ಶನಿವಾರ, ಮೇ 28, 2022
21 °C
ವರ್ಚುವಲ್‌ ಸಭೆ

ನೀರಾವರಿ ಯೋಜನೆಗಳ ವ್ಯಾಜ್ಯ ಶೀಘ್ರ ಬಗೆಹರಿಸಿಕೊಳ್ಳಲು ಸಭೆ– ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶದ ನೀರಾವರಿ ಯೋಜನೆಗಳಲ್ಲಿನ ಸಮಸ್ಯೆಗಳು ಮತ್ತು ನ್ಯಾಯಾಲಯಗಳಲ್ಲಿ ಇರುವ ವ್ಯಾಜ್ಯಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಲು ಗಂಭೀರ ಯತ್ನ ಮಾಡಬೇಕೆಂಬ ಉದ್ದೇಶದಿಂದ, ಈ ವಿಚಾರಗಳ ಕುರಿತು ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಸಭೆ ಕರೆದಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಬೆಳಿಗ್ಗೆ ಮಾತನಾಡಿದ ಅವರು, ‘ಕೋವಿಡ್‌ ಇರುವುದರಿಂದ ವರ್ಚುವಲ್‌ ಸಭೆ ಆಯೋಜಿಸಲಾಗಿದೆ. ನ್ಯಾಯಾಲಯಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲರು ದೆಹಲಿಯಿಂದ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಅಡ್ವೊಕೇಟ್‌ ಜನರಲ್‌, ನೀರಾವರಿ ತಾಂತ್ರಿಕ ತಜ್ಞರು ಕೂಡಾ ಭಾಗವಹಿಸುತ್ತಾರೆ’ ಎಂದರು.

‘ನೀರಾವರಿ ವಿಷಯದಲ್ಲಿ ಕರ್ನಾಟಕ ಮಧ್ಯಸ್ತರದ ರಾಜ್ಯ. ಹೀಗಾಗಿ ನಮ್ಮ ಮೇಲಿರುವ ಮತ್ತು ಕೆಳಗಿರುವ ರಾಜ್ಯಗಳು ಆಗಾಗ ಈ ವಿಚಾರದಲ್ಲಿ ವಿವಾದಗಳನ್ನು ಮಾಡುತ್ತಲೇ ಇವೆ. ಕೃಷ್ಣ ಮತ್ತು ಕಾವೇರಿ ಎರಡರದ್ದೂ ನ್ಯಾಯ ಮಂಡಳಿಗಳ ತೀರ್ಪು ಬಂದಿದೆ. ಕೃಷ್ಣದ್ದು ಮೊದಲನೆಯದು ಬಚಾವತ್‌ ತೀರ್ಪು. ಎರಡನೇಯದ್ದು ಬೃಜೇಶ್‌ ಮಿಶ್ರಾ ತೀರ್ಪು. ಈ ತೀರ್ಪು ವಿಚಾರದಲ್ಲಿ ಅಧಿಸೂಚನೆ ಪ್ರಕಟ ಆಗಬೇಕಿದೆ. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿದೆ. ಮಹದಾಯಿ ವಿಯಷದಲ್ಲಿ ತೀರ್ಪು ಬಂದರೂ, ಕರ್ನಾಟಕವೂ ಸೇರಿ ಮೂರೂ ರಾಜ್ಯಗಳ ತಕರಾರು ಸುಪ್ರೀಂ ಕೋರ್ಟ್‌ನಲ್ಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನ್ಯಾಯಮಂಡಳಿಯಿಂದ ಆದೇಶ ಬಂದಿದ್ದರೂ, ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ದೂರು ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಎಲ್ಲ ವಿಚಾರಗಳನ್ನು ಬಗೆಹರಿಸಿಕೊಳ್ಳುವ ಮತ್ತು ಪ್ರಗತಿ ಬಗ್ಗೆ ಈಗಾಗಲೇ ದೆಹಲಿ ಮಟ್ಟದಲ್ಲಿ ಕೆಲವು ಸಭೆ ಮಾಡಿದ್ದೇವೆ’ ಎಂದರು.

ಒತ್ತಡದ ಕಾರಣಕ್ಕೆ ವಾರಾಂತ್ಯ ಕರ್ಫ್ಯೂ ಹಿಂತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ, ‘ಆ ರೀತಿ ಇಲ್ಲ. ಮೂರನೇ ಅಲೆಯಲ್ಲಿ ಸೋಂಕು ಸಂಖ್ಯೆ ಹೆಚ್ಚಿದ್ದರೂ ತೀವ್ರತೆ ಕಡಿಮೆಯಿದೆ. ಚೇತರಿಕೆ ಪ್ರಮಾಣ ಬಹಳ ಹೆಚ್ಚಿದೆ. ನಮ್ಮ ತಜ್ಞರು ಮತ್ತು ಅಧಿಕಾರಿಗಳು ಸೋಂಕು ಹೆಚ್ಚಳವನ್ನು ಯಾವ ರೀತಿ ನಿರ್ವಹಿಸಬಹುದು ಎಂದು ಭರವಸೆ ನೀಡಿದ್ದರಿಂದ ಮತ್ತು ನಿತ್ಯ ದುಡಿಯುವ ವರ್ಗಕ್ಕೆ ತೊಂದರೆ ಆಗುತ್ತಿರುವುದನ್ನು ಗಮನಿಸಿಕೊಂಡು, ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸಲು ಉದ್ದೇಶಿಸಿದ್ದೇವೆ. ಜೀವ ಉಳಿಯಬೇಕು. ಜೀವನವೂ ನಡೆಯಬೇಕು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ಎಂದರು.

ಯಾವುದೇ ತೀರ್ಮಾನ ಆಗಿಲ್ಲ: ‘ನೀರು, ಹಾಲು, ವಿದ್ಯುತ್ ದರ ಹೆಚ್ಚಿಸುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಈ ವಿಚಾರಗಳಲ್ಲಿ ಅವಸರದ ತೀರ್ಮಾನವೂ ಇಲ್ಲ. ಎಲ್ಲ ಆಯಾಮಗಳನ್ನು ಯೋಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು‘ ಎಂದೂ ಮುಖ್ಯಮಂತ್ರಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು