ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಕೊಟ್ಟರೆ ‘ಭೂ ಒಡೆತನ’; ಎಸಿಬಿ ತನಿಖೆಯಿಂದ ಬೆಳಕಿಗೆ

ಲಂಚದ ಪ್ರಮಾಣ ಶೇ 30ರಿಂದ 35 ರವರೆಗೆ
Last Updated 27 ಡಿಸೆಂಬರ್ 2020, 19:57 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಮೂಲಕ ಪರಿಶಿಷ್ಟ ಪಂಗಡಗಳ ಭೂರಹಿತ ಮಹಿಳೆಯರಿಗೆ ಭೂಮಿ ಹಂಚುವ ‘ಭೂ ಒಡೆತನ’ ಯೋಜನೆ ಭ್ರಷ್ಟಾಚಾರದ ಕೂಪವಾಗಿದೆ. ಅಧಿಕಾರಿಗಳು ಮತ್ತು ಮಧ್ಯವರ್ತಿಗಳಿಗೆ ಶೇ 30ರಿಂದ 35ರಷ್ಟು ಲಂಚ ಕೊಡದೇ ಭೂ ಮಂಜೂರಾತಿ ಆಗುವುದಿಲ್ಲ ಎಂಬ ಅಂಶ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿರುವ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

‘ಭೂ ಒಡೆತನ’ ಯೋಜನೆ ಅನುಷ್ಠಾನ ಮಾಡುವ ಸಂಸ್ಥೆಗಳಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವೂ ಒಂದಾಗಿದ್ದು, ನಿಗಮದ ಅಧಿಕಾರಿಗಳು ಮತ್ತುಮಧ್ಯವರ್ತಿಗಳ ಕೈ ಸೇರುತ್ತಿದ್ದ ಲಂಚದ ಪ್ರಮಾಣ ಶೇ 35 ಮೀರಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

‘ಪ್ರತಿ ಮಂಜೂರಾತಿಯಲ್ಲೂ ಶೇ 15ರಷ್ಟು ಲಂಚದ ಹಣ ಅಧಿಕಾರಿಗಳ ಜೇಬು ಸೇರಿದರೆ, ಶೇ 20ರಷ್ಟು ಮಧ್ಯವರ್ತಿಗಳ ಪಾಲಾಗುತ್ತಿತ್ತು. ರಾಯಚೂರು, ಯಾದಗಿರಿ, ಕಲಬುರ್ಗಿ ಮತ್ತು ಗದಗ ಜಿಲ್ಲೆಗಳಲ್ಲಿ ಜಮೀನು ಖರೀದಿಸಿ ಹಂಚಿಕೆ ಮಾಡಿರುವುದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವುದಕ್ಕೆ ದಾಖಲೆಗಳು ಲಭ್ಯವಾಗಿವೆ’ ಎಂದು ತನಿಖಾ ಸಂಸ್ಥೆಯ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಎಸಿಬಿ ಅಧಿಕಾರಿಗಳು ಆಗಸ್ಟ್‌ 27ರಂದು ನಿಗಮದ ಕೇಂದ್ರ ಕಚೇರಿ ಮೇಲೆ ದಾಳಿ ನಡೆಸಿದ್ದರು. ನಿಗಮದ ಆಗಿನ ಪ್ರಧಾನ ವ್ಯವಸ್ಥಾಪಕ ಎಸ್‌.ಎಸ್‌. ನಾಗೇಶ್‌ ಸೇರಿದಂತೆ ಮೂವರನ್ನು ಬಂಧಿಸಿ ₹ 82 ಲಕ್ಷ ನಗದು ವಶಪಡಿಸಿಕೊಳ್ಳಲಾಗಿತ್ತು. ಆ ಬಳಿಕ ‘ಭೂ ಒಡೆತನ’ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಕಡತಗಳನ್ನು ವಶಪಡಿಸಿಕೊಂಡಿದ್ದ ಎಸಿಬಿ, ಪ್ರಾಥಮಿಕ ತನಿಖೆ ಆರಂಭಿಸಿತ್ತು.

2018‌ರ ಜ.1ರಿಂದ 2019ರ ಆ.31ರ ಅವಧಿಯಲ್ಲಿ ಈ ಯೋಜನೆಯಡಿ 26 ಜಿಲ್ಲೆಗಳಿಗೆ ₹ 47.15 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಪೈಕಿ ₹ 42.04 ಕೋಟಿಯನ್ನು ನಾಲ್ಕೇ ಜಿಲ್ಲೆಗಳಿಗೆ ನೀಡಲಾಗಿದೆ. ಈ ಅವಧಿಯಲ್ಲಿ ನಾಲ್ಕು ಜಿಲ್ಲೆಗಳಲ್ಲಿ ₹ 41.93 ಕೋಟಿ ವೆಚ್ಚ ಮಾಡಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಒಂದೇ ವಿಧಾನದಲ್ಲಿ ಮಧ್ಯವರ್ತಿಗಳು ಮತ್ತು ಅಧಿಕಾರಿಗಳ ಕೂಟ ಅಕ್ರಮ ಎಸಗಿರುವುದು ಪತ್ತೆಯಾಗಿದೆ.

ಮಾರುವವ, ಪಡೆಯುವವ ನೇಪಥ್ಯದಲ್ಲಿ: ಒಣ ಜಮೀನು ಹೊಂದಿರುವ ರೈತರನ್ನು ಸಂಪರ್ಕಿಸಿ ಹೆಚ್ಚು ದರ ಕೊಡಿಸುವ ಆಮಿಷ ಒಡ್ಡುತ್ತಿದ್ದ ಮಧ್ಯವರ್ತಿಗಳು, ನಿಗಮದ ಜಿಲ್ಲಾ ವ್ಯವಸ್ಥಾಪಕರ ಜತೆ ಸೇರಿ ‘ವ್ಯವಹಾರ’ ಕುದುರಿಸುತ್ತಿದ್ದರು.

ಕಡಿಮೆ ಮೌಲ್ಯದ ಜಮೀನಿಗೆ ಸಂಪೂರ್ಣ ಘಟಕ ವೆಚ್ಚದ (₹ 15 ಲಕ್ಷ) ದರ ನೀಡಿ ಖರೀದಿಗೆ ಪ್ರಸ್ತಾವ ಸಲ್ಲಿಸುತ್ತಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳೇ ನಿಗಮದ ಕೇಂದ್ರ ಕಚೇರಿಯ ಕಡತ ನಿರ್ವಾಹಕ, ಸಹಾಯಕ ಪ್ರಧಾನ ವ್ಯವಸ್ಥಾಪಕ, ಪ್ರಧಾನ ವ್ಯವಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ ಲಂಚದ ಹಣ ತಲುಪಿಸಿ ಮಂಜೂರಾತಿ ಆದೇಶ ಪಡೆಯುತ್ತಿದ್ದರು ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.

‘ಹೆಚ್ಚಿನ ಪ್ರಕರಣದಲ್ಲಿ ನಿಗಮದ ಕೇಂದ್ರ ಕಚೇರಿಯ ಅಧಿಕಾರಿಗಳಿಗೆ ಶೇ 7 ರಷ್ಟು ಲಂಚ ನೀಡಿರುವುದನ್ನು ಹಲವರು ಒಪ್ಪಿಕೊಂಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಶೇ 15ರವರೆಗೂ ಲಂಚ ನೀಡಿರುವುದಾಗಿ ಹೇಳಿದ್ದಾರೆ. ಜಿಲ್ಲಾ ವ್ಯವಸ್ಥಾಪಕರು, ಕೇಂದ್ರ ಕಚೇರಿಯ ಲಂಚದ ಮೊತ್ತ ಮತ್ತು ತಮ್ಮ ‘ಪಾಲು’ ಕಡಿತ ಮಾಡಿಕೊಂಡು ಜಮೀನು ಮಾಲೀಕರಿಗೆ ಹಣ ಪಾವತಿಸುತ್ತಿದ್ದರು ಎಂಬ ಮಾಹಿತಿ ಲಭಿಸಿದೆ’ ಎಂದು ಎಸಿಬಿಯ ಉನ್ನತ ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸಲು ಸಿದ್ಧತೆ: 2018ರ ಜ.1ರಿಂದ ಮತ್ತು 2019ರ ಆ.31ರವರೆಗೆ ಈ ನಾಲ್ಕು ಜಿಲ್ಲೆಗಳು ಹಾಗೂ ನಿಗಮದ ಕೇಂದ್ರ ಕಚೇರಿಯಲ್ಲಿ ಕಾರ್ಯನಿರ್ವಹಿಸಿರುವ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ರಾಜ್ಯ ಸರ್ಕಾರದ ಅನುಮತಿ ಕೋರಲು ಎಸಿಬಿ ಸಿದ್ಧತೆ ನಡೆಸಿದೆ.

2019ರ ಸೆಪ್ಟೆಂಬರ್‌ 1ರ ನಂತರದ ಪ್ರಕರಣಗಳ ಪ್ರಾಥಮಿಕ ತನಿಖೆಯೂ ಪ್ರಗತಿಯಲ್ಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಚೆಕ್‌ನಲ್ಲೇ ದಲ್ಲಾಳಿಗಳಿಗೆ ಹಣ!: ‘ಜಮೀನು ಮಾರುವವರಿಂದ ದಲ್ಲಾಳಿಗಳು ಮೊದಲೇ ‘ಪೋಸ್ಟ್‌ ಡೇಟೆಡ್‌ ಚೆಕ್‌’ ಪಡೆಯುತ್ತಿದ್ದರು. ಕೊನೆಯ ಕಂತಿನ ಶೇ 20ರಷ್ಟು ಮೊತ್ತ ಬಿಡುಗಡೆಯಾದ ತಕ್ಷಣ ರೈತರಿಂದ ಪಡೆದ ಚೆಕ್‌ಗಳನ್ನು ಬೇರೆಯವರ ಬ್ಯಾಂಕ್‌ ಖಾತೆಗಳ ಮೂಲಕ ಸಲ್ಲಿಸಿ ಆ ಮೊತ್ತವನ್ನು ಪೂರ್ತಿಯಾಗಿ ಪಡೆಯುತ್ತಿದ್ದ ವಿಷಯ ತನಿಖೆಯಲ್ಲಿ ಪತ್ತೆಯಾಗಿದೆ’ ಎಂದು ಎಸಿಬಿ ಮೂಲಗಳು ಹೇಳಿವೆ.

ಏನಿದು ಭೂ ಒಡೆತನ ಯೋಜನೆ?: ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ವಿವಿಧ ನಿಗಮಗಳ ಮೂಲಕ ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಭೂರಹಿತ ಮಹಿಳೆಯರಿಗೆ ಹಂಚಿಕೆ ಮಾಡಲಾಗುತ್ತದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ₹ 20 ಲಕ್ಷ ಹಾಗೂ ಉಳಿದ ಜಿಲ್ಲೆಗಳಲ್ಲಿ ₹ 15 ಲಕ್ಷದ ವೆಚ್ಚದಲ್ಲಿ ಎರಡು ಎಕರೆ ಜಮೀನು ಖರೀದಿಸಿ, ಫಲಾನುಭವಿಗೆ ಹಂಚಿಕೆ ಮಾಡಲಾಗುತ್ತದೆ. ಶೇ 50ರಷ್ಟನ್ನು ಸಹಾಯಧನದ ರೂಪದಲ್ಲಿ ಹಾಗೂ ಶೇ 50 ರಷ್ಟನ್ನು ಶೇ 6ರ ಬಡ್ಡಿ ದರದಲ್ಲಿ 10 ವರ್ಷಗಳ ಅವಧಿಯ ಸಾಲವಾಗಿ ಮಂಜೂರು ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT