ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣಾ ಟಿಕೆಟ್‌ ಘೋಷಣೆಯಾಗಿದೆ; ಕೋಲಾರ ಕೂಡಾ ಕೇಳಿದ್ದೇನೆ– ಸಿದ್ದರಾಮಯ್ಯ

Last Updated 25 ಮಾರ್ಚ್ 2023, 15:49 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ವರುಣಾ ಮತ್ತು ಕೋಲಾರ ಎರಡು ಕಡೆ ಟಿಕೆಟ್‌ ಕೊಡುವಂತೆ ಹೈಕಮಾಂಡ್‌ಗೆ ಕೇಳಿದ್ದೇನೆ. ವರುಣಾದಲ್ಲಿ ನಿಲ್ಲುವಂತೆ ಹೈಕಮಾಂಡ್‌ನವರು ಹೇಳಿದ್ದಾರೆ. ಕೋಲಾರ ಕೂಡ ಕೇಳಿದ್ದೇನೆ. ಆದರೆ, ಹೈಕಮಾಂಡ್ ನಿರ್ಧಾರವೇ ಅಂತಿಮ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಮೊದಲ ಪಟ್ಟಿ ಬಿಡುಗಡೆಯಾಗಿದೆ. ಒಂದೇ ಹೆಸರು, ಗೊಂದಲ ಇಲ್ಲದ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗಿದೆ. ಸ್ಕ್ರೀನಿಂಗ್ ಹಾಗೂ ಸಿಇಸಿ ಸಭೆಯಲ್ಲಿ ಚರ್ಚೆ ನಡೆದು ಪಟ್ಟಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ಆರು ಹಾಲಿ ಶಾಸಕರ ಕ್ಷೇತ್ರದಲ್ಲಿ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಹೀಗಾಗಿ, ಆ ಕ್ಷೇತ್ರಗಳಿಗೆ ಘೋಷಣೆ ಆಗಿಲ್ಲ. ಎರಡನೇ ಪಟ್ಟಿಯಲ್ಲಿ ಆ ಕ್ಷೇತ್ರಗಳ ಟಿಕೆಟ್‌ ಘೋಷಣೆ ಆಗಲಿದೆ‘ ಎಂದರು.

‘ಟಿಕೆಟ್‌ ನೀಡಲು ಸಮೀಕ್ಷೆ ಒಂದೇ ಮಾನದಂಡ ಅಲ್ಲ. ಕಾರ್ಯಕರ್ತರ ಅಭಿಪ್ರಾಯವೂ ಮುಖ್ಯವಾಗಿತ್ತು. ಪಕ್ಷದ ಕಾರ್ಯಾಧ್ಯಕ್ಷರು, ಉಸ್ತುವಾರಿ ಕಾರ್ಯದರ್ಶಿಗಳು ಕೂಡ ವರದಿ ಕೊಟ್ಟಿದ್ದರು. ಜಿಲ್ಲಾಧ್ಯಕ್ಷ, ಬ್ಲಾಕ್ ಅಧ್ಯಕ್ಷರ ಅಭಿಪ್ರಾಯವನ್ನೂ ಪಡೆದಿದ್ದೆವು. ಅದರ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡಿದ್ದೇವೆ’ ಎಂದೂ ಹೇಳಿದರು.

ರಾಹುಲ್‌ ವರ್ಚಸ್ಸಿಗೆ ಧಕ್ಕೆ: ‘ರಾಹುಲ್ ಗಾಂಧಿ ಅವರನ್ನು ತರಾತುರಿಯಲ್ಲಿ ಅನರ್ಹ ಮಾಡಲಾಗಿದೆ. ರಾಹುಲ್‌ ವರ್ಚಸ್ಸಿಗೆ ಧಕ್ಕೆ ತರಲು ಹೊರಟಿದ್ದಾರೆ. ದೇಶದಲ್ಲಿ ಇಂತಹ ಬೆಳವಣಿಗೆ ಆಗಿರಲಿಲ್ಲ. ಭಾರತ್ ಜೋಡೊ ಯಶಸ್ಸು ಬಿಜೆಪಿಗೆ ತಡೆಯಲಾಗಲಿಲ್ಲ. ಈ ಅನರ್ಹತೆಯಿಂದ ರಾಹುಲ್ ಮತ್ತಷ್ಟು ಜನಪ್ರಿಯ ಆಗುತ್ತಾರೆ. ಇದರಿಂದ ಲಾಭವಾಗಲಿದೆ ಎಂದು ಬಿಜೆಪಿಯವರು ಅಂದುಕೊಂಡರೆ ದಡ್ಡತನ‘ ಎಂದು ಸಿದ್ದರಾಮಯ್ಯ ಹೇಳಿದರು.

ರಾಮದುರ್ಗದ ಟಿಕೆಟ್‌ ಚಿಕ್ಕರೇವಣ್ಣಗೆ ಕೊಡಿ: ಬೆಳಗಾವಿ ಜಿಲ್ಲೆಯ ರಾಮದುರ್ಗ ಕ್ಷೇತ್ರದ ಆಕಾಂಕ್ಷಿ ಚಿಕ್ಕರೇವಣ್ಣಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ‘ಈ ಬಾರಿ ಮತ್ತೆ ಅಶೋಕ್ ಪಟ್ಟಣಗೆ ಟಿಕೆಟ್ ನೀಡಿರುವುದು ಸರಿಯಲ್ಲ. ಹೊಸ ಮುಖಕ್ಕೆ ಆದ್ಯತೆ ನೀಡಬೇಕು‘ ಎಂದು ಪಟ್ಟುಹಿಡಿದರು. ‘ಕುರುಬ ಸಮುದಾಯದ ಚಿಕ್ಕರೇವಣ್ಣಗೆ ಟಿಕೆಟ್ ನೀಡಬೇಕು‘ ಎಂದೂ ಆಗ್ರಹಿಸಿದರು.

ಚಿಕ್ಕರೇವಣ್ಣ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ ‘ಬೆಳಗಾವಿಯಲ್ಲಿ ಸಮಸ್ಯೆ ಬಗೆಹರಿಸಿದ್ದೇನೆ. ಈಗ ಮತ್ತೆ ಮನೆಗೆ ಬಂದಿದ್ದೀರಾ? ಸರ್ವೆ ಆಧರಿಸಿ ಟಿಕೆಟ್ ಹಂಚಿಕೆ ಮಾಡಿದ್ದೇವೆ’ ಎಂದರು.

ಅದಕ್ಕೆ ಬೆಂಬಲಿಗರು, ‘ನಾವು ಬಂಡಾಯ ಅಭ್ಯರ್ಥಿಯಾಗಿ ಚಿಕ್ಕರೇವಣ್ಣ ಅವರನ್ನು ಕಣಕ್ಕಿಳಿಸುತ್ತೇವೆ‘ ಎಂದು ಹೇಳಿ ಹೊರಟು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT