ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಜೀ, ಉದ್ಯೋಗ ನೀಡುವುದೆಂದರೆ ಖಾಲಿ ಸುರಂಗಕ್ಕೆ ಕೈ ಬೀಸಿದಂತಲ್ಲ: ಕಾಂಗ್ರೆಸ್

Last Updated 15 ಡಿಸೆಂಬರ್ 2022, 9:58 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಉದ್ಯೋಗ ಭರ್ತಿ ವಿಚಾರಕ್ಕೆ ಸಂಬಂಧಿಸಿ ‘ಪ್ರಜಾವಾಣಿ’ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದವರು 9 ಲಕ್ಷ ಸರ್ಕಾರಿ ಹುದ್ದೆಗಳನ್ನು ಖಾಲಿ ಬಿಟ್ಟರು! ಬಿಜೆಪಿ ಸರ್ಕಾರಕ್ಕೆ ಉದ್ಯೋಗ ಸೃಷ್ಟಿಸುವುದಿರಲಿ ಇರುವ ಸರ್ಕಾರಿ ಹುದ್ದೆಗಳನ್ನೇ ಭರ್ತಿ ಮಾಡಲಾಗಲಿಲ್ಲವೇಕೆ’ ಎಂದು ಪ್ರಶ್ನಿಸಿದೆ.

‘ಪ್ರಧಾನಿ ಮೋದಿ ಅವರೇ, ‘ಉದ್ಯೋಗ ನೀಡುವುದೆಂದರೆ ಖಾಲಿ ಸುರಂಗಕ್ಕೆ ಕೈ ಬೀಸಿದಂತಲ್ಲ. ಇದೇನಾ ನಿಮ್ಮ ಅಚ್ಛೆ ದಿನ್’ ಎಂದು ಕಾಂಗ್ರೆಸ್ ಟೀಕಿಸಿದೆ.

ರಾಜ್ಯ ಬಿಜೆಪಿ ಸರ್ಕಾರ ನಡೆಯುತ್ತಲೂ ಇಲ್ಲ, ಓಡುತ್ತಲೂ ಇಲ್ಲ, ತೆವಳುತ್ತಿದೆ. ತಳ್ಳುತ್ತಿರುವ ಸರ್ಕಾರ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದರು. ಬಸವನ ಹುಳುವಿನಂತೆ ತೆವಳುತ್ತಿದೆ ಎಂದು ಕೋರ್ಟ್ ಹೇಳಿದೆ. ಸಿಎಂ ಬೊಮ್ಮಾಯಿ ಅವರೇ, ಈ ಸರ್ಟಿಫಿಕೇಟ್‌ಗಳು ಸಾಕಲ್ಲವೇ? ಬಿಜೆಪಿ ಸರ್ಕಾರ ಇರುವವರೆಗೂ ರಾಜ್ಯದ ‘ಅಭಿವೃದ್ಧಿ ಸ್ಥಂಭನ’ ಆಗಿರುತ್ತದೆ ಎಂದು ಕಾಂಗ್ರೆಸ್ ಕಿಚಾಯಿಸಿದೆ.

‘ಬಿಜೆಪಿ ಅಡಳಿತವು ‘ಕರ್ನಾಟಕಕ್ಕೆ ಗ್ರಹಣ ಕಾಲ’ ಇದ್ದಂತೆ. ಅಧಿಕಾರ ವಿಕೇಂದ್ರೀಕರಣದ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗುವ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಮುಗಿಸಲು ಬಿಜೆಪಿ ಸಂಚು ರೂಪಿಸಿದೆ. ಬಿಬಿಎಂಪಿ, ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳ ಚುನಾವಣೆ ನಡೆಸಲು ಬಿಜೆಪಿ ಸರ್ಕಾರಕ್ಕೆ ಇಷ್ಟವಿಲ್ಲವೇಕೆ?, ರಾಜ್ಯದ ಅಭಿವೃದ್ಧಿ ಬೇಕಿಲ್ಲವೇ?’ ಎಂದು ಕಾಂಗ್ರೆಸ್‌ ಗುಡುಗಿದೆ.

ಬಿಜೆಪಿ ಸರ್ಕಾರ ನೀರಾವರಿ ಯೋಜನೆಗಳಿಗೆ ₹1.5 ಲಕ್ಷ ಕೋಟಿ ನೀಡುತ್ತೇವೆ ಎಂದಿತ್ತು. ಒಂದೇ ಒಂದು ನೀರಾವರಿ ಯೋಜನೆಯಲ್ಲಿ ಪ್ರಗತಿ ಇಲ್ಲ, ತ್ರಿಬಲ್ ಇಂಜಿನ್ ಸರ್ಕಾರವಿದ್ದರೂ ಮಹದಾಯಿ ಗೊಂದಲ ಬಗೆಹರಿಸಲಿಲ್ಲ. ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲಿಲ್ಲ. ಪ್ರಣಾಳಿಕೆಯ ಭರವಸೆಗಳು ಬಿಜೆಪಿಗೆ ಮರೆತು ಹೋಯಿತೇ ? ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಬಿಜೆಪಿಗೆ ಶೋಷಿತ, ಹಿಂದುಳಿದ ಸಮುದಾಯಗಳ ಅಭಿವೃದ್ಧಿ ಬೇಕಿಲ್ಲ. ರಾಜಕೀಯ ಪ್ರಾತಿನಿಧ್ಯವಿಲ್ಲದ ಸಣ್ಣ ಸಮುದಾಯಗಳೆಂದರೆ ನಿಮಗೆ ತಾತ್ಸಾರವೇ ಬೊಮ್ಮಾಯಿ ಅವರೇ?, ಬಲಾಢ್ಯ ಜಾತಿಗಳ ನಿಗಮಕ್ಕೆ ನೂರಾರು ಕೋಟಿ ಕೊಟ್ಟು ಓಲೈಸಿಕೊಳ್ಳಲು ಯತ್ನಿಸುವ ಬಿಜೆಪಿಗೆ ಕಾಡುಗೊಲ್ಲ ಅಭಿವೃದ್ಧಿ ನಿಗಮದ ₹17 ಕೋಟಿ ವಾಪಸ್ ಪಡೆಯುವ ಧೂರ್ತತನ ಬಂದಿರುವುದೇಕೆ?’ ಎಂದು ಕಾಂಗ್ರೆಸ್ ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT