ಸೋಮವಾರ, ಜನವರಿ 18, 2021
26 °C

ನಾಪತ್ತೆಯಾದ ಬ್ರಿಟನ್ ವಲಸಿಗರ ಸಂಖ್ಯೆಯಲ್ಲಿ ವ್ಯತ್ಯಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಪತ್ತೆಯಾಗಿರುವ ಬ್ರಿಟನ್‌ ವಲಸಿಗರ ಪತ್ತೆ ಕಾರ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನಡುವೆ ಸಮನ್ವಯ ಕೊರತೆ ಉಂಟಾಗಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಲ್ಲಿ 75 ಮಂದಿ ನಾಪತ್ತೆಯಾಗಿದ್ದರೇ, ಬಿಬಿಎಂಪಿ ಆ ಸಂಖ್ಯೆ ನಗರದಲ್ಲಿಯೇ 114 ಇದೆ ಎಂದು ತಿಳಿಸಿದೆ. 

ರಾಜ್ಯಕ್ಕೆ ನ.25 ರ ಬಳಿಕ 5 ಸಾವಿರಕ್ಕೂ ಅಧಿಕ ಮಂದಿ ಬ್ರಿಟನ್‌ನಿಂದ ಬಂದಿದ್ದಾರೆ. ಅವರಲ್ಲಿ ಬಹುತೇಕರನ್ನು ಪೊಲೀಸರ ನೆರವಿನಿಂದ ಪತ್ತೆ ಮಾಡಲಾಗಿದೆ. ಕೆಲವರು ಬ್ರಿಟನ್‌ ದೂರವಾಣಿ ಸಂಖ್ಯೆ ನೀಡಿದ್ದಾರೆ. ಇನ್ನೂ ಕೆಲವರು ಬ್ರಿಟನ್ ವಿಳಾಸ ನೀಡಿರುವುದು ಪತ್ತೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಇಲ್ಲಿಗೆ ಬಂದವರಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಬ್ರಿಟನ್‌ನಿಂದ ಬಂದವರ ಪೈಕಿ 75 ಮಂದಿ ಪತ್ತೆಯಾಗಿಲ್ಲ. ಅವರನ್ನು ಪತ್ತೆ ಮಾಡಿಕೊಡಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಅವರ ಜತೆಗೆ ಕೂಡ ಮಾತನಾಡಿದ್ದೇನೆ. ಬಿಬಿಎಂಪಿಯವರಿಗೆ ಯಾವ ಮಾಹಿತಿ ಬಂದಿದೆ ಎನ್ನುವುದು ಗೊತ್ತಿಲ್ಲ. ಅವರು ಸಂಪರ್ಕಿತರನ್ನೂ ಸೇರಿ ಹೇಳುತ್ತಿರಬೇಕು’ ಎಂದರು.

‘ಅಲ್ಲಿಂದ ವಾಪಸ್ ಆದವರ ಪೈಕಿ 37 ಮಂದಿ ಸೋಂಕಿತರಾಗಿರುವುದು ಆರ್‌ಟಿ–ಪಿಸಿಆರ್ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 17 ಜನರಿಗೆ ಸೋಂಕು ತಗುಲಿದೆ. 10 ಮಂದಿಯಲ್ಲಿ ರೂಪಾಂತರಗೊಂಡ ವೈರಾಣು ಕಾಣಿಸಿಕೊಂಡಿದೆ. ಇವರ ನೇರ ಮತ್ತು ಪರೋಕ್ಷ ಸಂಪರ್ಕಿತರನ್ನು ಪತ್ತೆ ಮಾಡಿ, ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ’ ಎಂದು ವಿವರಿಸಿದರು.

ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ. ವಿಜಯೇಂದ್ರ, ‘ವಲಸೆ ಪ್ರಾಧಿಕಾರ ಹಾಗೂ ವಿಮಾನ ನಿಲ್ದಾಣ ಒದಗಿಸಿದ ಮಾಹಿತಿ ಅನುಸಾರ ನಾಪತ್ತೆಯಾದವರ ಹುಡುಕಾಟ ನಡೆಯುತ್ತಿದೆ. ಈ ಮಾಹಿತಿಯನ್ನು ವಲಯ ಆರೋಗ್ಯಾಧಿಕಾರಿಗಳಿಗೆ ಕಳುಹಿಸಿ, ಪತ್ತೆ ಮಾಡಲಾಗುತ್ತಿದೆ. ಅವರ ಮಾಹಿತಿಯನ್ನು ಗೃಹ ಇಲಾಖೆಗೂ ಕಳುಹಿಸಲಾಗಿದೆ. ಇಲ್ಲಿಗೆ ಬಂದವರಲ್ಲಿ 114 ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ ಹಲವರು ಡಿ.1ರಂದು ನಗರಕ್ಕೆ ಬಂದವರಾಗಿದ್ದಾರೆ. ಡಿ.2ರ ನಂತರ ಬಂದವರಲ್ಲಿ ಬಹುತೇಕರು ಪರೀಕ್ಷೆಗೆ ಒಳಪಟ್ಟಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.