ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠೇವಣಿ ವಂಚನೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧಾರ

ಬಡ್ಡಿ ಆಮಿಷ ತೋರಿಸಿ ವಂಚಿಸುವ ಕಂಪನಿಗಳ ನಿಯಂತ್ರಣಕ್ಕೆ ಹೊಸ ನಿಯಮ
Last Updated 22 ಅಕ್ಟೋಬರ್ 2020, 21:00 IST
ಅಕ್ಷರ ಗಾತ್ರ

ಬೆಂಗಳೂರು: ಭಾರಿ ಲಾಭ, ಬಡ್ಡಿಯ ಆಮಿಷ ತೋರಿಸಿ ಸಾರ್ವಜನಿಕರಿಂದ ಬೇಕಾಬಿಟ್ಟಿ ಹಣ ಸಂಗ್ರಹ ಮಾಡುವಖಾಸಗಿ ಹಣಕಾಸು ಸಂಸ್ಥೆಗಳು ಜನರಿಗೆ ವಂಚಿಸುವುದನ್ನು ತಡೆಗಟ್ಟಲು ಸರ್ಕಾರ ಮುಂದಡಿ ಇಟ್ಟಿದೆ.

ರಾಜ್ಯದಲ್ಲಿ ಐಎಂಎ, ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ಗಳು ಠೇವಣಿದಾರರಿಗೆ ಸೇರಿದ ಸಾವಿರಾರು ಕೋಟಿ ರೂಪಾಯಿ ವಂಚಿಸಿರುವ ಬೆನ್ನಲ್ಲೇ ಕಠಿಣ ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ. ಈ ಉದ್ದೇಶಕ್ಕಾಗಿ ‘ಕರ್ನಾಟಕ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ನಿಯಮ–2020’ರ ಹೆಸರಿನಲ್ಲಿ ಕಾಯ್ದೆ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

2019ರಲ್ಲಿ ಕೇಂದ್ರ ಸರ್ಕಾರ ಈ ಸಂಬಂಧ ಕಾಯ್ದೆಯೊಂದನ್ನು ಜಾರಿ ಮಾಡಿದ್ದು, ಅದನ್ನು ಆಧಾರವಾಗಿಟ್ಟುಕೊಂಡು ರಾಜ್ಯದಲ್ಲಿ ನಿಯಮಗಳ ಚೌಕಟ್ಟು ರೂಪಿಸಲಾಗಿದೆ. ಮುಂಬರುವ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆದು ಕಾಯ್ದೆ ಜಾರಿಗೊಳಿಸಲು ಸಂಪುಟ ಸಭೆ ನಿರ್ಧರಿಸಿದೆ.

ಈ ಕಾಯ್ದೆ ಜಾರಿಗೆ ಬಂದ ನಂತರ ಖಾಸಗಿ ಹಣಕಾಸು ಸಂಸ್ಥೆಗಳು ಸಾರ್ವಜನಿಕರಿಂದ ಬೇಕಾಬಿಟ್ಟಿ ಹಣ ಸಂಗ್ರಹಿಸಲು ಸಾಧ್ಯವಿಲ್ಲ. ಠೇವಣಿದಾರರಿಗೆ ಹೆಚ್ಚಿನ ಸುರಕ್ಷತೆ ನೀಡುವ ಅಂಶಗಳನ್ನು ಕಾಯ್ದೆ ಒಳಗೊಂಡಿರುತ್ತದೆ ಎಂದು ಹಣಕಾಸು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಯಾವುದೇ ಒಂದು ಹಣಕಾಸು ಸಂಸ್ಥೆ ಅನಿಯಂತ್ರಿತವಾಗಿ ಠೇವಣಿ ಯೋಜನೆಗಳನ್ನು ಘೋಷಿಸಿ, ಆ ಮೂಲಕ ಹಣ ಸಂಗ್ರಹಿಸುತ್ತಿದ್ದರೆ, ಆ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡುವ ಅವಕಾಶವನ್ನು ಕಲ್ಪಿಸಲಾಗುವುದು. ಈ ದೂರನ್ನು ಆಧರಿಸಿ ಸಕ್ಷಮ ಪ್ರಾಧಿಕಾರ ಅಂತಹ ಹಣಕಾಸು ಸಂಸ್ಥೆಯ ಆಸ್ತಿಯನ್ನು ತಾತ್ಕಾಲಿಕವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳಬಹುದು. ಅಲ್ಲದೆ, ಠೇವಣಿದಾರರ ದೂರುಗಳ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸೆಕ್ಯುರಿಟೀಸ್‌ ಅಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ(ಸೆಬಿ), ಇನ್ಸ್ಯೂರೆನ್ಸ್‌ ರೆಗ್ಯುಲೇಟರಿ ಅಂಡ್‌ ಡೆವಲಪ್‌ಮೆಂಟ್‌(ಐಆರ್‌ಡಿಎ), ಎಂಪ್ಲಾಯಿಸ್‌ ಪ್ರಾವಿಡೆಂಟ್‌ ಫಂಡ್‌ ಆರ್ಗನೈಸೇಷನ್‌(ಇಪಿಎಫ್‌ಒ), ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ(ಆರ್‌ಬಿಐ), ಪೆನ್ಷನ್‌ ಫಂಡ್‌ ರೆಗ್ಯುಲೇಟರಿ ಅಂಡ್‌ ಡೆವಲಪ್‌ಮೆಂಟ್‌ ಅಥಾರಿಟಿ(ಪಿಎಫ್‌ಆರ್‌ಡಿಎ), ನ್ಯಾಷನಲ್‌ ಹೌಸಿಂಗ್‌ ಬೋರ್ಡ್‌ (ಎನ್‌ಎಚ್‌ಬಿ) ಮತ್ತು ಸರ್ಕಾರದ ಇಲಾಖೆಗಳಿಂದ ಒಪ್ಪಿಗೆ ಪಡೆಯದೇ ಆರಂಭಿಸುವ ಠೇವಣಿ ಯೋಜನೆಗಳನ್ನು ಅನಿಯಂತ್ರಿತ ಠೇವಣಿಗಳು ಎಂದು ಪರಿಗಣಿಸಲಾಗುವುದು.

ಯಾವುದಕ್ಕೆಲ್ಲ ನಿಷೇಧ: ಎಲ್ಲ ರೀತಿಯ ಅನಿಯಂತ್ರಿತ ಠೇವಣಿ ಯೋಜನೆಗಳು ನಿಷೇಧಿಸಲ್ಪಡುತ್ತವೆ. ಠೇವಣಿ ಸಂಗ್ರಹಿಸುವವರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಠೇವಣಿ ಯೋಜನೆಗಳನ್ನು ಉತ್ತೇಜಿಸುವ ಜಾಹೀರಾತು ಪ್ರಕಟಿಸುವಂತಿಲ್ಲ. ನಿರ್ದಿಷ್ಟ(ಅನಿಯಂತ್ರಿತ) ಠೇವಣಿ ಯೋಜನೆಗಳಿಗೆ ಹೆಸರು ನೋಂದಾಯಿಸಿ ಅಥವಾ ಹೂಡಿಕೆಗೆ ಮನವೊಲಿಸುವ ಪ್ರಯತ್ನಗಳಿಗೆ ಕಡಿವಾಣ ಬೀಳಲಿದೆ.

ನಿಯಂತ್ರಿತ ಠೇವಣಿ ಯೋಜನೆಗಳಲ್ಲಿ ಹಣಕಾಸು ಸಂಸ್ಥೆಗಳು ಠೇವಣಿದಾರರಿಗೆ ಹಣ ಪಾವತಿಯಲ್ಲಿ ಮೋಸ ಮಾಡಿದ್ದರೆ, ಭವಿಷ್ಯದಲ್ಲಿ ಅಂತಹ ಸಂಸ್ಥೆಗಳ ಮೇಲೆ ನಿಷೇಧ ವಿಧಿಸಬಹುದು.

ಅನಿಯಂತ್ರಿತ ಠೇವಣಿ ಯೋಜನೆಗಳಲ್ಲಿ ಹಣ ತೊಡಗಿಸಲು ಯಾರೂ ಪುಸಲಾಯಿಸುವಂತಿಲ್ಲ. ಇದಕ್ಕಾಗಿ ಜನಪ್ರಿಯ ವ್ಯಕ್ತಿಗಳನ್ನು ಬಳಸಿಕೊಳ್ಳಬಾರದು. ಯೋಜನೆಗಳ ಪರವಾಗಿ ಅವರನ್ನು ಬಳಸಿಕೊಳ್ಳುವುದು ಅಥವಾ ಅವರಿಂದ ಹೇಳಿಕೆಗಳನ್ನು ಕೊಡಿಸುವುದು ಅಪರಾಧ.

ಅಲ್ಲದೆ, ಚೀಟಿ ಸ್ಕೀಂ ಮೂಲಕ ಬಹುಮಾನ ನೀಡುವ ಮತ್ತು ಹಣ ಚಲಾವಣೆ ಸ್ಕೀಮ್‌ಗಳೂ ಅನಿಯಂತ್ರಿತ ಠೇವಣಿ ಯೋಜನೆಗಳಡಿ ಬರಲಿವೆ.

40 ಕ್ವಿಂಟಲ್‌ ಭತ್ತ ಖರೀದಿ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರಿಂದ ಪ್ರತಿ ಎಕರೆಗೆ 16 ಕ್ವಿಂಟಲ್‌ನಂತೆ, ಗರಿಷ್ಠ 40 ಕ್ವಿಂಟಲ್‌ವರೆಗೆ ಭತ್ತ ಖರೀದಿಸಲು ಬೆಂಬಲ ಬೆಲೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ಸಂಬಂಧಿಸಿದ ಸಂಪುಟ ಉಪ ಸಮಿತಿ ನಿರ್ಧರಿಸಿದೆ

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯ ಉಪ ಸಮಿತಿಯ ಸಭೆ ಗುರುವಾರ ನಡೆಯಿತು.

ಭತ್ತ ಖರೀದಿಗೆ ರಾಜ್ಯ ಆವರ್ತ ನಿಧಿಯಿಂದ ₹ 300 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ರೈತರಿಂದ ಹೆಚ್ಚುವರಿಯಾಗಿ 1 ಲಕ್ಷ ಟನ್‌ ಭತ್ತ ಖರೀದಿ, ಬೆಂಬಲ ಬೆಲೆಯಡಿ ತೊಗರಿ ಖರೀದಿಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು ಹಾಗೂ ಶೇಂಗಾ ಹಾಗೂ ಸೋಯಾಬೀನ್‌ ಖರೀದಿಗೆ ಚಾಲನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

‘ಸುಕನ್ಯಾ ಸಮೃದ್ಧಿ’ ಮೂಲಕ ‘ಭಾಗ್ಯಲಕ್ಷ್ಮಿ’

‘ಭಾಗ್ಯಲಕ್ಷ್ಮಿ’ ಬಾಂಡ್‌ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮದ ಬದಲು ಅಂಚೆ ಇಲಾಖೆಯ ‘ಸುಕನ್ಯಾ ಸಮೃದ್ಧಿ’ ಮೂಲಕ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.

ಫಲಾನುಭವಿಗೆ 18 ವರ್ಷ ತುಂಬಿದಾಗ ₹1 ಲಕ್ಷ ಸಿಗುತ್ತದೆ. ಭಾರತೀಯ ಜೀವ ವಿಮಾ ನಿಗಮವು ಈ ಹಿಂದೆ ಒಪ್ಪಂದ ಮಾಡಿಕೊಂಡಂತೆ ಬಾಂಡ್‌ ಮೆಚುರಿಟಿ ಆದ ಬಳಿಕ ₹1 ಲಕ್ಷ ಪಾವತಿ ಮಾಡಲು ತಕರಾರು ಮಾಡುತ್ತಲೇ ಇತ್ತು. ಆದ್ದರಿಂದ ಏಜೆನ್ಸಿ ಬದಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಸ್ತುವಾರಿಗಳ ಬಗ್ಗೆ ಅತೃಪ್ತಿ

‘ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

‘ಯಾವ ಮಟ್ಟದಲ್ಲಿ ನಿರ್ವಹಣೆ ಆಗಬೇಕಿತ್ತೋ ಅದು ಆಗುತ್ತಿಲ್ಲ. ಇನ್ನೂ ಹೆಚ್ಚಿನ ಶ್ರಮವಹಿಸಬೇಕು. ರಾಜ್ಯ, ಕೇಂದ್ರ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಮಾಡಿರುವ ಕೆಲಸಗಳನ್ನು ಜನರಿಗೆ ಹೇಳಬೇಕು. ಎಲ್ಲವನ್ನು ನಾನೊಬ್ಬನೇ ಮಾಡಬೇಕೆ’ ಎಂದು ಪ್ರಶ್ನಿಸಿದರು ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT