ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮೀರ್ ಕೆ ಸಾಥ್, ಗರೀಬೋಂಕಾ ವಿನಾಶ್’ ಎಂಬುದಕ್ಕೆ ಬಜೆಟ್‌ ಸಾಕ್ಷಿ: ಸಿದ್ದರಾಮಯ್ಯ

Last Updated 1 ಫೆಬ್ರುವರಿ 2022, 15:58 IST
ಅಕ್ಷರ ಗಾತ್ರ

ಬೆಂಗಳೂರು: ‘ಅಮೀರ್ ಕೆ ಸಾಥ್, ಗರೀಬೋಂಕಾ ವಿನಾಶ್’ ಎಂಬುದಕ್ಕೆ ಕೇಂದ್ರ ಬಜೆಟ್‌ ಸಾಕ್ಷಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೇಂದ್ರ ಬಜೆಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಾ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಏಕೈಕ ಗುರಿ ‘ಅಮೀರ್ ಕೆ ಸಾಥ್, ಗರೀಬೋಂಕಾ ವಿನಾಶ್’ ಎನ್ನುವುದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2022-23ನೇ ಸಾಲಿನ ಬಜೆಟ್ ಸಾಕ್ಷಿಯಾಗಿದೆ’ ಎಂದು ಕಿಡಿಕಾರಿದ್ದಾರೆ.

‘ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ತಮ್ಮ ಬಜೆಟ್‌ನಲ್ಲಿ ಯಾವುದೇ ಮುಜುಗರ-ಅಂಜಿಕೆ ಇಲ್ಲದೆ ಶ್ರೀಮಂತರು ಮತ್ತು ಕ್ರೋನಿ ಬಂಡವಾಳಿಗರ ಕೈ ಹಿಡಿದಿದ್ದು, ಬಡವರು, ರೈತರು, ಯುವಜನರನ್ನು ಮಾತ್ರವಲ್ಲ, ತಮ್ಮ ಪಕ್ಷವನ್ನು ಬೆಂಬಲಿಸುತ್ತಾ ಬಂದಿರುವ ಮಧ್ಯಮವರ್ಗವನ್ನೂ ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ’ ಎಂದು ಗುಡುಗಿದ್ದಾರೆ.

‘ರೈತರ ಚಳುವಳಿಯ ಒತ್ತಡಕ್ಕೆ ಮಣಿದು ಕರಾಳ ಕೃಷಿ ಕಾನೂನುಗಳನ್ನು ಕೈಬಿಟ್ಟಿರುವ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಅನುದಾನವನ್ನು ₹1,31,531 ಕೋಟಿಯಿಂದ ₹1,32,513 ಕೋಟಿಗೆ ಹೆಚ್ಚಿಸಿದೆ. ಅಂದರೆ ಕೇವಲ ₹982 ಕೋಟಿ ಹೆಚ್ಚಿಸಿ ರೈತರ ವಿರುದ್ಧ ಸೇಡು ತೀರಿಸಿಕೊಂಡಿದೆ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಳೆ ವಿಮೆ ಅನುದಾನವನ್ನು ₹15,989 ಕೋಟಿಯಿಂದ ₹15,500 ಕೋಟಿಗೆ, ಯೂರಿಯಾ ಸಬ್ಸಿಡಿಯನ್ನು ₹75,930 ಕೋಟಿಯಿಂದ ₹63,222 ಕೋಟಿಗೆ ಮತ್ತು ಬೆಂಬಲ ಬೆಲೆಯ ಅನುದಾನವನ್ನು ₹3,596 ಕೋಟಿಯಿಂದ ₹1500 ಕೋಟಿಗೆ ಇಳಿಸಿ ರೈತರ ಬೆನ್ನುಮೂಳೆ ಮುರಿಯಲಾಗಿದೆ. ರೈತರ ಆದಾಯ ದುಪ್ಪಟ್ಟು ಆಗುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ.

‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಆಹಾರ ನಿಗಮಕ್ಕೆ ನೀಡುವ ಸಬ್ಸಿಡಿಯನ್ನು ₹2,10,929 ಕೋಟಿಯಿಂದ ₹1,45,920 ಕೋಟಿಗೆ ಮತ್ತು ಗ್ರಾಮೀಣ ನಿರುದ್ಯೋಗಿ ಜನತೆಗೆ ಸಂಜೀವಿನಿಯಂತಿದ್ದ ನರೇಗಾ ಯೋಜನೆಯ ಅನುದಾನವನ್ನು ₹98,000 ಕೋಟಿಯಿಂದ ₹73,000 ಕೋಟಿಗೆ ಇಳಿಸಿ ಬಡವರ ಹೊಟ್ಟೆಗೆ ಹೊಡೆಯಲಾಗಿದೆ’ ಎಂದು ಕುಟುಕಿದ್ದಾರೆ.

ಸಾಲದ ಹೊರೆಯಿಂದಾಗಿ ಕೇಂದ್ರ ಸರ್ಕಾರ ಪ್ರತೀ ವರ್ಷ 9 ಲಕ್ಷದ 40 ಸಾವಿರ ಕೋಟಿ ಬಡ್ಡಿ ಪಾವತಿಸಬೇಕಾಗುತ್ತದೆ. ಇದರಿಂದ ಬಜೆಟ್‌ನ ಬಹುಭಾಗ ಸಾಲ ಮತ್ತು ಬಡ್ಡಿಗೆ ಖರ್ಚಾಗುತ್ತದೆ, ಅಭಿವೃದ್ದಿಗೆ ದುಡ್ಡೆಲ್ಲಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT