ಸೋಮವಾರ, ಜುಲೈ 4, 2022
20 °C
ಪ್ರಗತಿಯಲ್ಲಿರುವ ಯೋಜನೆ ಪೂರ್ಣಗೊಳಿಸಲು ₹1 ಲಕ್ಷ ಕೋಟಿ ಹಣ ಬೇಕು– ಕಾರಜೋಳ

ನೀರಾವರಿ ಕಾಮಗಾರಿ: ಬಿಲ್‌ ಬಾಕಿ ₹9,980.95 ಕೋಟಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನೀರಾವರಿ ಇಲಾಖೆಯ ಅಡಿಯಲ್ಲಿರುವ ನಾಲ್ಕೂ ನಿಗಮಗಳಡಿಯಲ್ಲಿ ಮುಂದುವರಿದ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ ಬಾಕಿ ಪಾವತಿಗೆ ₹ 9,980.95 ಕೋಟಿ ಅಗತ್ಯವಿದೆ. ಪ್ರಗತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸಲು ₹ 1 ಲಕ್ಷ ಕೋಟಿ ಹಣ ಬೇಕು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಬಿ.ಎಂ. ಫಾರೂಕ್‌ ಅವರ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ‘2021–22ನೇ ಸಾಲಿನಲ್ಲಿ ಪರಿಷ್ಕೃತ ಅಂದಾಜು ವೆಚ್ಚವಾಗಿ ನಾಲ್ಕೂ ನಿಗಮಗಳಿಗೆ ಒಟ್ಟು ₹17,410.28 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಆ ಪೈಕಿ, ಜನವರಿ ಅಂತ್ಯಕ್ಕೆ ₹ 10,967.47 ಕೋಟಿ ಬಿಡುಗಡೆಯಾಗಿದ್ದು, ₹ 10,824.74 ಕೋಟಿ ವೆಚ್ಚವಾಗಿದೆ’ ಎಂದರು.

‘₹ 50 ಲಕ್ಷದೊಳಗಿನ ಕಾಮಗಾರಿ ನಿರ್ವಹಿಸಿದ ಸಣ್ಣ ಗುತ್ತಿಗೆದಾರರಿಗೆ ಆದ್ಯತೆ ನೀಡಿ ಬಾಕಿ ಬಿಲ್‌ಗಳನ್ನು ಪಾವತಿಸಲಾಗುತ್ತದೆ’ ಎಂದರು.

‘ಯೋಜನೆಯ ವಿಸ್ತೃತ ಯೋಜನಾ ವರದಿಯಲ್ಲಿ ಪ್ರಸ್ತಾಪಿಸಿದ ಒಟ್ಟು ವೆಚ್ಚವನ್ನು ಬಜೆಟ್‌ನಲ್ಲಿ ಒಂದಾವರ್ತಿ ನೀಡಿದರೆ ಸಮಸ್ಯೆ ಆಗುವುದಿಲ್ಲ. ಆದರೆ, ಯೋಜನೆ ಪ್ರಸ್ತಾವ ಆಗುತ್ತಿದ್ದಂತೆ ಸ್ವಲ್ಪ ಭಾಗವನ್ನು ಟೋಕನ್ ಮೊತ್ತವಾಗಿ ನೀಡಲಾಗುತ್ತದೆ. ನಂತರ ಹಂತ ಹಂತವಾಗಿ ಮೂರು ವರ್ಷಕ್ಕೆ ಯೋಜನಾ ವೆಚ್ಚ ಪಾವತಿಸುವ ಸಂಪ್ರದಾಯವನ್ನು ಇಲಾಖೆ ರೂಢಿಸಿಕೊಂಡು ಬಂದಿದೆ. ಇದರಿಂದ ಯೋಜನೆಗಳು ನನೆಗುದಿಗೆ ಬೀಳುತ್ತಿವೆ’ ಎಂದು ವಿವರಿಸಿದರು.

‘ಇಲಾಖೆಯಲ್ಲಿ 2013ರಿಂದಲೂ ಹಲವು ಬಿಲ್‌ಗಳು ಬಾಕಿ ಉಳಿದಿವೆ. ಕಳೆದ ಎರಡು ವರ್ಷದಲ್ಲಿ ಕೋವಿಡ್‌ ಕಾರಣದಿಂದ ಬಾಕಿ ಬಿಲ್‌ಗಳು ಹೆಚ್ಚು ಉಳಿದಿವೆ. ಮುಂದಿನ ದಿನಗಳಲ್ಲಿ ಸಂಪನ್ಮೂಲ ಕ್ರೋಡೀಕರಿಸಿ ಬಾಕಿ ಬಿಲ್ ಪಾವತಿಸಲು ಮತ್ತು ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು