ಸೋಮವಾರ, ಅಕ್ಟೋಬರ್ 18, 2021
22 °C
‘ಗ್ರಾ.ಪಂ. ಸಶಕ್ತೀಕರಣ ದಿಕ್ಕಿನಲ್ಲಿ ದಿಟ್ಟ ಹೆಜ್ಜೆ’

ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿಗಳ ಸಶಕ್ತೀಕರಣ ಮಹಾತ್ಮಾ ಗಾಂಧಿಯವರ ಆಶಯ. ಆ ಆಶಯವನ್ನು ಈಡೇರಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಹೆಜ್ಜೆ ಇಟ್ಟಿದೆ. ಈ ಯೋಜನೆಯಲ್ಲಿ ಇ- ಗ್ರಂಥಾಲಯ ಪರಿಕಲ್ಪನೆ ಉತ್ತಮವಾಗಿದೆ’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಶ್ಲಾಘಿಸಿದರು.

75ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದೇ ಆಗಸ್ಟ್‌ 15ರಂದು ಘೋಷಿಸಿದ್ದ ‘ಅಮೃತ ಗ್ರಾಮ ಪಂಚಾಯಿತಿ ಯೋಜನೆ‘ಗೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಹಣಕಾಸು ಆಯೋಗಗಳ ಮೂಲಕ‌ ರಾಜ್ಯಕ್ಕೆ ಸಾಕಷ್ಟು ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಯಾವ ಸರ್ಕಾರ ಇದೆ ಎಂದು ನೋಡದೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. 13ನೇ ಹಣಕಾಸು ಆಯೋಗಕ್ಕಿಂತ ಮೂರು ಪಟ್ಟು ಹೆಚ್ಚಿನ ಅನುದಾನವನ್ನು 14ನೇ ಹಣಕಾಸು ಆಯೋಗದಲ್ಲಿ ನೀಡಲಾಗಿದೆ’ ಎಂದರು.

‘ಕರ್ನಾಟಕಕ್ಕೆ ಕೇಂದ್ರದ ಮಟ್ಟದಲ್ಲಿ ವಿಶೇಷ ಸ್ಥಾನಮಾನ ಇದೆ. ಕರ್ನಾಟಕ ಇಲ್ಲದೇ ಭಾರತ ಇಲ್ಲ. ನರೇಗಾದಡಿ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ₹ 1.51 ಕೋಟಿ ಖರ್ಚು ಮಾಡಿತ್ತು. ಆದರೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆಯಡಿ ರಾಜ್ಯದಲ್ಲಿ ₹ 4.36 ಕೋಟಿ ವೆಚ್ಚ ಮಾಡಿದೆ’ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಹಕಾರ ಸಚಿವ ಎಸ್‌. ಟಿ. ಸೋಮಶೇಖರ್, ತೋಟಗಾರಿಕೆ ಮತ್ತು ಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್. ಮುನಿರತ್ನ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇದ್ದರು.

750 ಗ್ರಾಮ ಪಂಚಾಯತಿಗಳ ಅಭಿವೃದ್ಧಿ: ಈ ಯೋಜನೆಯಡಿ 750 ಗ್ರಾಮ ಪಂಚಾಯಿತಿಗಳನ್ನು ಮುಂದಿನ ಬಜೆಟ್ ಒಳಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೂ ಹೆಚ್ಚುವರಿಯಾಗಿ ₹ 25 ಲಕ್ಷ ಮಂಜೂರು ಮಾಡಲಾಗುತ್ತದೆ.

ಈ ಯೋಜನೆಗೆ ಆಯ್ಕೆಯಾದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಬೀದಿದೀಪಗಳ ಅಳವಡಿಕೆ, ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವುದು, ಶೇ100ರಷ್ಟು ಘನ ತ್ಯಾಜ್ಯ ವಿಂಗಡಗೆ ಹಾಗೂ ವಿಲೇವಾರಿ, ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವುದು, ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ, ಅಮೃತ್ ಉದ್ಯಾನವನಗಳ ನಿರ್ಮಾಣ, ಗ್ರಂಥಾಲಯಗಳ ಡಿಜಿಟಲೀಕರಣ, ಶಾಲೆಗಳು, ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯಗಳಿಗೆ ಸೌಲಭ್ಯ ಕಲ್ಪಿಸುವುದು, ಆಟದ ಮೈದಾನ ಹಾಗೂ ಆವರಣ ಗೋಡೆಗಳನ್ನು ನಿರ್ಮಿಸುವುದು, ರೈತರ ಉಪಯೋಗಕ್ಕಾಗಿ ಗ್ರಾಮೀಣ ಗೋದಾಮಗಳ ನಿರ್ಮಾಣ, ಕೆರೆಗಳ, ಕಲ್ಯಾಣಿಗಳ ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ.

ಆಯ್ಕೆಯಾದ ಗ್ರಾಮಪಂಚಾಯಿತಿಗಳು: ಬಾಗಲಕೋಟೆ - 23, ಬಳ್ಳಾರಿ - 28, ಬೆಳಗಾವಿ - 59, ಬೆಂಗಳೂರು ನಗರ - 11, ಬೆಂಗಳೂರು ಗ್ರಾಮೀಣ - 12, ಬೀದರ್ - 22, ಚಾಮರಾಜನಗರ - 15, ಚಿಕ್ಕಬಳ್ಳಾಪುರ - 18, ಚಿಕ್ಕಮಗಳೂರು - 26, ಚಿತ್ರದುರ್ಗ - 22, ದಕ್ಷಿಣ ಕನ್ನಡ - 27, ದಾವಣಗೆರೆ - 23, ಧಾರವಾಡ - 17, ಗದಗ - 14, ಹಾಸನ - 31, ಹಾವೇರಿ - 26, ಕಲ್ಬುರ್ಗಿ - 31, ಕೊಡಗು - 12, ಕೋಲಾರ - 18, ಕೊಪ್ಪಳ - 18, ಮಂಡ್ಯ - 27, ಮೈಸೂರು - 31, ರಾಯಚೂರು - 21, ರಾಮನಗರ - 15, ಶಿವಮೊಗ್ಗ - 32, ತುಮಕೂರು - 38, ಉಡುಪಿ - 18, ಉತ್ತರ ಕನ್ನಡ - 27, ವಿಜಯಪುರ - 25, ಯಾದಗಿರಿ - 14, ಸರ್ಕಾರದ ಮಟ್ಟದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳು– 50. ಹೀಗೆ ಒಟ್ಟು 750 ಗ್ರಾಮ ಪಂಚಾಯಿತಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು