ಮಂಗಳವಾರ, ಮಾರ್ಚ್ 28, 2023
32 °C
ಶೂನ್ಯ ಬಡ್ಡಿ ದರದಲ್ಲಿ ₹ 19, 370 ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡುವ ಗುರಿ

ಪ್ರಸಕ್ತ ವರ್ಷದಲ್ಲಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ: ಸಿಎಂ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ ಸಂಕಷ್ಟದ ಕಾರಣಕ್ಕೆ ಪ್ರಸಕ್ತ ಸಾಲಿನಲ್ಲಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶದ ಹೊಂದಲಾಗಿದ್ದು, 30.26 ಲಕ್ಷ  ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹ 19,370 ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

’ರೈತರಿಗೆ ಮತ್ತು ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ವಿತರಿಸುವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ‘60 ಲಕ್ಷ ರೈತರಿಗೆ ಶೇ 3 ಬಡ್ಡಿ ದರದಲ್ಲಿ ₹ 1,440 ಕೋಟಿ ಮಧ್ಯಮಾವಧಿ, ದೀರ್ಘವಾಧಿ ಸಾಲ ವಿತರಿಸಲು ಗುರಿ ಹೊಂದಲಾಗಿದೆ’ ಎಂದೂ ತಿಳಿಸಿದರು.

‘ಅಲ್ಲದೆ, 2021–22ನೇ ಸಾಲಿನಲ್ಲಿ 40 ಲಕ್ಷ ಸ್ತ್ರೀ ಶಕ್ತಿ ಗುಂಪುಗಳಿಗೆ ₹ 1,400 ಕೋಟಿ ಸಾಲ ಗುರಿ ಹೊಂದಲಾಗಿದೆ. ಮೇ ಅಂತ್ಯಕ್ಕೆ 6,700 ಗುಂಪುಗಳಿಗೆ ₹ 233. 33 ಕೋಟಿ ಸಾಲ ವಿರತರಿಸಲಾಗಿದೆ’ ಎಂದೂ ವಿವರಿಸಿದರು.

‘ರಾಜ್ಯದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಈವರೆಗೆ 2.50 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ರಚನೆ ಮಾಡಲಾಗಿದ್ದು, 32 ಲಕ್ಷ ಸದಸ್ಯರಿದ್ದಾರೆ. ಕಳೆದ ವರ್ಷ ಕೃಷಿ ಕ್ಷೇತ್ರದಲ್ಲಿ 25. 67 ಲಕ್ಷ ರೈತರಿಗೆ ₹ 16,451 ಕೋಟಿ ಅಲ್ಪಾವಧಿ ಸಾಲ, 52 ಸಾವಿರ ರೈತರಿಗೆ ₹ 1260.12 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸುವ ಗುರಿಗೆ ಎದುರಾಗಿ ಶೇ 114ರಷ್ಟು ಸಾಧನೆ ಮಾಡಲಾಗಿದೆ. 57 ಲಕ್ಷ ರೈತರಿಗೆ ಹೈನುಗಾರಿಕೆಗೆ ₹ 105.64 ಕೋಟಿ ಸಾಲ ನೀಡಲಾಗಿದೆ’ ಎಂದರು.

‘ಕೋವಿಡ್‌ ಕಾರಣಕ್ಕೆ ರೈತರ ಮತ್ತು  ಸ್ವಸಹಾಯ ಸಂಘಗಳ ಸಮಸ್ಯೆಯನ್ನು ಮನಗಂಡು, ಸಾಲ ಮರು ಪಾವತಿ ಅವಧಿಯನ್ನು  ಮೂರು ತಿಂಗಳ ಅವಧಿಗೆ ವಿಸ್ತರಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದರಿಂದ 6.17 ಲಕ್ಷ ರೈತರು 65,500 ಸ್ವಸಹಾಯ ಸಂಘಗಳು 8.15 ಸದಸ್ಯರಿಗೆ ಅನುಕೂಲ ಆಗಿದೆ’ ಎಂದೂ ತಿಳಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ಸಹಕಾರಿ ಸಂಘಗಳು ₹ 4.62‌ ಕೋಟಿಯ ವೈದ್ಯಕೀಯ ಸಲಕರಣೆಗಳು, ಆಂಬುಲೆನ್ಸ್‌, ಆಹಾರ ಕಿಟ್‌ ಉಚಿತವಾಗಿ ನೀಡಿವೆ. ಅಲ್ಲದೆ, ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 58 ಕೋಟಿ ದೇಣಿಗೆ ನೀಡಿ ಸಾಮಾಜಿಕ ಕಳಕಳಿ ಮೆರೆದಿದೆ’ ಎಂದೂ ಶ್ಲಾಘಿಸಿದರು.

‘ನಮ್ಮದು ರೈತಪರ ಸರ್ಕಾರ. ಕೃಷಿ, ಆರೋಗ್ಯ ಮತ್ತು ಶಿಕ್ಷಣ ನಮ್ಮ ಸರ್ಕಾರದ ಆದ್ಯತೆಯ ಕ್ಷೇತ್ರಗಳು. ಎಲ್ಲರಿಗೂ ನಾನು,ನನಗಾಗಿ ಎಲ್ಲರೂ ಎಂಬ ಸಹಕಾರಿ ತತ್ವದಡಿ ಸ್ವಾಲಂಬಿ ಜೀವನ ನಡೆಸಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಕೊರತೆ ಇಲ್ಲ’ ಎಂದೂ ಮುಖ್ಯಮಂತ್ರಿ ತಿಳಿಸಿದರು.

ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು