ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲುಮೆ ಅಕ್ರಮ: ಇಬ್ಬರು ‘ಐಎಎಸ್‌’ ಅಮಾನತು

ಕೇಂದ್ರ ಚುನಾವಣಾ ಆಯೋಗದ ಆದೇಶ
Last Updated 25 ನವೆಂಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆಗೆ ನಿರ್ದೇಶನ ನೀಡಿರುವ ಕೇಂದ್ರ ಚುನಾವಣಾ ಆಯೋಗ, ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ತಕ್ಷಣದಿಂದಅಮಾನತು ಮಾಡು
ವಂತೆ ಕಟ್ಟಪ್ಪಣೆ ವಿಧಿಸಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಎಸ್‌.ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಅವರ ಅಮಾನತಿಗೆ ನಿರ್ದೇಶಿಸಿದೆ. ರಂಗಪ್ಪ ಅವರು ಶಿವಾಜಿನಗರ ಮತ್ತು ಚಿಕ್ಕಪೇಟೆ ಕ್ಷೇತ್ರಗಳ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದರೆ, ಶ್ರೀನಿವಾಸ್‌ ಅವರು ಮಹದೇವಪುರ ಕ್ಷೇತ್ರದ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿ ಆಗಿದ್ದರು. ಇಬ್ಬರನ್ನೂ ತಕ್ಷಣ ಅಮಾನತುಗೊಳಿಸಿ, ಇಲಾಖಾ ವಿಚಾರಣೆ ಆರಂಭಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆಯೋಗ ನಿರ್ದೇಶನ ನೀಡಿದೆ.

‘ಚಿಲುಮೆ’ ಸಂಸ್ಥೆಯು ಮತದಾರರ ಜಾಗೃತಿ ಅಭಿಯಾನವನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಮಾಹಿತಿ ಕಳವು ಮಾಡಿದೆ ಹಾಗೂ ಮತ ಪಟ್ಟಿಗೆ ಅಕ್ರಮವಾಗಿ ಹೆಸರು ಸೇರ್ಪಡೆ ಹಾಗೂ ಪಟ್ಟಿಯಿಂದ ಕೈಬಿಡುವ ಕೆಲಸ ಮಾಡಿದೆ ಎಂಬ ಆರೋಪದ ಕುರಿತು ವರದಿ ಪಡೆದ ಬಳಿಕ ಚುನಾವಣಾ ಆಯೋಗ ಈ ಕ್ರಮ ಕೈಗೊಂಡಿದೆ. ಈ ಸಂಬಂಧ ಕಾಂಗ್ರೆಸ್ ನಾಯಕರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.

‘ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳಿಗೆ ಮತಗಟ್ಟೆ ಹಂತದ ಅಧಿಕಾರಿಗಳು (ಬಿಎಲ್‌ಒ ಮತ್ತು ಬಿಎಲ್‌ಸಿ) ಎಂಬ ಗುರುತಿನ ಚೀಟಿ ನೀಡಿರುವುದನ್ನು ತನಿಖಾ ವರದಿ ಖಚಿತಪಡಿಸಿದೆ. ಈ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಪಟ್ಟಿಯಿಂದ ಮತದಾರರ ಹೆಸರುಗಳನ್ನು ಕೈಬಿಟ್ಟಿರುವ ಕುರಿತು ಶೇಕಡ 100ರಷ್ಟು ಪರಿಶೀಲನೆ ನಡೆಸಬೇಕು’ ಎಂದು ಆಯೋಗ ತಿಳಿಸಿದೆ.

ಮೂರೂ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲನೆಗೆ ವಿಶೇಷಾಧಿಕಾರಿಗಳನ್ನಾಗಿ ಐಎಎಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಶಿವಾಜಿನಗರ ಕ್ಷೇತ್ರಕ್ಕೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಚಿಕ್ಕಪೇಟೆ ಕ್ಷೇತ್ರಕ್ಕೆ ಡಾ.ಆರ್‌.ವಿಶಾಲ್‌ ಹಾಗೂ ಮಹದೇವಪುರ ಕ್ಷೇತ್ರಕ್ಕೆ ಅಜಯ್‌ ನಾಗಭೂಷಣ್‌ ಅವರನ್ನು ಆಯೋಗ ನೇಮಿಸಿದೆ.

ಈ ಮೂರೂ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗೆ ಸೇರಿಸಿರುವ ಹೆಸರುಗಳು ಮತ್ತು ಕೈಬಿಡಲಾಗಿರುವ ಹೆಸರುಗಳ ಸಂಪೂರ್ಣ ವಿವರಗಳನ್ನು ನೋಂದಾಯಿತ ರಾಜಕೀಯ ಪಕ್ಷಗಳ ಜತೆ ಹಂಚಿಕೊಳ್ಳಲಾಗುವುದು. ಆ ಪಟ್ಟಿಯನ್ನು ಪರಿಶೀಲಿಸಿ ದೂರು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿರುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ನೋಂದಾಯಿತ ರಾಜಕೀಯ ಪಕ್ಷಗಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.

ಪರಿಷ್ಕರಣಾ ಅವಧಿ ವಿಸ್ತರಣೆ: ಎಲ್ಲ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣಾ ಅಭಿಯಾನದ ಡಿಸೆಂಬರ್‌ 9ಕ್ಕೆ ಕೊನೆಗೊಳ್ಳಲಿದೆ. ಆದರೆ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಡಿ.24ರವರೆಗೂ ವಿಶೇಷ ಪರಿಷ್ಕರಣಾ ಅಭಿಯಾನ ನಡೆಸುವಂತೆ ಆಯೋಗ ಆದೇಶಿಸಿದೆ.

ಈ ಆದೇಶಗಳ ಸಂಪೂರ್ಣ ಅನುಷ್ಠಾನದ ಜವಾಬ್ದಾರಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಖುದ್ದಾಗಿ ನಿರ್ವಹಿಸಬೇಕು ಎಂದುಆಯೋಗವು ಸೂಚಿಸಿದೆ.

ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಲಾಗುವುದು. ಈ ವಿಚಾರದಲ್ಲಿ ನೀತಿ, ನಿಯಮಗಳ ಉಲ್ಲಂಘನೆಯನ್ನು ಆಯೋಗ ಕಿಂಚಿತ್ತೂ ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.

ವೀಕ್ಷಕರ ನೇಮಕ

ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೂ ವೀಕ್ಷಕರನ್ನಾಗಿ ಐಎಎಸ್‌ ಅಧಿಕಾರಿಗಳನ್ನು ನೇಮಿಸಲಾಗಿದೆ.

ಬಿಬಿಎಂಪಿ ಕೇಂದ್ರ ವಲಯಕ್ಕೆ ಉಜ್ವಲ್‌ ಘೋಷ್‌, ಉತ್ತರ ವಲಯಕ್ಕೆ ರಾಮಚಂದ್ರನ್‌ ಆರ್‌., ದಕ್ಷಿಣ ವಲಯಕ್ಕೆ ಪಿ.ರಾಜೇಂದ್ರ ಚೋಳನ್‌, ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಗೆ ಡಾ.ಎನ್‌.ಮಂಜುಳಾ ಅವರನ್ನು ವೀಕ್ಷಕರಾಗಿ ಕೇಂದ್ರ ಚುನಾವಣಾ ಆಯೋಗ ನೇಮಿಸಿದೆ. ಇವರು ಶಿವಾಜಿನಗರ, ಚಿಕ್ಕಪೇಟೆ ಮತ್ತು ಮಹದೇವಪುರ ಕ್ಷೇತ್ರಗಳನ್ನು ಹೊರತುಪಡಿಸಿ ಆಯಾ ವಲಯದ ಎಲ್ಲ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ನಿಗಾವಹಿಸಬೇಕು ಎಂದು ತಿಳಿಸಿದೆ.

ಬಿಸ್ವಾಸ್‌ಗೆ ಇನ್ನಷ್ಟು ಹೊಣೆ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳ ಕುರಿತು ವಿಚಾರಣೆ ನಡೆಸುತ್ತಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್‌ ಅವರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿ ಪರಿಷ್ಕರಣೆಯ ಸಮಗ್ರ ಮೇಲುಸ್ತುವಾರಿಯ ಜವಾಬ್ದಾರಿಯನ್ನೂ ನೀಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಈ ಕೆಲಸಕ್ಕೆ ಅವರು ಮುಖ್ಯ ಚುನಾವಣಾಧಿಕಾರಿಯ ಒಪ್ಪಿಗೆಯೊಂದಿಗೆ ಯಾವುದೇ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ನೀಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮದ ಕುರಿತು ನಡೆಸುತ್ತಿರುವ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಆಯೋಗ ಸೂಚಿಸಿದೆ.

ದುರ್ಬಳಕೆ ತಡೆಗೆ ಕಟ್ಟಪ್ಪಣೆ

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮ ಹಾಗೂ ಮಾಹಿತಿ ಕಳವು ಆರೋಪಕ್ಕೆ ಸಂಬಂಧಿಸಿ ಮೂರು ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.

ಮತದಾರರ ಪಟ್ಟಿಗೆ ಸಂಬಂಧಿಸಿ ಸಂಗ್ರಹಿಸಿರುವ ಮಾಹಿತಿಗಳನ್ನು ನೇರ ಅಥವಾ ಪರೋಕ್ಷವಾಗಿ ದುರ್ಬಳಕೆ ಮಾಡಿಕೊಳ್ಳಲು ಅವಕಾಶ ದೊರೆಯ ದಂತೆ ಅಧಿಕಾರಿಗಳು ಬಿಗಿ ಕ್ರಮಗಳನ್ನು ಕೈಗೊಳ್ಳ ಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಕಟ್ಟಪ್ಪಣೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT