದೇ ಇದ್ದರೆ ಆ ಮಾಹಿತಿಯೂ ಅರ್ಜಿ ಸಲ್ಲಿಸಿದ ಶಿಕ್ಷಕರಿಗೆ ಸಿಗಲಿದೆ.

‘ಅರ್ಜಿ ಸಲ್ಲಿಸಲು 10 ದಿನ, ಅರ್ಜಿಗಳ ಪರಿಶೀಲನೆಗೆ 5, ಆದ್ಯತಾ ಪಟ್ಟಿ ಸಿದ್ಧಪಡಿಸಲು 7 ದಿನ ಬೇಕಾಗಲಿದೆ. ಬಳಿಕ 10 ದಿನಗಳಲ್ಲಿ ವರ್ಗಾವಣೆ ಆದೇಶ ಶಿಕ್ಷಕರ ಕೈಸೇರಲಿದೆ. ಅರ್ಜಿದಾರ ಶಿಕ್ಷಕ, ಪ್ರಸ್ತುತ ಕೆಲಸ ಮಾಡುತ್ತಿರುವ ಶಾಲೆಯ ಮುಖ್ಯ ಶಿಕ್ಷಕ ಮತ್ತು ವರ್ಗಾವಣೆಗೊಂಡು ತೆರಳುವ ಶಾಲೆಯ ಮುಖ್ಯ ಶಿಕ್ಷಕರ ಮೊಬೈಲ್‌ಗೆ ಡಿಜಿಟಲ್‌ ಆದೇಶ ಪತ್ರ ರವಾನೆ ಆಗಲಿದೆ. ಆ ಮೂಲಕ, ಇಡೀ ಪ್ರಕ್ರಿಯೆ ತಂತ್ರಜ್ಞಾನ ಆಧಾರಿತವಾಗಿ ಪೂರ್ಣಗೊಳ್ಳಲಿದೆ’ ಎಂದೂ ಮೂಲಗಳು ತಿಳಿಸಿವೆ.

ಯಾರಿಗೆ ವರ್ಗಾವಣೆಯಲ್ಲಿ ಆದ್ಯತೆ: ಕಳೆದ ಬಾರಿ ಕಡ್ಡಾಯ ವರ್ಗಾವಣೆ ಯಾದವರು ಮತ್ತು ಹೆಚ್ಚುವರಿ ಶಿಕ್ಷಕರು (ಲೀನ್ ಶಿಫ್ಟ್‌) ಎಂಬ ಕಾರಣಕ್ಕೆ ವರ್ಗಾವಣೆಯಾದವರಿಗೆ ಮೊದಲ ಆದ್ಯತೆ ಸಿಗಲಿದೆ.

***

ಕೌನ್ಸೆಲಿಂಗ್‌ ಹೊರತುಪಡಿಸಿ ಉಳಿದೆಲ್ಲ ವರ್ಗಾವಣೆ ಪ್ರಕ್ರಿಯೆಗಳು ಶಿಕ್ಷಕ ಆ್ಯಪ್‌ ಮೂಲಕ ನಡೆಯಲಿದೆ. ಆ್ಯಪ್‌ಗೆ ಶಿಕ್ಷಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
– ಡಾ.ಕೆ.ಜಿ. ಜಗದೀಶ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು