ಶನಿವಾರ, ಅಕ್ಟೋಬರ್ 31, 2020
27 °C

ಕೋವಿಡ್‌: ಕೇಂದ್ರ ಸಚಿವ ಅಂಗಡಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಚಿವ ಸುರೇಶ ಅಂಗಡಿ

ಬೆಳಗಾವಿ/ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ (66) ಬುಧವಾರ ಕೋವಿಡ್‌ನಿಂದ ನವದೆಹಲಿಯ ಏಮ್ಸ್‌ ಅಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ತಾಯಿ, ಪತ್ನಿ ಮಂಗಳಾ, ಪುತ್ರಿಯರಾದ ಸ್ಫೂರ್ತಿ ಹಾಗೂ ಶ್ರದ್ಧಾ ಇದ್ದಾರೆ. ಶ್ರದ್ಧಾ ಅವರು, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರ ಮಗ ಸಂಕಲ್ಪ್‌ ಶೆಟ್ಟರ್‌ ಅವರ ಪತ್ನಿ.

ಅಧಿವೇಶನದಲ್ಲಿ ಪಾಲ್ಗೊಳ್ಳುವುದಕ್ಕಾಗಿ ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಪರೀಕ್ಷೆಗೆ ಒಳಗಾಗಿದ್ದ ಅವರಿಗೆ ಕೋವಿಡ್–19 ದೃಢಪಟ್ಟಿತ್ತು. ಈ ಬಗ್ಗೆ ಫೇಸ್‌ಬುಕ್  ಹಾಗೂ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಅವರು, ‘ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ತಿಳಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ತಾಲ್ಲೂಕಿನ ಕೆ.ಕೆ. ಕೊಪ್ಪ ಗ್ರಾಮದಲ್ಲಿ ಚನ್ನಬಸಪ್ಪ–ಸೋಮವ್ವ ದಂಪತಿಯ ಪುತ್ರನಾಗಿ 1955ರ ಜೂನ್ 1ರಂದು ಜನಿಸಿದರು. ಬಿ.ಕಾಂ,
ಎಲ್‌.ಎಲ್‌.ಬಿ. ಪದವೀಧರರಾಗಿದ್ದರು. 1996ರಲ್ಲಿ ರಾಜಕೀಯ ಜೀವನ ಆರಂಭಿಸಿದರು.

2004ರಿಂದ ಸತತ 4 ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದ ಅವರು, ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾಗಿದ್ದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು.

ಅಂಗಡಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್‌, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ. ದೆಹಲಿಯ ಸರ್ಕಾರಿ ಕಚೇರಿಗಳಲ್ಲಿ ಗುರುವಾರ ರಾಷ್ಟ್ರಧ್ವಜವನ್ನು ಅರ್ಧಮಟ್ಟದಲ್ಲಿ ಹಾರಿಸಲು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.

ಒದನ್ನೂ ಓದಿ: ಸುರೇಶ್‌ ಅಂಗಡಿ: ಸಜ್ಜನ ರಾಜಕಾರಣಿ, ಸೋಲರಿಯದ ಸರದಾರ


ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಪುತ್ರಿ ಶ್ರದ್ಧಾ ಅವರೊಂದಿಗೆ ಸಚಿವ ಜಗದೀಶ ಶೆಟ್ಟರ್‌ ಅವರ ಪುತ್ರ ಸಂಕಲ್ಪ ಅವರೊಂದಿಗೆ ನಡೆದ ಆರಕ್ಷತೆ ಸಮಾರಂಭ

ರೈಲ್ವೆ ಸಚಿವರಾಗಿ ಸುರೇಶ ಅಂಗಡಿ ಕೊಡುಗೆ:

* ಬೆಳಗಾವಿ– ಬೆಂಗಳೂರು ಸೂಪರ್‌ಫಾಸ್ಟ್‌ ರೈಲು
* ಬೆಳಗಾವಿ– ಕಿತ್ತೂರು– ಧಾರವಾಡ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ
* ಬಾಗಲಕೋಟೆ– ಕುಡಚಿ ರೈಲು ಮಾರ್ಗ ಕಾಮಗಾರಿಗೆ ಹೆಚ್ಚಿನ ಒತ್ತು
* ಕಿಸಾನ್‌ ರೈಲು ಆರಂಭ
* ವಿಜಯಪುರ– ಮಂಗಳೂರು ರೈಲು

ರಾಜಕೀಯ ಬದುಕು...

* 1996–1999: ಬೆಳಗಾವಿ ಬಿಜೆಪಿ ಉಪಾಧ್ಯಕ್ಷರು
* 2000–2004: ಕಾರ್ಯನಿರ್ವಾಹಕರು, ವಾಣಿಜ್ಯ ಮಂಡಳಿ, ಬೆಳಗಾವಿ
* 2001–2004: ಬಿಜೆಪಿ ಅಧ್ಯಕ್ಷರು
* 2004: 14ನೇ ಲೋಕಸಭೆಗೆ ಚುನಾಯಿತರಾದರು
* 2009: 15ನೇ ಲೋಕಸಭೆಗೆ ಮರು ಆಯ್ಕೆ
* 2019: 17ನೇ ಲೋಕಸಭೆಗೆ ಆಯ್ಕೆ

ಇನ್ನಷ್ಟು ಓದು:

* ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ನಿಧನ: ಪ್ರಧಾನಿ ಮೋದಿ ಸಂತಾಪ

* ಗುಣಮಟ್ಟದ ಶಿಕ್ಷಣದ ಪಣ: ಶಿಕ್ಷಣ ಪ್ರತಿಷ್ಠಾನ ಸ್ಥಾಪಿಸಿದ ಸುರೇಶ ಅಂಗಡಿ
* ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಸುರೇಶ ಅಂಗಡಿ ಕೊಡುಗೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು