ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ಚಿಯ ಮರ್ಜಿ ಮರೆತ ಬಿಎಸ್‌ವೈ: ವಿಧಾನಪರಿಷತ್‌ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌

ವಿಧಾನಪರಿಷತ್‌ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್‌ ಕಿಡಿ l ಸಿ.ಪಿ. ಯೋಗೇಶ್ವರ್‌ ವಿರುದ್ಧವೂ ಟೀಕೆ
Last Updated 1 ಡಿಸೆಂಬರ್ 2020, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸೇರಿದಂತೆ ಯಾರ‌ ಮರ್ಜಿಯಲ್ಲಿ ಯಾರ್ಯಾರು ಕುರ್ಚಿ ಮೇಲೆ ಕುಳಿತಿದ್ದಾರೆ ಎನ್ನುವುದನ್ನು ಕೆಲವರು ಮರೆತಿದ್ದಾರೆ’ ಎಂದು ವಿಧಾನಪರಿಷತ್‌ ಬಿಜೆಪಿ ಸದಸ್ಯ ಎ.ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಹೊಳೆ ದಾಟುವ ತನಕ ಅಂಬಿಗ ಗಂಡ. ಹೊಳೆ ದಾಟಿದ ಮೇಲೆ ಅಂಬಿಗ. . . ಎನ್ನುವ ಪರಿಸ್ಥಿತಿ ಈಗ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡುವುದು ಖಚಿತ’ ಎಂದು ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ‘ನನಗೆ ಹುಣಸೂರು ಟಿಕೆಟ್ ಕೊಡುವ ಮೊದಲೇ ಅಲ್ಲಿಗೆ ಬಂದು ತಾನೇ ಅಭ್ಯರ್ಥಿ ಎಂದು ಹೇಳಿ ಯೋಗೇಶ್ವರ್ ಗೊಂದಲ ಮಾಡಿದರು. ಯೋಗೇಶ್ವರ್‌ ಮತ್ತು ಎನ್‌.ಆರ್‌. ಸಂತೋಷ್‌ ಮೂಲಕ ಯಡಿಯೂರಪ್ಪ ನನಗೆ ಕಳುಹಿಸಿಕೊಟ್ಟ ಹಣ ಅಲ್ಲಿಗೆ ಬರಲೇ ಇಲ್ಲ. ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಹೊರಟ ಇಂಥವರನ್ನು ನಂಬಿ ಸಚಿವ ಸ್ಥಾನ ಹೇಗೆ ಕೊಡುತ್ತೀರಿ’ ಎಂದು ಪ್ರಶ್ನಿಸಿದರು.

‘ಈ ಬಗ್ಗೆ ಪಕ್ಷದ ಅಧ್ಯಕ್ಷ ಕಟೀಲ್‌ಗೂ ಮಾಹಿತಿ ನೀಡಿದ್ದೇನೆ. ಮುಖ್ಯಮಂತ್ರಿಗೂ ಎಲ್ಲ ಗೊತ್ತಿದೆ’ ಎಂದರು.

‘ನನ್ನ ಅನರ್ಹತೆ ಬಗ್ಗೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇನೆ’ ಎಂದ ಅವರು, ‘ನಮ್ಮಿಂದ ಸರ್ಕಾರ ರಚನೆ ಆಯಿತು. ಆದರೆ, ಅವರು (ಬಿಜೆಪಿಯವರು) ನಮ್ಮ ಕಷ್ಟ ಕಾಲದಲ್ಲಿ ಬರಲಿಲ್ಲ.
ನನ್ನನ್ನು ಯಾಕೆ ಬಳಸಿಕೊಳ್ಳಲು ಹಿಂಜರಿತ.ಎಲ್ಲವನ್ನೂ ಎದುರಿಸಿ ನಿಲ್ಲುತ್ತೇನೆ’ ಎಂದರು.

‘ಬಿಜೆಪಿ ಪ್ರಮುಖರ ಸಮಿತಿ ಸಭೆ ಜೂನ್‌ನಲ್ಲಿ ಪರಿಷತ್‌ಗೆ ನನ್ನ ಹೆಸರೂ ಸೇರಿಸಿ ನಾಲ್ವರ ಹೆಸರು ಕಳುಹಿಸಿತ್ತು. ಪಟ್ಟಿ ಬರುವಾಗ ನನ್ನ ಹೆಸರು ಇರಲಿಲ್ಲ.ಯಾಕೆ ಎಂದು ನಾನು ಬಿಜೆಪಿ ನಾಯಕರಲ್ಲಿ ಕೇಳಿದೆ. ನಿಮ್ಮನ್ನು ನಾಮನಿರ್ದೇಶನ ಮಾಡುತ್ತೇವೆ ಅಂದರು. ಪರಿಷತ್ ಚುನಾವಣೆ ವೇಳೆ ನನ್ನ ಹೆಸರು ಯಾಕೆ ತೆಗೆದರೊ ಗೊತ್ತಿಲ್ಲ’ ಎಂದರು.

ಯೋಗೇಶ್ವರ್‌ಗೆ ಸಚಿವ ಸ್ಥಾನ: ಯಡಿಯೂರಪ್ಪ

‘ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಅವರನ್ನು ನೂರಕ್ಕೆ ನೂರರಷ್ಟು ಮಂತ್ರಿ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

‘ಯೋಗೇಶ್ವರ್‌ ಪರ ಬ್ಯಾಟಿಂಗ್‌ ಮಾಡುವವರು ಸಚಿವ ಸ್ಥಾನ ತ್ಯಾಗಮಾಡಲಿ’ ಎಂದು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಯೋಗೇಶ್ವರ್‌ ಅವರನ್ನು ಸಚಿವ ಮಾಡುವುದು ಖಚಿತ’ ಎಂದರು.

ಆದರೆ, ಎಚ್‌. ವಿಶ್ವನಾಥ್‌ ಅನರ್ಹತೆಯ ಬಗ್ಗೆ ಹೈಕೋರ್ಟ್ ನೀಡಿದ ಆದೇಶದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯನವರ ಪುಣ್ಯತಿಥಿ ಅಂಗವಾಗಿ ವಿಧಾನಸೌಧದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮುಖ್ಯಮಂತ್ರಿ, ಸುದ್ದಿಗಾರರ ಜತೆ ಮಾತನಾಡಿದರು.

‘ವಿಶ್ವನಾಥ್ ವಿಚಾರ; ಮತ್ತೊಮ್ಮೆ ಪ್ರಯತ್ನ’

ಬೀರೂರು (ಚಿಕ್ಕಮಗಳೂರು): ‘ನಾವು ಅಡಗೂರು ಎಚ್‌.ವಿಶ್ವನಾಥ್‌ ಪರವಾಗಿ ಇದ್ದೇವೆ, ಜತೆ ಬಂದವರಿಗೆ ಬೆನ್ನಿಗೆ ಚೂರಿ ಹಾಕಲ್ಲ. ಕೋರ್ಟ್‌ ತೀರ್ಮಾನಕ್ಕೆ ನಾವು ಹೊಣೆಯಾಗಲು ಸಾಧ್ಯ ಇಲ್ಲ’ ಎಂದು ಸಂಸದೀಯ ಸಚಿವ ಜಿ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಶ್ವನಾಥ್‌ ಅವರು ಚುನಾವಣೆಯಲ್ಲಿ ಸೋತಿದ್ದಾರೆ, ನಾಮನಿರ್ದೇಶನ ಮೂಲಕ ವಿಧಾನ ಪರಿಷತ್‌ ಸದಸ್ಯರಾಗಿದ್ದಾರೆ. ಈ ಅಂಶದಲ್ಲಿ ಸ್ವಲ್ಪ ಜಿಜ್ಞಾಸೆ ಇದೆ. ಅವರ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಮತ್ತು ಅಡ್ವೊಕೇಟ್‌ ಜನರಲ್‌ ಎಲ್ಲ ಪ್ರಯತ್ನ ಮಾಡಿದ್ದೇವೆ. ಯಾವುದೇ ಚ್ಯುತಿಯಾಗಿಲ್ಲ. ಮತ್ತೊಮ್ಮೆ ಪ್ರಯತ್ನ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ವಿಶ್ವನಾಥ್‌ ಪರ ಪಕ್ಷ ಇದೆ’

ಕೊಳ್ಳೇಗಾಲ: ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಗೊಂಡಿರುವ ಅಡಗೂರು ಎಚ್‌.ವಿಶ್ವನಾಥ್‌ ಪರವಾಗಿ ಪಕ್ಷ ಮತ್ತು ಸರ್ಕಾರ ನಿಂತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹಾಗೂ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕೊಳ್ಳೇಗಾಲದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶೋಕ, ‘ಹೈಕೋರ್ಟ್‌ ಆದೇಶದಿಂದ ವಿಶ್ವನಾಥ್‌ ಅವರು ಧೃತಿಗೆಡು
ವುದು ಬೇಡ. ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪಿನ ಪ್ರಕಾರ, ಹೈಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ ಎಂದು ವಕೀಲರು ಹೇಳಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪಕ್ಷ ತೀರ್ಮಾನಿಸಿದೆ’ ಎಂದರು.

‘ಕೋರ್ಟ್‌ನಲ್ಲಿ ಹಿನ್ನಡೆಯಾಗಿರುವುದರಿಂದ, ವಕೀಲರು ಸರಿಯಾಗಿ ವಾದ ಮಂಡಿಸಲಿಲ್ಲ ಎಂದು ನೋವಿನಿಂದ ಎಚ್.ವಿಶ್ವನಾಥ್ ಮಾತನಾಡಿದ್ದಾರೆ. ಆದರೆ, ನಮ್ಮ ವಕೀಲರು ಉತ್ತಮವಾಗಿ ವಾದ ಮಂಡಿಸಿದ್ದಾರೆ’ ಎಂದರು.

ಇದೇ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿ.ವೈ.ವಿಜಯೇಂದ್ರ, ‘ಹೈಕೋರ್ಟ್‌ ಮಧ್ಯಂತರ ಆದೇಶ ಆಘಾತ ತಂದಿದೆ. ಪಕ್ಷವನ್ನು ನಂಬಿ ಬಂದವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾವಾಗಲೂ ಬೆಂಬಲ ಕೊಟ್ಟಿದ್ದಾರೆ’ ಎಂದರು.

‘ಚಾಮುಂಡಿ ತಾಯಿ ಶಿಕ್ಷೆ ಕೊಡಿಸಿದ್ದಾಳೆ’:

ಮೈಸೂರು: ‘ವಿಧಾನ ಪರಿಷತ್‌ ಸದಸ್ಯ ವಿಶ್ವನಾಥ್ ಮಂತ್ರಿಯಾಗಬಾರದೆಂದು, ಬಿಜೆಪಿಯ ಸಚಿವ ಸ್ಥಾನದ ಆಕಾಂಕ್ಷಿಯೊಬ್ಬರು ನಡೆಸಿದ ತಂತ್ರದ ಭಾಗವಾಗಿಯೇ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಈಗ ತೀರ್ಪು ಬಂದಿದೆ’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಮಂಗಳವಾರ ಇಲ್ಲಿ ಹೇಳಿದರು.

‘ಬಿಜೆಪಿ ಮುಖಂಡರು ಈಗ ಮೇಲ್ನೋಟಕ್ಕೆ, ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಲು ಸಿದ್ಧತೆ ನಡೆದಿತ್ತು ಎನ್ನುತ್ತಿದ್ದಾರೆ. ಆದರೆ, ಒಳಗೊಳಗೆ ಖುಷಿ ಪಡುತ್ತಿದ್ದಾರೆ. ಮಂತ್ರಿ ಮಾಡುವ ಉದ್ದೇಶವಿದ್ದರೆ ನಾಮನಿರ್ದೇಶನ ಮಾಡುವ ಬದಲು ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆ ಮಾಡಬಹುದಿತ್ತು’ ಎಂದರು. ‘ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ನಡೆದು ಸರಿಯಾಗಿ ಒಂದು ವರ್ಷಕ್ಕೆ ಸತ್ಯ ಯಾವುದು ಎಂಬುದು ತೀರ್ಮಾನವಾಗಿದೆ. ಜೆಡಿಎಸ್‌ ಕಾರ್ಯಕರ್ತರಿಗೆ ದ್ರೋಹ ಬಗೆದ ವಿಶ್ವನಾಥ್‌ ಅವರಿಗೆ ಚಾಮುಂಡಿ ತಾಯಿ ಶಿಕ್ಷೆ ಕೊಡಿಸಿದ್ದಾಳೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT