ಸೋಮವಾರ, ಸೆಪ್ಟೆಂಬರ್ 27, 2021
28 °C

ರಾಜ್ಯಸಭೆ ಕಲಾಪದ ಮಟ್ಟ: ಉಪರಾಷ್ಟ್ರಪತಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ಜನರಿಗೆ ಸ್ಪಂದಿಸುವ ವಿಷಯಗಳು ಚರ್ಚೆ ನಡೆಯದೇ ಇರುವ ಬಗ್ಗೆ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಅವರು ಬೇಸರ ವ್ಯಕ್ತಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಎಫ್‌ಕೆಸಿಸಿಐ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಂ.ಎಸ್‌.ರಾಮಯ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್‌.ಜಯರಾಂ ಅವರಿಗೆ ‘ಸರ್‌ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ರಾಜ್ಯಸಭೆ ಜನರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ವೇದಿಕೆ ಆಗಬೇಕು. ಆದರೆ ಚರ್ಚೆಗಳು ಆ ದಿಕ್ಕಿನಲ್ಲಿ ಸಾಗುತ್ತಿಲ್ಲ. ಹಲವು ರಾಜ್ಯಗಳ ವಿಧಾನಮಂಡಲಗಳಲ್ಲೂ ಇದೇ ಸ್ಥಿತಿ ಇದೆ. ಪ್ರತಿ ದಿನ ಗದ್ದಲ, ಅಡ್ಡಿ ಉಂಟು ಮಾಡುವ ಘಟನೆಗಳಿಂದ ಕಲಾಪದ ದಾರಿ ತಪ್ಪಿ ಹೋಗುತ್ತಿದೆ. ಇದರಿಂದ ಮನಸ್ಸಿಗೆ ಬೇಸರವಾಗುತ್ತದೆ’ ಎಂದು ವೆಂಕಯ್ಯನಾಯ್ಡು ಹೇಳಿದರು.

ಕರ್ನಾಟಕ ಹಲವು ಮುತ್ಸದ್ಧಿ ರಾಜಕಾರಣಿಗಳನ್ನು ಕಂಡಿದೆ. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ಅವರು ಮೌಲ್ಯಯುತ ರಾಜಕಾರಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದೂ ಅವರು ಸ್ಮರಿಸಿದರು.

ಕನ್ನಡದಲ್ಲಿಯೇ ತಮ್ಮ ಭಾಷಣ ಆರಂಭಿಸಿದ ವೆಂಕಯ್ಯನಾಯ್ಡು, ದೇಶಕಂಡ ಬಹುಮುಖ ಪ್ರತಿಭೆ, ಅಪರೂಪದ ಮೇಧಾವಿ ಸರ್‌.ಎಂ.ವಿಶ್ವೇಶ್ವರಯ್ಯ. ದೇಶದಲ್ಲಿ ಹಲವು ಅಣೆಕಟ್ಟುಗಳನ್ನು
ನಿರ್ಮಿಸಿ, ಜಲಸಂಪನ್ಮೂಲದ ಸದ್ಬಳಕೆಯ ಹಾದಿ ತೋರಿದರು. ತಿರುಮಲ ಬೆಟ್ಟದ ಘಾಟ್‌ ರಸ್ತೆ ನಿರ್ಮಾಣಕ್ಕೂ ಮಾರ್ಗದರ್ಶನ ನೀಡಿದ್ದರು ಎಂದು ವೆಂಕಯ್ಯನಾಯ್ಡು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ ರಾಜ್ಯದಲ್ಲಿ ಕಬ್ಬಿಣ ಮತ್ತು ಉಕ್ಕು, ಸಿಮೆಂಟ್‌, ಸಾಬೂನು, ಕಾಗದ ಕಾರ್ಖಾನೆ ಹೀಗೆ ಹಲವು ವಲಯಗಳ ಕೈಗಾರಿಕೆಗಳು ಪ್ರಾರಂಭವಾದವು. ಅವರೊಬ್ಬ ಯುಗಪುರುಷ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌ ಸುಂದರ್‌, ಸಂಸದ ಪಿ.ಸಿ.ಮೋಹನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು