ಶುಕ್ರವಾರ, ಸೆಪ್ಟೆಂಬರ್ 25, 2020
25 °C
ಸಾಗರ ತಾಲ್ಲೂಕಿನಲ್ಲಿ ಕೃಷಿಕ ನಾಗೇಂದ್ರ ಸಾಗರ ಪರಿಕಲ್ಪನೆಗೆ ದಾನಿಗಳ ಸ್ಪಂದನೆ

ಬಡಮಕ್ಕಳಿಗೆ ‘ಮೊಬೈಲ್‌ ದಾನ’ ಅಭಿಯಾನ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ದಾನಿಗಳು ನೀಡಿದ 4ಜಿ ಮೊಬೈಲ್‌ ಫೋನನ್ನು ಕೃಷಿ ಕಾರ್ಮಿಕ ಉದಯ ಅವರ ಮಗಳು ನಿಶಾಗೆ ನೀಡುತ್ತಿರುವ ನಾಗೇಂದ್ರ ಸಾಗರ್ ದಂಪತಿ.

ಶಿವಮೊಗ್ಗ: ಮೊಬೈಲ್‌ ಫೋನ್ ಖರೀದಿಸುವ ಸಾಮರ್ಥ್ಯವಿಲ್ಲದೆ ಆನ್‌ಲೈನ್‌ ಪಾಠದಿಂದ ವಂಚಿತರಾಗುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಸಾಗರ ತಾಲ್ಲೂಕಿನ ಚಿಪ್ಪಳಿಯ ಕೃಷಿಕ ನಾಗೇಂದ್ರ ಸಾಗರ್ ಸಾಮಾಜಿಕ ಜಾಲತಾಣಗಳಲ್ಲಿ ‘ಮೊಬೈಲ್ ಸೆಟ್ ದಾನ’ ಅಭಿಯಾನ ಆರಂಭಿಸಿದ್ದಾರೆ.

ತಮ್ಮ ಕೃಷಿಭೂಮಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕ ಉದಯ ಅವರಿಗೆ, ಪುತ್ರಿ ನಿಶಾಗೆ 4ಜಿ ಮೊಬೈಲ್‌ ಸೆಟ್‌ ಕೊಡಿಸಲು ಆಗದೇ ಆನ್‌ಲೈನ್ ಕಲಿಕೆಗೆ ತೊಡಕಾಗಿರುವುದನ್ನು ಗಮನಿಸಿದ ನಾಗೇಂದ್ರ, ಜಿಲ್ಲೆಯಲ್ಲಿ ಇಂತಹ ಸಂಕಷ್ಟ ಅನುಭವಿಸುವ ಮಕ್ಕಳಿಗೆ ನೆರವಾಗಲು ಅಭಿಯಾನ ಆರಂಭಿಸಿದ್ದಾರೆ.

ಸರ್ಕಾರಿ ಶಾಲೆಯಲ್ಲೇ ಮಕ್ಕಳನ್ನು ಓದಿಸುತ್ತಿರುವ ಬಡವರು, ಕೃಷಿ ಕಾರ್ಮಿಕರಿಗೆ ಆನ್‌ಲೈನ್ ಶಿಕ್ಷಣಕ್ಕೆ ಅಗತ್ಯವಾದ ಲ್ಯಾಪ್‌
ಟಾಪ್, ಟ್ಯಾಬ್, ಮೊಬೈಲ್‌ ಖರೀದಿಸಲು ಸಾಮರ್ಥ್ಯವಿಲ್ಲ. ಹೀಗಾಗಿ ಉಳ್ಳವರು ತಾವು ಉಪಯೋಗಿಸಿ ತೆಗೆದಿಟ್ಟಿರುವ, ಪ್ರಸ್ತುತ ಬಳಸಬಹುದಾದ 4ಜಿ ಸಾಮರ್ಥ್ಯದ ಮೊಬೈಲ್‌ ಸೆಟ್‌ಗಳನ್ನು ದಾನ ನೀಡುವಂತೆ ಅವರು ಮನವಿ ಮಾಡಿದ್ದಾರೆ. ಒಂದು
ಸೆಟ್‌ ಈಗಾಗಲೇ ಕಾರ್ಮಿಕ ಉದಯ ಅವರ ಪುತ್ರಿಗೆ ತಲುಪಿದೆ. 

‘ಶ್ರಾವಣ ಚಾವಡಿ’ ಕೃಷಿ, ಸಾಹಿತ್ಯ, ಪರಿಸರ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ನಾಗೇಂದ್ರ, ಸಾಗರ ತಾಲ್ಲೂಕಿನ 38 ಸರ್ಕಾರಿ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಮೊಬೈಲ್‌ ಫೋನ್ ಅಗತ್ಯ ಇರುವ 10ನೇ ತರಗತಿ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿದ್ದಾರೆ.

ದಾನ ಮಾಡಲು ಇಚ್ಛಿಸುವವರು ನಾಗೇಂದ್ರ ಸಾಗರ್ (8147299353), ‘ಶ್ರಾವಣ’, ಚಿಪ್ಪಳಿ, ವರದಾಮೂಲ ಅಂಚೆ.ಸಾಗರ
ತಾಲ್ಲೂಕು, ಶಿವಮೊಗ್ಗ ಜಿಲ್ಲೆ–577417 ಈ ವಿಳಾಸಕ್ಕೆ ಅಥವಾ ಬೆಂಗಳೂರಿನ ರಾಜಾಜಿನಗರದಲ್ಲಿ ಇರುವ ಸತ್ಪುಷ್ಟಿ ಲೈಫ್‌ಲೈನ್ ಪ್ರಾಡಕ್ಟ್ಸ್ ಕಚೇರಿಗೆ (91 80 4113 3543) ಸಂಪರ್ಕಿಸಬಹುದು.

ಉಡುಪಿ ವಿದ್ಯಾರ್ಥಿನಿಯರ ಉಮೇದು

ಬೆಂಗಳೂರು: ದಾನಿಗಳಿಂದ ಹಳೆಯ ಮೊಬೈಲ್‌ ಫೋನ್‌ಗಳನ್ನು ಪಡೆದು ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ವಿತರಿಸುವ ಕೆಲಸದಲ್ಲಿ ಉಡುಪಿಯ ಮೂವರು ವಿದ್ಯಾರ್ಥಿನಿಯರು ತೊಡಗಿಕೊಂಡಿದ್ದಾರೆ.

ಅದಿತ್ರಿ ಕಾಮತ್, ಅವನಿ ಶೆಟ್ಟಿ, ಕೇಕಿ ಆರ್ ತಲ್ಲೂರು ಈ ಮೂವರು ಸೇರಿಕೊಂಡು ಉಡುಪಿ ಜಿಲ್ಲೆಯ ಗ್ರಾಮೀಣ ಶಾಲೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ, ಯಾರಿಗೆಲ್ಲ ಮೊಬೈಲ್ ಬೇಕು ಎಂಬ ಮಾಹಿತಿ ಕಲೆ ಹಾಕಿದ್ದಾರೆ. ಸಾಮಾಜಿಕ ತಾಣದಲ್ಲಿ ‘ವಿ ನೀಡ್ ಯುವರ್ ಹೆಲ್ಪ್‌’ ಎಂಬ ಈ ತಂಡದ ಕೋರಿಕೆಗೆ ಅನೇಕರು ಸ್ಪಂದಿಸಿದ್ದಾರೆ. ದಾನಿಗಳು 7090458475 ಕ್ಕೆ
ಸಂಪರ್ಕಿಸಬಹುದು.

* ಈ ಅಭಿಯಾನದ ಮೂಲಕ ಬಡ ಮಕ್ಕಳಿಗೆ ನೆರವಾಗುವ ಜತೆಗೆ, ‘ಇ’ ತ್ಯಾಜ್ಯಕ್ಕೂ ಕಡಿವಾಣ ಹಾಕಬಹುದು

–ನಾಗೇಂದ್ರ ಸಾಗರ್, ಅಭಿಯಾನದ ರೂವಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು