ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊರೆಯದ ಪರಿಹಾರ: ಸಂಕಷ್ಟದಲ್ಲಿ ಸೇನಾನಿ ಕುಟುಂಬಗಳು

ಕೈಚೆಲ್ಲಿದ ಸರ್ಕಾರ; ನಷ್ಟದಲ್ಲಿರುವ ಸಂಸ್ಥೆಯ ಮೇಲೆಯೇ ಪರಿಹಾರದ ಹೊರೆ
Last Updated 10 ಜೂನ್ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೋವಿಡ್‌ –19 ನಿಂದಾಗಿ ಇಲ್ಲಿಯವರೆಗೆ 74 ಸಿಬ್ಬಂದಿ ಮೃತರಾಗಿದ್ದಾರೆ. ಇವರನ್ನು ‘ಫ್ರಂಟ್‌ ಲೈನ್‌ ವಾರಿಯರ್ಸ್’ ಎಂದು ಘೋಷಣೆ ಮಾಡಿರುವುದರಿಂದ ರಾಜ್ಯ ಸರ್ಕಾರದಿಂದ ದೊರೆಯಬೇಕಾಗಿದ್ದ ಪರಿಹಾರ ವರ್ಷ ಕಳೆದರೂ ದೊರೆತಿಲ್ಲ. ಮನೆ ಯಜಮಾನನ್ನು ಕಳೆದುಕೊಂಡಿರುವ ಕುಟುಂಬದ ಸದಸ್ಯರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಮೊದಲನೇ ಅಲೆಯಲ್ಲಿ 31 ಮಂದಿ ಹಾಗೂ ಎರಡನೇ ಅಲೆಯಲ್ಲಿ 43 ಮಂದಿ ಸಿಬ್ಬಂದಿ ಕೋವಿಡ್‌ ನಿಂದ ಮೃತರಾಗಿದ್ದಾರೆ. ಎರಡನೇ ಅಲೆಯಲ್ಲಿ 527 ಮಂದಿ ಕೋವಿಡ್‌ ಬಾಧಿತರಾಗಿದ್ದು, 347 ಮಂದಿ ಗುಣಮುಖರಾಗಿದ್ದಾರೆ. 137 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊದಲನೇ ಅಲೆಯಲ್ಲಿ ಮೃತರಾದ 31 ಮಂದಿಯ ಕುಟುಂಬದ ಸದಸ್ಯರು, ಮೃತರು ಕೋವಿಡ್‌ ಬಾಧಿತರಾಗಿರುವುದು, ಚಿಕಿತ್ಸೆ ಪಡೆದಿರುವುದು, ಮರಣ ಪ್ರಮಾಣಪತ್ರ ಸೇರಿದಂತೆ ಅವಶ್ಯಕ ಎಲ್ಲ ದಾಖಲೆಗಳನ್ನು ಸಲ್ಲಿಸಿದ್ದಾರೆ. ಪರಿಹಾರಕ್ಕಾಗಿ ಆಗಾಗ ಕಚೇರಿಗೂ ಅಲೆಯುತ್ತಿದ್ದಾರೆ. ಆದರೆ, ಪರಿಹಾರ ಮಾತ್ರ ಇನ್ನುವರೆಗೂ ಬಿಡುಗಡೆಯಾಗಿಲ್ಲ.

ಕೈಚೆಲ್ಲಿದ ಸರ್ಕಾರ: ಕೊರೊನಾ ಸೋಂಕಿನ ಸಮಯದಲ್ಲಿ ವಾಹನಗಳ ಓಡಿಸಲು ಸಾರಿಗೆ ಸಂಸ್ಥೆ ಕೆಲವು ಸಿಬ್ಬಂದಿ ಹಿಂದೇಟು ಹಾಕಿದಾಗ ರಾಜ್ಯ ಸರ್ಕಾರವು ಇವರನ್ನು ‘ಫ್ರಂಟ್ ಲೈನ್‌ ಕೊರೊನಾ ವಾರಿಯರ್ಸ್’ ಎಂದು ಘೋಷಿಸಿತ್ತು. ಅವರು ಮೃತರಾದರೆ, ಅವರ ಕುಟುಂಬದವರಿಗೆ ₹30 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿತ್ತು.

ಪರಿಹಾರಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದಾಗ, ಸಂಸ್ಥೆಯ ಸಂಪನ್ಮೂಲದಿಂದಲೇ ಪರಿಹಾರ ನೀಡಬೇಕು ಎಂದು ಸರ್ಕಾರ ಸೂಚಿಸಿದೆ. ಸಂಬಳಕ್ಕೂ ಸರ್ಕಾರವನ್ನೇ ನೆಚ್ಚಿಕೊಂಡಿರುವ ಸಂಸ್ಥೆ, ಪರಿಹಾರಕ್ಕೆ ಹಣ ಹೊಂದಿಸಲಾಗದೆ ಪರದಾಡುತ್ತಿದೆ.

ಲಾಕ್‌ಡೌನ್‌ನಿಂದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ವಾಹನಗಳ ಸಂಚಾರ ನಿಲ್ಲಿಸಿರುವುದರಿಂದ ಸಂಸ್ಥೆ ₹201 ಕೋಟಿ ನಷ್ಟ ಅನುಭವಿಸಿದೆ. ಜೊತೆಗೆ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಸಿಬ್ಬಂದಿಗೆ ಸರ್ಕಾರ ಬಿಡುಗಡೆ ಮಾಡಿದ ಹಣದಲ್ಲಿ ಶೇ 67 ರಷ್ಟು ಮಾತ್ರ ವೇತನ ಬಿಡುಗಡೆ ಮಾಡಿದೆ. ನಿವೃತ್ತಿ ಹೊಂದಿದ ನೌಕರರ ಪಿಂಚಣಿ, ರಜೆಗಳ ನಗದೀಕರಣ ಸೇರಿದಂತೆ ಹಲವು ಸೌಲಭ್ಯಗಳ ₹800 ಕೋಟಿ ಮೊತ್ತ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿದೆ. ಜೊತೆಗೆ ಈಗ ಪರಿಹಾರದ ಮೊತ್ತ ₹22.10 ಕೋಟಿಯೂ ಸೇರಿಕೊಂಡಿದೆ.

ಕೋವಿಡ್‌ನಿಂದ ಮೃತರಾದ ಸಹೋದ್ಯೋಗಿಗಳ ಕುಟುಂಬಕ್ಕೆ ಪರಿಹಾರ ದೊರೆತಿಲ್ಲ. ಅವರ ಕುಟುಂಬದವರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಪರಿಹಾರ ನೀಡಬೇಕು. ಇಲ್ಲದಿದ್ದರೆ, ಯಾವ ಧೈರ್ಯದ ಮೇಲೆ ಈಗ ಕೆಲಸಕ್ಕೆ ಹೋಗಬೇಕು ಎಂಬುದು ಸಂಸ್ಥೆಯ ಸಿಬ್ಬಂದಿ ಪ್ರಶ್ನೆಯಾಗಿದೆ.

ಸಂಸ್ಥೆಯ ವಾಹನಗಳ ಸಂಚಾರ ಇಲ್ಲದಿರುವುದರಿಂದ ಆದಾಯವಿಲ್ಲದಂತಾಗಿದೆ. ಸಂಚಾರ ಆರಂಭವಾದ ಮೇಲೆ ಬರುವ ಆದಾಯದಲ್ಲಿ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗುವುದು

- ಕೃಷ್ಣ ಬಾಜಪೇಯಿ, ವ್ಯವಸ್ಥಾಪಕ ನಿರ್ದೇಶಕ, ಎನ್‌ಡಬ್ಲ್ಯುಆರ್‌ಟಿಸಿ

ವಾಯವ್ಯ ಕರ್ನಾಟಕ ಸಂಸ್ಥೆಯಲ್ಲಿ ಕೋವಿಡ್‌ ಬಾಧಿತರ ವಿವರ

ವಿಭಾಗ;ಕೋವಿಡ್‌ ಬಾಧಿತರು;ಮೃತರ ಸಂಖ್ಯೆ

ಬಾಗಲಕೋಟೆ;185;09

ಶಿರಸಿ;108;03

ಧಾರವಾಡ;147;06

ಹುಬ್ಬಳ್ಳಿ ಗ್ರಾಮೀಣ;97;10

ಹುಬ್ಬಳ್ಳಿ ನಗರ;94;03

ಚಿಕ್ಕೋಡಿ;205;10

ಹಾವೇರಿ;121;10

ಬೆಳಗಾವಿ;115;16

ಗದಗ;156;07

ಪ್ರಾದೇಶಿಕ ಕಾರ್ಯಾಲಯ;17;00

ಕೇಂದ್ರ ಕಚೇರಿ;09;00

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT