ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ವಿಲೇವಾರಿ: ಗ್ರಾಮೀಣ ಮಹಿಳೆಯರ ಕೈಚಳಕ- ಮಹಿಳಾ ದಿನದ ವಿಶೇಷ

ದಾವಣಗೆರೆ ಜಿಲ್ಲೆ ಚೀಲೂರು ಘಟಕ l ಮಹಿಳೆಯರಿಂದಲೇ ಕಸ ಸಂಗ್ರಹ ವಾಹನ ಚಾಲನೆ
Last Updated 8 ಮಾರ್ಚ್ 2022, 1:56 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿದ್ದು, ಇಲ್ಲಿ ಕಸ ನಿರ್ವಹಣೆಯನ್ನು ಮಹಿಳೆಯರೇ ಮಾಡುತ್ತಿದ್ದಾರೆ.

ಸ್ವಚ್ಛ ಭಾರತ್‌ ಅಭಿಯಾನದಲ್ಲಿ ಘನತ್ಯಾಜ್ಯ ನಿರ್ವಹಣೆಯೂ ಪ್ರಮುಖವಾಗಿದೆ. ಗ್ರಾಮೀಣ ಮಹಿಳೆಯರ ಬದುಕಿಗೆ ದಾರಿ ಕಲ್ಪಿಸುವ ಉದ್ದೇಶದಿಂದ ಈ ಘಟಕಗಳ ನಿರ್ವಹಣೆ ಹೊಣೆಯನ್ನು ಮಹಿಳೆಯರಿಗೇ ವಹಿಸಲು ತೀರ್ಮಾನಿಸಲಾಗಿದೆ. ಅದರಂತೆ, ಗ್ರಾಮ ಪಂಚಾಯಿತಿ ಮತ್ತು ಸಂಜೀವಿನಿ–ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಎನ್‌ಆರ್‌ಎಲ್‌ಎಮ್‌)ಯು ಸ್ಥಳೀಯ ಮಹಿಳಾ ಒಕ್ಕೂಟದ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ರಾಜ್ಯ ಘನ ಮತ್ತು ದ್ರವ ತ್ಯಾಜ್ಯ ಸಮಾಲೋಚಕ ಪಿಸೆ ಮಂಜುನಾಥ್‌ ತಿಳಿಸಿದ್ದಾರೆ.

ಮಾದರಿ ಘಟಕ: ‘ದಾವಣಗೆರೆಯ ಚೀಲೂರು ಘಟಕದ ಮಹಿಳೆಯರು ತ್ಯಾಜ್ಯ ನಿರ್ವಹಣೆ ಜತೆಗೆ ಘಟಕದ ಆವರಣದಲ್ಲಿ ಕೈತೋಟವನ್ನೂ ನಿರ್ಮಿಸಿದ್ದಾರೆ. ಅಡುಗೆ ಎಣ್ಣೆ ಕವರ್‌, ಪ್ಲಾಸ್ಟಿಕ್‌ ಕವರ್‌, ಹಾಲಿನ ಕವರ್‌ಗಳನ್ನು ಬಳಸಿಕೊಂಡು ಅಡಿಕೆ ಸಸಿ, ಹಣ್ಣಿನ ಸಸಿಗಳನ್ನು ಬೆಳೆಸಿದ್ದಾರೆ. ತರಕಾರಿ, ಸೊಪ್ಪು ಬೆಳೆದು ಮಾರಾಟ ಮಾಡುವ ಮೂಲಕ ಘಟಕದ ಆದಾಯ ಹೆಚ್ಚಿಸಲು ಸಹಕಾರಿಯಾಗಿದ್ದಾರೆ. ಆಲಂಕಾರಿಕ ವಸ್ತುಗಳನ್ನೂ ತಯಾರಿಸಿದ್ದಾರೆ. ಹಸಿ ತ್ಯಾಜ್ಯದಿಂದ ಗೊಬ್ಬರ ಮಾಡುತ್ತಿದ್ದಾರೆ. ಸ್ಯಾನಿಟರಿ ನ್ಯಾಪ್‌ಕಿನ್‌ ಸುಡುವ ಯಂತ್ರಗಳನ್ನೂ ಇಲ್ಲಿ ಸ್ಥಾಪಿಸಲಾಗಿದೆ. ವಿವಿಧ ಗ್ರಾಮ ಪಂಚಾಯಿತಿಗಳಿಂದ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಎನ್‌ಆರ್‌ಎಲ್‌ಎಂ ದಾವಣಗೆರೆ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಎನ್‌.ಎಂ. ಭೋಜರಾಜ್‌, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಜಿಲ್ಲಾ ಸಮಾಲೋಚಕ ಪುರುಷೋತ್ತಮ ಕೆ. ಮತ್ತು ಶುಚಿತ್ವ ಮತ್ತು ನೈರ್ಮಲ್ಯ ಜಿಲ್ಲಾ ಸಮಾಲೋಚಕ ಕೆ.ಎಸ್‌. ಚಂದ್ರಶೇಖರ್‌.

ಧರ್ಮಸ್ಥಳಕ್ಕೆ ಬರುವ ಯಾತ್ರಿಗಳು ಘಾಟಿಯಲ್ಲಿ ಬಿಸಾಡುವ ತ್ಯಾಜ್ಯವನ್ನು ಆಯ್ದು ತಂದುದಕ್ಷಿಣ ಕನ್ನಡ ಜಿಲ್ಲೆ ಚಾರ್ಮಾಡಿ ಗ್ರಾಮ ಪಂಚಾಯಿತಿ ಘಟಕದ ಮಹಿಳೆಯರು ಬೇರ್ಪಡಿಸುತ್ತಿದ್ದಾರೆ. ಮರುಬಳಕೆಯ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಬಡಗಬೆಟ್ಟು, ತೆಂಕ ನಿಡಿಯೂರು, ಹೆಜಮಾಡಿ, ಮೂಡಾರು, ಕೊಕ್ಕರ್ಣೆ, ಕೆಮ್ಮಣ್ಣು, ವಂಡ್ಸೆ ಸೇರಿ ಹಲವು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಘಟಕಗಳು ಗ್ರಾಮ ಪಂಚಾಯಿತಿಯಿಂದ ಬಿಡಿಗಾಸು ಪಡೆಯದೆ ಸಂಪೂರ್ಣ ಆರ್ಥಿಕ ಸ್ವಾವಲಂಬನೆ ಸಾಧಿಸಿರುವುದು ವಿಶೇಷ.

ಸಮಗ್ರ ತ್ಯಾಜ್ಯ ವಿಲೇವಾರಿ: ಗ್ರಾಮೀಣ ಭಾಗಗಳಲ್ಲಿ ಸಂಗ್ರಹವಾಗುವ ಒಣ ಕಸವನ್ನು ಮತ್ತೆ ಸಮಗ್ರವಾಗಿ ವಿಲೇವಾರಿ ಮಾಡಲು ಬಳ್ಳಾರಿ, ದಕ್ಷಿಣ ಕನ್ನಡ, ರಾಮನಗರ ಉಡುಪಿಗಳಲ್ಲಿ ಸಮಗ್ರ ತ್ಯಾಜ್ಯ ವಿಲೇವಾರಿ ಘಟಕ (ಎಂಆರ್‌ಎಫ್‌) ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ರಾಜ್ಯದ ಮೊದಲ ಎಂಆರ್‌ಎಫ್‌ ಘಟಕ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ನಿಟ್ಟೆಯಲ್ಲಿ ಕಾರ್ಯಾರಂಭ ಮಾಡಿದೆ. ಎಂಆರ್‌ಎಫ್ ಘಟಕದ ಹಲವು ವಿಭಾಗಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

----

ಮೂಲಸೌಲಭ್ಯ, ಸಂಬಳಕ್ಕೆ ಮನವಿ‌

ಕೆಲವು ಘಟಕಗಳಲ್ಲಿ ನೀರಿನ ಸೌಲಭ್ಯ ಇಲ್ಲ. ಮಾಸ್ಕ್‌, ಗ್ಲೌಸ್‌, ಕೂರಲು ಮಣೆ, ಕೈತೊಳೆಯಲು ಸೋಪ್‌ ಸೇರಿ ಅಗತ್ಯ ಸಲಕರಣೆಗಳಿಲ್ಲ. ಕೆಲಸ ಆರಂಭಿಸಿ ಎಂಟು ತಿಂಗಳಾದರೂ ಸಂಬಳ ಸಿಕ್ಕಿಲ್ಲ. ಕೆಲ ಜನರು ತ್ಯಾಜ್ಯ ಶುಲ್ಕ ₹ 20 ನೀಡಿದರೆ, ಮತ್ತೆ ಕೆಲವರು ನೀಡುತ್ತಿಲ್ಲ. ಘಟಕಗಳು ಆರ್ಥಿಕ ಸ್ವಾವಲಂಬನೆ ಸಾಧಿಸುವವರೆಗೆ ಗ್ರಾಮ ಪಂಚಾಯಿತಿ ನೆರವು ನೀಡಬೇಕು. ಆದರೆ, ಕೆಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ.

ವಾಹನ ಚಾಲಕಿಯರು

ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ಮಹಿಳೆಯರನ್ನೇ ಚಾಲಕರಾಗಿ ನೇಮಿಸಲು ನೂರಾರು ಮಹಿಳೆಯರಿಗೆ ವಾಹನ ಚಾಲನಾ ತರಬೇತಿ ನೀಡಿದೆ. ದಾವಣಗೆರೆಯ ಪಲ್ಲಾಗಟ್ಟೆ, ಉಡುಪಿಯ ಮುಡಾರು, ಪಾಂಡೇಶ್ವರ, ಕೊಕ್ಕರ್ಣೆ ಗ್ರಾಮ ಪಂಚಾಯಿತಿಗಳಲ್ಲಿ ಮಹಿಳೆಯರೇ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

***

ಗ್ರಾಮೀಣ ಪ್ರದೇಶದಲ್ಲಿ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ನರೇಗಾ ಅಡಿ ವೇತನ ನೀಡುವ ಬಗ್ಗೆ ಚರ್ಚೆ ನಡೆದಿದೆ.

-ಡಾ.ವಿಜಯ ಮಹಾಂತೇಶ ದಾನಮ್ಮನವರ,ಸಿಇಒ,ಜಿ.ಪಂ, ದಾವಣಗೆರೆ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT