ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ರಚನೆಗೆ ಕಾರಣ ಯಾರು?: ರೇಣುಕಾಚಾರ್ಯ– ಎಂಟಿಬಿ ವಾಗ್ವಾದ

105 ಶಾಸಕರೋ 17ವಲಸಿಗ ಶಾಸಕರೋ
Last Updated 25 ನವೆಂಬರ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಸರ್ಕಾರ ರಚನೆಗೆ ಕಾರಣರು ಯಾರು ಎಂಬ ವಾಗ್ವಾದಕ್ಕೆ ನಾಂದಿ ಹಾಡಿರುವ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ‘ಬಿಜೆಪಿ 105 ಶಾಸಕರು ಇಲ್ಲದಿದ್ದರೆ ಸರ್ಕಾರದ ರಚನೆಯೇ ಆಗುತ್ತಿರಲಿಲ್ಲ’ ಎಂದು ವಲಸಿಗರ ವಿರುದ್ಧ ಹರಿಹಾಯ್ದಿದ್ದಾರೆ.

ವಿಧಾನಸೌಧದಲ್ಲಿ ಅವರು ನೀಡಿದ ಹೇಳಿಕೆಗೆ ವಿಧಾನಪರಿಷತ್‌ನಬಿಜೆಪಿ ಸದಸ್ಯ ಎಂ.ಟಿ.ಬಿ.ನಾಗರಾಜ್‌ ಅವರು ತಿರುಗೇಟು ನೀಡಿದ್ದು, ‘105 ಶಾಸಕರು ಇದ್ದಾಗ ಸರ್ಕಾರ ರಚನೆ ಏಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದರು.

ರೇಣುಕಾಚಾರ್ಯ ಹೇಳಿದ್ದೇನು: ‘ರಾಜ್ಯದಲ್ಲಿ ಬಿಜೆಪಿಯ 105 ಶಾಸಕರು ಇರುವುದರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿದೆ. ನಮಗೆ 17 ಶಾಸಕರ ಬಗ್ಗೆ ಗೌರವವಿದೆ. ಪಕ್ಷದಲ್ಲಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನೂ ನೀಡಲಾಗಿದೆ. ಆದರೆ 105 ಜನ ಇಲ್ಲದಿದ್ದರೆ ಸರ್ಕಾರ ರಚನೆ ಆಗುತ್ತಿರಲಿಲ್ಲ ಎಂಬುದನ್ನು ಯಾರೂ ಮರೆಯಬಾರದು. ಜೆಡಿಎಸ್‌ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಂದವರಿಗೆ ಸ್ಥಾನಮಾನ ನೀಡಲಾಗಿದೆ’ ಎಂದು ರೇಣುಕಾಚಾರ್ಯ ಹೇಳಿದರು.

‘ಆದ್ದರಿಂದ ಯಾರೂ ನನ್ನಿಂದಲೇ ಸರ್ಕಾರ ಬಂದಿದೆ ಎಂದು ಹೇಳಿಕೊಳ್ಳಬಾರದು. 105 ಶಾಸಕರು ಮೊದಲು, ನಂತರ ಉಳಿದವರು. ಪಕ್ಷದ ರಾಷ್ಟ್ರೀಯ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಂಘಟನೆಯಿಂದಾಗಿ ಪಕ್ಷ ಅಧಿಕಾರಕ್ಕೆ ಬಂದಿದೆ’ ಎಂದು ಅವರು ತಿಳಿಸಿದರು.

ಎಂಟಿಬಿ ನಾಗರಾಜ್‌ ಹೇಳಿದ್ದೇನು?: ಇದಕ್ಕೆ ತಿರುಗೇಟು ನೀಡಿರುವ ಎಂ.ಟಿ.ಬಿ.ನಾಗರಾಜ್‌, ‘ಪಕ್ಷದಲ್ಲಿ 105 ಶಾಸಕರು ಇದ್ದಾಗ ಸರ್ಕಾರ ರಚನೆ ಮಾಡಲು ಏಕೆ ಸಾಧ್ಯವಾಗಲಿಲ್ಲ. 17 ಶಾಸಕರು ಬಂದಿದ್ದರಿಂದಲೇ ಸರ್ಕಾರ ರಚನೆ ಮಾಡಲು ಸಾಧ್ಯವಾಗಿದೆ ಎಂಬುದನ್ನು ಮರೆಯಬಾರದು. ನಾವೆಲ್ಲ ನಮ್ಮ ಹಿಂದಿನ ಪಕ್ಷಗಳಿಗೆ ರಾಜೀನಾಮೆ ನೀಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇವೆ. ಈಗ ನಾವೂ ಕೂಡ ಬಿಜೆಪಿಯವರೇ’ ಎಂದು ಹೇಳಿದರು.

105+17 ಸೇರಿ ಸರ್ಕಾರ ರಚನೆ: 105+17 ಸೇರಿಯೇ ಸರ್ಕಾರ ರಚನೆ ಆಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ದರಿಂದ ಇದಕ್ಕಾಗಿ ವಿಶೇಷ ಚರ್ಚೆ ನಡೆಸಬೇಕಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ತೇಪೆ ಹಚ್ಚಿದರು.

ರೇಣುಕಾಚಾರ್ಯ ಮನೆಯಲ್ಲಿ 10 ಶಾಸಕರ ಸಭೆ
‘ಇವತ್ತು ಬೆಳಿಗ್ಗೆ ನನ್ನ ಮನೆಯಲ್ಲಿ ಸುಮಾರು ಉಪಾಹಾರ ಸಭೆ ಮಾಡಿದೆವು,10 ಶಾಸಕರು ಇದ್ದರು. ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ರೆಸಾರ್ಟ್‌ ಅಥವಾ ಹೊಟೇಲ್‌ಗೆ ಹೋಗಲಿಲ್ಲ. ನಮ್ಮ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸುತ್ತೇವೆ’ ಎಂದು ರೇಣುಕಾಚಾರ್ಯ ಸುದ್ದಿಗಾರರಿಗೆ ತಿಳಿಸಿದರು.

ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಪಕ್ಷದ ನಾಯಕರಿಗೆ ತಿಳಿಸುತ್ತೇನೆ ಎಂಬ ರಮೇಶ ಜಾರಕಿಹೊಳಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅದು ಅವರ ವೈಯಕ್ತಿಕ ಅಭಿಪ್ರಾಯ. ಯಾರಿಗೆ ಸಚಿವ ಸ್ಥಾನ ನೀಡಬೇಕು ಅಥವಾ ನೀಡಬಾರದು ಎಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ನಾವು ನಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿಯವರಿಗೆ ಮತ್ತು ಪಕ್ಷದ ಅಧ್ಯಕ್ಷರಿಗೆ ತಿಳಿಸಿದ್ದೇವೆ’ ಎಂದು ಹೇಳಿದರು.

‘ಜನರಿಂದ ಆಯ್ಕೆ ಆದವರಿಗೇ ಸಚಿವ ಸ್ಥಾನ ನೀಡಬೇಕು ಎಂಬ ಹೇಳಿಕೆಗೆ ನಾವು ಈಗಲೂ ಬದ್ಧರಾಗಿದ್ದೇವೆ’ ಎಂದು ರೇಣುಕಾಚಾರ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT